ಈ ದಿನ ವಿಶೇಷ | ದಕ್ಷಿಣ ಕನ್ನಡ : ಮತದಾರರ ಪಟ್ಟಿಯಿಂದ 43 ಸಾವಿರ ಹೆಸರು ‘ಡಿಲೀಟ್'

Dakshina kannada
  • ಮಂಗಳೂರು ವಿಧಾನಸಭಾ (ಉಳ್ಳಾಲ) ಕ್ಷೇತ್ರವೊಂದರಲ್ಲೇ 16 ಸಾವಿರ ಹೆಸರು 'ಡಿಲೀಟ್'
  • 'ಒಂದೇ ಸಮುದಾಯದವರ ಹೆಸರನ್ನು ಡಿಲೀಟ್ ಮಾಡಿಲ್ಲ' ಎಂದ ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲೆಯ ಮತದಾನ ಕರಡು ಪಟ್ಟಿ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಸುಮಾರು 43 ಸಾವಿರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ 43 ಸಾವಿರದಲ್ಲಿ ಶಾಸಕ ಯು.ಟಿ. ಖಾದರ್ ಪ್ರತಿನಿಧಿಸುತ್ತಿರುವ ಮಂಗಳೂರು(ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲೇ ಸುಮಾರು 16 ಸಾವಿರ ಮತದಾರರ ಹೆಸರು 'ಡಿಲೀಟ್' ಆಗಿವೆ ಎಂದು ವರದಿಯಾಗಿದೆ.

2023ಕ್ಕೆ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಚುನಾವಣೆಗೆ ಪೂರ್ವಭಾವಿಯಾಗಿ ಮತದಾರರ ಕರಡು ಪಟ್ಟಿ ಪ್ರಕಟಿಸಿತ್ತು. ಯಾರದ್ದಾದರು ಹೆಸರು ಬಿಟ್ಟು ಹೋಗಿದ್ದಲ್ಲಿ 2022ರ ಡಿಸೆಂಬರ್ 8ರ ಒಳಗೆ ಅರ್ಜಿ ಸಲ್ಲಿಸಲೂ ಅವಕಾಶ ನೀಡಿತ್ತು. ಈ ವೇಳೆ ಕರಡು ಪಟ್ಟಿಯಲ್ಲಿ ಹಲವು ಹೆಸರುಗಳನ್ನು ತೆಗೆದು ಹಾಕಿರುವುದು ಬೆಳಕಿಗೆ ಬಂದಿದೆ.

Eedina App

ಮುಸ್ಲಿಂ ಪ್ರಾಬ್ರಲ್ಯವಿರುವ ಮಂಗಳೂರು ವಿಧಾನಸಭಾ (ಉಳ್ಳಾಲ) ಕ್ಷೇತ್ರದಲ್ಲಿಯೇ ಅತಿ ಹೆಚ್ಚು ಮತದಾರರ ಹೆಸರು ತೆಗೆದು ಹಾಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಹೆಸರನ್ನೇ ಗುರಿ ಮಾಡಿ ಡಿಲೀಟ್ ಮಾಡಿ ಮುಂದಿನ ವಿಧಾನಸಭಾ ಕ್ಷೇತ್ರದಲ್ಲಿ ಉಳ್ಳಾಲವನ್ನು ಬಿಜೆಪಿ ತೆಕ್ಕೆಗೆ ಹಾಕುವ ಪ್ರಯತ್ನಗಳು ನಡೆಯುತ್ತಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ಸತ್ಯಾಂಶವನ್ನು ಅರಿಯಲು ಈ ದಿನ.ಕಾಮ್ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು ಟಿ ಖಾದರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೇರಿದಂತೆ ಹಲವರನ್ನು ಮಾತನಾಡಿಸಿತು.

AV Eye Hospital ad

"ನನ್ನ ಕ್ಷೇತ್ರದಲ್ಲಿ ಅಧಿಕಾರಿಗಳು ಒತ್ತಡದಿಂದ ಕೆಲಸ ಮಾಡಿರುವುದು ನಮಗೆ ಮೇಲ್ನೋಟಕ್ಕೆ ಕಾಣುತ್ತಿದೆ. ಬೇರೆ ಕಡೆಗೆ ತೆರಳಿ, 'ಶಿಫ್ಟ್‌' ಆದವರನ್ನು ಪಟ್ಟಿಯಿಂದ ತೆಗೆದಿದ್ದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಕೆಲವು ಕಡೆ ಏನಾಗುತ್ತದೆ ಅಂದರೆ ನನ್ನ ಮನೆ ಇರುವುದು ಉಳ್ಳಾಲದಲ್ಲಿ. ಮಕ್ಕಳ ಶಿಕ್ಷಣ ಅಥವಾ ಉದ್ಯೋಗದ ವಿಚಾರಕ್ಕೆ ಮಂಗಳೂರಿಗೆ ಹೋಗಿದ್ದರೆ, ಅಂಥವರ ಹೆಸರನ್ನು ಪಟ್ಟಿಯಿಂದ ಬಿಡೋದು ಸರಿಯಲ್ಲ. ವಿದೇಶದಲ್ಲಿರುವ ಮತದಾರರನ್ನು ಬಿಟ್ಟಿರುವ ಬಗ್ಗೆಯೂ ಮಾಹಿತಿ ಇದೆ. ಅವರನ್ನು ಯಾಕೆ ಪಟ್ಟಿಯಿಂದ ಕೈ ಬಿಡಬೇಕು ಎಂದು ಈ ದಿನ.ಕಾಮ್‌ ಜೊತೆಗೆ ಮಾತನಾಡಿದ ವೇಳೆ ಪ್ರಶ್ನಿಸಿದ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು ಟಿ ಖಾದರ್, 'ವಿದೇಶದಲ್ಲಿರುವವರು ಕೆಲಸ ಕಳೆದುಕೊಂಡು ಊರಿಗೆ ಬಂದರೆ ಅಥವಾ ಮತದಾನದ ವೇಳೆ ಮತ ಹಾಕಲು ಬಂದರೆ ಅವರು ಏನು ಮಾಡಬೇಕು?' ಎಂದು ಅಧಿಕಾರಿಗಳ ನಡೆಯ ಬಗ್ಗೆ ಪ್ರಶ್ನಿಸಿದರು. 

'ನಕಲಿ ಮತದಾನ ಮಾಡುವವರನ್ನು ಅಧಿಕಾರಿಗಳು ತಡೆಯಲಿ. ಅದು ಬಿಟ್ಟು ಊರಲ್ಲಿ ಇಲ್ಲ ಎಂದ ಕಾರಣಕ್ಕೆ ಡಿಲೀಟ್ ಮಾಡಿರುವುದರ ಹಿಂದೆ ಷಡ್ಯಂತ್ರ ಇರಲೂಬಹುದು' ಎಂದು ಆರೋಪಿಸಿದ ಶಾಸಕರು, "ಪ್ರತಿಯೊಬ್ಬರಿಗೆ ಮತದಾನ ಮಾಡುವ ಪ್ರೇರಣೆಯನ್ನು ಅಧಿಕಾರಿಗಳು ನೀಡಬೇಕೆ ಹೊರತು ಅವಕಾಶ ಸಿಕ್ಕಿದೆ ಎಂದು ಡಿಲೀಟ್ ಮಾಡುವುದಲ್ಲ. ನಮಗೆ ಮತದಾರರ ಪಟ್ಟಿ ಇವತ್ತಷ್ಟೇ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಅದನ್ನು ಪರಿಶೀಲಿಸುತ್ತೇವೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಒಂದು ವೇಳೆ ಊರಲ್ಲಿದ್ದವರ ಹೆಸರು ಅನಾವಶ್ಯಕವಾಗಿ ಅಥವಾ ಸಕಾರಣ ಇಲ್ಲದೆ ತೆಗೆದು ಹಾಕಿದ್ದಿದ್ದರೆ, ತಪ್ಪಿತಸ್ಥ ಯಾರು ಅಧಿಕಾರಿಗಳಿದ್ದಾರೆಯೋ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಬಗ್ಗೆಯೂ ಯೋಚಿಸಿದ್ದೇವೆ" ಎಂದು ಶಾಸಕ ಹಾಗೂ ಮಾಜಿ ಸಚಿವ ಯು ಟಿ ಖಾದರ್ ಈ ದಿನ.ಕಾಮ್‌ ಜೊತೆಗೆ ಮಾತನಾಡುತ್ತಾ ಎಚ್ಚರಿಕೆ ನೀಡಿದ್ದಾರೆ.

ಕರಡು ಪಟ್ಟಿಯ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎಂ ಆರ್ ರವಿಕುಮಾರ್, ”ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 43 ಸಾವಿರ ಹೆಸರನ್ನು ಮತದಾರರ ಪಟ್ಟಿಯಿಂದ 'ಡಿಲೀಟ್' ಮಾಡಲಾಗಿದೆ. ವ್ಯಾಸಂಗ ಮುಗಿಸಿ ತಮ್ಮ ಜಿಲ್ಲೆಗೆ ವಾಪಸ್ಸು ಹೋದವರು, ಮೃತ ವ್ಯಕ್ತಿಗಳು, ಬೇರೆ ಜಿಲ್ಲೆ, ರಾಜ್ಯ ಅಥವಾ ದೇಶಕ್ಕೆ ಹೋದವರು, ವರ್ಗಾವಣೆಯಾದ ಅಧಿಕಾರಿಗಳು ಹೀಗೆ ಸಮೀಕ್ಷೆ ಮಾಡಿ ಎಲ್ಲರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಮಂದಿ ವಿದೇಶದಲ್ಲಿ ಉದ್ಯೋಗವಿರುವವರು. ಅವರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಒಂದು ವೇಳೆ ಇಲ್ಲಿದ್ದು ಮತದಾನ ಮಾಡುವ ಯಾರದ್ದಾದರೂ ಹೆಸರು ಕಣ್ತಪ್ಪಿನಿಂದ 'ಡಿಲೀಟ್' ಆಗಿದೆಯೇ ಎಂದು ಪುನರ್ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಅಲ್ಲಿ ತಮ್ಮ ಹೆಸರನ್ನು ಸೇರಿಸಲು ಅವಕಾಶ ಮಾಡಿಕೊಡಲಾಗಿದೆ. ಒಂದೇ ಸಮುದಾಯದವರ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಹಾಗೆ ಮಾಡಲು ಸಾಧ್ಯವೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿ ಓದಿದ್ದೀರಾ?: ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ : ಕೊನೆಗೂ 'ಸುರತ್ಕಲ್ ಟೋಲ್‌ಗೇಟ್' ರದ್ದು

ಈ ದಿನ.ಕಾಮ್ ಜೊತೆ ಮಾತನಾಡಿದ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ”ಶೇಕಡವಾರು ಮತದಾರರ ಸಂಖ್ಯೆಗಿಂತ ಹೆಚ್ಚಿರುವ ಕಡೆ ಸಮೀಕ್ಷೆ ನಡೆಸುವಂತೆ ಚುನಾವಣಾ ಆಯೋಗ ತಿಳಿಸಿದೆ. ಒಂದು ನಿರ್ದಿಷ್ಟ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ 70ರಿಂದ 72ರಷ್ಟು ಮತದಾನಕ್ಕೆ ಅರ್ಹತೆ ಪಡೆದಿರುವವರು ಇರುತ್ತಾರೆಂದು ಅಂದಾಜಿಸಲಾಗಿದೆ. ಉಳ್ಳಾಲದಲ್ಲಿ ಶೇ 75 ಹಾಗೂ ಮೂಡಬಿದಿರೆಯಲ್ಲಿ ಶೇ 76 ಶೇಕಡಾವಾರು ಮತದಾರರ ಸಂಖ್ಯೆ ತೋರಿಸುತ್ತಿದೆ. ಈ ಉದ್ದೇಶದಿಂದಲೇ, ಆ ಎರಡೂ ಕಡೆ ಮನೆ ಮನೆ ಸರ್ವೆ ಮಾಡಲಾಗಿದೆ” ಎಂದರು.

Voter ID

"ಮತಗಟ್ಟೆ ಅಧಿಕಾರಿಗಳು(ಬಿಎಲ್ಓ) ಮನೆ ಮನೆ ಸಮೀಕ್ಷೆ ಮಾಡಲು ಹೋದಾಗ ಯಾರು ಇಲ್ಲವೋ ಅವರನ್ನು ಪಟ್ಟಿಯಿಂದ ಕೈ ಬಿಟ್ಟಿದ್ದಾರೆ. ಉಳ್ಳಾಲದಲ್ಲಿ ಸುಮಾರು 9 ಸಾವಿರ ಜನರ ಹೆಸರನ್ನು ಡಿಲೀಟ್ ಮಾಡಿದ್ದು, ಸುಮಾರು 6 ಸಾವಿರ ಹೆಸರನ್ನು ಹೊಸದಾಗಿ ಸೇರಿಸಲಾಗಿದೆ. ಇದನ್ನು ಅವೈಜ್ಞಾನಿಕವಾಗಿ ಹಾಗೂ ಧರ್ಮಾಧಾರಿತವಾಗಿಯೂ ಹೆಸರನ್ನು ಕೈ ಬಿಟ್ಟಿಲ್ಲ. ಹೀಗೆ ಡಿಲೀಟ್ ಮಾಡಲೂ ಸಾಧ್ಯವಿಲ್ಲ. ಎಲ್ಲ ಮಾಹಿತಿಯೂ ಸಾಫ್ಟ್‌ವೇರ್‌ನಲ್ಲಿ ದಾಖಲಾಗಿರುತ್ತದೆ” ಎಂದು ಆಯುಕ್ತ ಮದನ್ ಮೋಹನ್ ಈ ದಿನ.ಕಾಮ್‌ಗೆ ಹೇಳಿದ್ದಾರೆ.

Ullal_Queen_Abbakka_Devi

”ಮತದಾರರ ಪಟ್ಟಿಯಿಂದ ಸುಮಾರು ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಅಧಿಕೃತ ಮಾಹಿತಿ ಬಂದಿದೆ. ನಮ್ಮ ಶಾಸಕರಾದ ಯು ಟಿ ಖಾದರ್ ಅವರು ಪ್ರತಿನಿಧಿಸುತ್ತಿರುವ ಮಂಗಳೂರು ವಿಧಾನಸಭಾ ಕ್ಷೇತ್ರವೊಂದರಲ್ಲೇ 16 ಸಾವಿರ ಹೆಸರು ಕೈಬಿಟ್ಟಿರುವ ಬಗ್ಗೆ ತಿಳಿದು ಬಂದಿದೆ. ಒಂದೇ ಸಮುದಾಯದವರ ಹೆಸರನ್ನು ಡಿಲೀಟ್ ಮಾಡಿದ್ದಾರೆಯೇ ಎಂಬುವುದನ್ನು ಇನ್ನಷ್ಟೇ ಪರಿಶೀಲಿಸಿ ನೋಡಬೇಕಿದೆ. ಅಧಿಕಾರಿಗಳು ಡಿಲೀಟ್ ಮಾಡಿರುವುದಕ್ಕೆ ಹಲವಾರು ಕಾರಣಗಳನ್ನು ನೀಡಿದ್ದಾರೆ. ನೈಜ ಕಾರಣವೇನೆಂದು ನಾವು ಪರಿಶೀಲಿಸಿ ನೋಡುತ್ತೇವೆ” ಎಂದು ಈ ದಿನ.ಕಾಮ್ ಜೊತೆ ಮಾತನಾಡಿದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ತಿಳಿಸಿದ್ದಾರೆ.

muslim-votes

ಈ ದಿನ.ಕಾಮ್ ಜೊತೆ ಮಾತನಾಡಿದ ಎಸ್‌ಡಿಪಿಐ ಮುಖಂಡ ನವಾಝ್ ಉಳ್ಳಾಲ ,”ಉಳ್ಳಾಲದಲ್ಲೇ ಸುಮಾರು 16 ಸಾವಿರ ಹೆಸರು ಡಿಲೀಟ್ ಆಗಿದೆ ಎಂಬ ಬಗ್ಗೆ ನಮಗೂ ಮಾಹಿತಿ ಬಂದಿದೆ. ಈ ಬಗ್ಗೆ ಅಭಿಯಾನ ಮಾಡುವ ಬಗ್ಗೆ ಯೋಚಿಸುತ್ತಿದ್ದೇವೆ. ಮತದಾನದ ಚೀಟಿ ತೆಗೆದುಕೊಂಡು ಹೋಗಿ ಮತಗಟ್ಟೆ ಅಧಿಕಾರಿಗಳ(ಬಿಎಲ್ಓ) ಬಳಿ ಪರಿಶೀಲಿಸುವಂತೆ ಜನರಲ್ಲಿ ಅರಿವು ಮೂಡಲಿಸಿದ್ದೇವೆ. ಬೂತ್ ಮಟ್ಟದಲ್ಲಿ ಸಕ್ರಿಯರಾಗಿರುವ ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ” ಎಂದರು.

"ಹೆಚ್ಚಿನ ಮತದಾರರ ಪೈಕಿ ವೋಟರ್ ಐಡಿ ಹಾಗೂ ಆಧಾರ್‌ ಕಾರ್ಡಿನಲ್ಲಿರುವ ಹೆಸರುಗಳು 'ಮಿಸ್ ಮ್ಯಾಚ್‌' ಇದೆ ಎಂದು ನಾವು ಮನೆಮನೆಗೆ ತೆರಳಿ ಈ ಹಿಂದೆ ಉಳ್ಳಾಲ, ತೊಕ್ಕೊಟ್ಟು, ಮದಕ, ಹರೇಕಳ, ಪಿಲಾರ್ ಭಾಗಗಳಲ್ಲಿ ಸರ್ವೆ ನಡೆಸಿದ ಸಂದರ್ಭ ನಮ್ಮ ಗಮನಕ್ಕೆ ಬಂದಿತ್ತು. ಆದರೆ ಅಧಿಕಾರಿಗಳು ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವ ಮುನ್ನ ಸಂಬಂಧಪಟ್ಟವರನ್ನು ಸಂಪರ್ಕಿಸಿ, ಡಿಲೀಟ್ ಮಾಡಿದ್ದಾರೋ ಎಂಬ ಮಾಹಿತಿ ಇಲ್ಲ. ಈಗ ಆನ್‌ಲೈನ್‌ನಲ್ಲಿ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಡಿಲೀಟ್ ಆದ ಪಟ್ಟಿ ಹಾಗೂ ಪರಿಷ್ಕರಣೆಗೊಂಡ ಪಟ್ಟಿಯನ್ನು ಗಮನಿಸಿ, ಆದಷ್ಟು ಶೀಘ್ರವೇ ಈ ಬಗ್ಗೆ ಮತದಾರರಿಗೆ ಜಾಗೃತಿ ಅಭಿಯಾನ ನಡೆಸಲಿದ್ದೇವೆ. ಈ ಬಗ್ಗೆ ಪಕ್ಷದ ವತಿಯಿಂದ ಕಾರ್ಯ ಯೋಜನೆ ಹಾಕಿ, ಅರ್ಹ ಮತದಾರರು ಯಾರೂ ಕೂಡ ಮತದಾನದ ಹಕ್ಕಿನಿಂದ ತಪ್ಪಿ ಹೋಗದಂತೆ ನೋಡಿಕೊಳ್ಳುತ್ತೇವೆ" ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (ಡಬ್ಲ್ಯೂಪಿಐ) ಉಳ್ಳಾಲ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ಖಾದರ್ ತೌಸೀಫ್ ಈ ದಿನ.ಕಾಮ್‌ಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಾರ್ಚ್ ಕೊನೆಯೊಳಗೆ ವೋಟರ್‌ ಐಡಿಗೆ ಆಧಾರ್ ಲಿಂಕ್ ಮಾಡಿಸಿ: ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ 

ಈ ಎಲ್ಲ ಬೆಳವಣಿಗೆಯ ನಡುವೆ ಸದ್ಯ ಮತದಾರರ ನೋಂದಣಿ ಹಾಗೂ 224 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಗೆ ಆಯೋಗ ಅವಕಾಶ ನೀಡಿದೆ. ನವೆಂಬರ್ 9ರಿಂದ ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುತ್ತಿದೆ. ಇದಕ್ಕೆ ಡಿಸೆಂಬರ್ 8ರವರೆಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ಹಾಗೆಯೇ ಡಿಸೆಂಬರ್ 26ರೊಳಗೆ ಆಕ್ಷೇಪಣೆಗಳ ವಿಲೇವಾರಿ ಮಾಡಿ 2023ರ ಜನವರಿ 5ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟವಾಗಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ಇತ್ತೀಚೆಗೆ ಬೆಂಗಳೂರಿನಲ್ಲಿ ತಿಳಿಸಿದ್ದರು.

ಮತದಾರರು ತಮ್ಮ ಮಾಹಿತಿ ಪರಿಶೀಲನೆ ಸಲುವಾಗಿ www.ceokarnataka.gov.in ಗೆ ಲಾಗಿನ್ ಆಗಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು. ಹಾಗೆಯೇ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದರೆ ಫಾರ್ಮ್ 6 ರ ಮೂಲಕ ಸೇರ್ಪಡೆಯನ್ನೂ ಮಾಡಿಕೊಳ್ಳಬಹುದು, ಇದಕ್ಕೆ ಸ್ಮಾರ್ಟ್ ಫೋನ್, ಗರುಡ ಆಪ್, ಎನ್‌ವಿಎಸ್‌ಪಿ ಆಪ್ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ಮೀನಾ ಮಾಹಿತಿ ನೀಡಿದ್ದರು.

ಸಹಕಾರ: ಇರ್ಷಾದ್ ವೇಣೂರು
ನಿಮಗೆ ಏನು ಅನ್ನಿಸ್ತು?
3 ವೋಟ್
eedina app