ಮಂಗಳೂರು | ಲೇಡಿಹಿಲ್ ನಗರ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಸಿಪಿಐಎಂ ಒತ್ತಾಯ

Dakshina kannada
  • ಆರೋಗ್ಯ ಕೇಂದ್ರದ ಕಟ್ಟಡ ಹಳೆಯದಾಗಿದ್ದು, ಬೀಳುವ ಸ್ಥಿತಿ ತಲುಪಿದೆ
  • ಜನರು ಔಷಧಿಗಳನ್ನು ಹಣ ತೆತ್ತು ಪಡೆಯಬೇಕಾದ ಸ್ಥಿತಿಯಿದೆ

ಮಂಗಳೂರು ನಗರದ ಲೇಡಿಹಿಲ್‌ನಲ್ಲಿರುವ ಸರ್ಕಾರಿ ನಗರ ಆರೋಗ್ಯ ಕೇಂದ್ರವು ಎಲ್ಲ ರೀತಿಯ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಮೂಲಭೂತ ಸೌಕರ್ಯಗಳ ಸಹಿತ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇರಿಗೇರಿಸುವಂತೆ ಸಿಪಿಐಎಂ ಮಂಗಳೂರು ಘಟಕವು ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದೆ.

ಆರೋಗ್ಯ ಕೇಂದ್ರ ತೀರಾ ಕೆಳಮಟ್ಟದಲ್ಲಿದ್ದು ಅಗತ್ಯ ಔಷಧಿ, ನುರಿತ ವೈದ್ಯರ ಸಹಿತ ಸಿಬ್ಬಂದಿಗಳ ಕೊರತೆಯಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿದರೆ ಅಲ್ಲಿ ಯಾವುದೇ ಸೌಲಭ್ಯವಿಲ್ಲ. ಆರೋಗ್ಯ ಕೇಂದ್ರದ ಕಟ್ಟಡವೂ ಹಳೆಯದಾಗಿದ್ದು ಚಾವಣಿ ಸಂಪೂರ್ಣ ಸೋರುತ್ತಿದೆ. ಜ್ವರದಂತಹ ಕಾಯಿಲೆಗಳಿಗೂ ನೀಡಬೇಕಾದ ಮಾತ್ರೆಗಳನ್ನು ನಗರ ಪಾಲಿಕೆ ಸರಬರಾಜು ಮಾಡದಿರುವ ಕಾರಣ ರೋಗಿಗಳು ಹೊರಗಿನಿಂದ ಹಣ ತೆತ್ತು ಪಡೆಯಬೇಕಾದ ಸಂಕಷ್ಟದ ಸ್ಥಿತಿ ಎದುರಾಗಿದೆ ಎಂದು ಸಿಪಿಐಎಂ ಆರೋಪಿಸಿದೆ.

ಈ ಸುದ್ದಿ ಓದಿದ್ದೀರಾ?: ಮೈಸೂರು | ಕನ್ನಡ ಶಾಲೆಯ ಸಮಾಧಿ ಮೇಲೆ ವಿವೇಕ ಸ್ಮಾರಕ; ಶಾಲೆ ಉಳಿವಿಗಾಗಿ ಹೋರಾಟ

ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಗೂ ನೀಡಬೇಕಾದ ಔಷಧಿಗಳು ಆರೋಗ್ಯ ಕೇಂದ್ರದಲ್ಲಿ ಲಭ್ಯವಿಲ್ಲ. ವೈದ್ಯಾಧಿಕಾರಿ ಹುದ್ದೆ ಕಳೆದ ಹಲವು ವರ್ಷಗಳಿಂದ ಖಾಲಿ ಬಿದ್ದಿದೆ. ನಗರದ ಜನರ ಆರೋಗ್ಯ ಕಾಳಜಿ ವಹಿಸಬೇಕಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತವು ಆರೋಗ್ಯ ಕೇಂದ್ರವನ್ನು ಸಂಪೂರ್ಣ ಕಡೆಗಣಿಸುತ್ತಿದೆ ಎಂದು ಆರೋಪಿಸಿದೆ.

Image
cipm mangalore

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಾಂತರ ಹಣವನ್ನು ವ್ಯರ್ಥ ಕಾಮಗಾರಿಗಳಿಗೆ ಖರ್ಚು ಮಾಡುವ ಬದಲು ಜನರಿಗೆ ಅಗತ್ಯವಿರುವ ಇಲಾಖೆಗಳ ಅಭಿವೃದ್ಧಿಗೆ ವಿನಿಯೋಗಿಸಿದರೆ ಜನರಿಗೆ ಅನೂಕೂಲವಾಗುತ್ತದೆ ಎಂದು ತಿಳಿಸಿದೆ.

ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್, ನಗರ ಕಾರ್ಯದರ್ಶಿ ಸಂತೋಷ್ ಬಜಾಲ್,  ಸಿಪಿಐಎಂ ಮುಖಂಡ ನಾಗೇಶ್ ಕೋಟ್ಯಾನ್, ರಘುವೀರ್ ಉರ್ವಸ್ಟೋರ್, ರೇವಂತ್ ಕದ್ರಿ, ಶಾಹಿದ್ ಮತ್ತಿತರರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್