
- ಸ್ಮಾರಕ ನಿರ್ಮಾಣದಿಂದ ಯುವಕರಿಗೆ ಸ್ಫೂರ್ತಿ
- ಸುಮಾರು 179 ಮರಗಳಿಗೆ ಎಂಸಿಸಿ ಕೊಡಲಿ
ಮಂಗಳೂರಿನ ಬಾಬುಗುಡ್ಡೆಯಲ್ಲಿರುವ ಬ್ರಹ್ಮ ಸಮಾಜದ ರುದ್ರಭೂಮಿಯಲ್ಲಿ ಕುದ್ಮುಲ್ ರಂಗರಾವ್ ಸ್ಮಾರಕ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯಲು ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಮುಂದಾಗಿದೆ ಎನ್ನಲಾಗಿದ್ದು, ಪರಿಸರವಾದಿಗಳನ್ನು ಆತಂಕಕ್ಕೀಡುಮಾಡಿದೆ.
“ಕುದ್ಮುಲ್ ರಂಗರಾವ್ ಸ್ಮಾರಕದ ಅಭಿವೃದ್ಧಿಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ರಾಜ್ಯ ಸರ್ಕಾರ ಈಗಾಗಲೇ ಮೂರು ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಸ್ಮಾರಕ ನಿರ್ಮಾಣದಿಂದ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ಯುವಕರಿಗೆ ಸ್ಫೂರ್ತಿ ನೀಡುತ್ತದೆ” ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
“ಮಂಗಳೂರಿನಲ್ಲಿ ಕ್ಷೀಣಿಸುತ್ತಿರುವ ಹಸಿರನ್ನು ಸರಿದೂಗಿಸುವ ಸಲುವಾಗಿ ಅರಣ್ಯೀಕರಣಕ್ಕೆ ಸ್ಮಶಾನಗಳು ಸೂಕ್ತವಾದ ಸ್ಥಳವೆಂದು ಜೀತ್ ಮಿಲನ್ ರೋಚೆ ಅವರು ನಾಲ್ಕು ವರ್ಷಗಳ ಹಿಂದೆ ಸಸಿಗಳನ್ನು ನೆಟ್ಟಿದ್ದರು. ಅವರು ನೆಟ್ಟ ಸಸಿಗಳು ಇದೀಗ ಈ ಯೋಜನೆಗೆ ಬಲಿಯಾಗುತ್ತವೆ” ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
“ಸ್ಮಾರಕ ನಿರ್ಮಾಣಕ್ಕಾಗಿ ಎಂಸಿಸಿ ಸುಮಾರು 179 ಮರಗಳನ್ನು ಕಡಿಯಲು ನಿರ್ಧರಿಸಿರುವುದು ನಮಗೆ ತಿಳಿದು ಬಂದಿದೆ. ಈ ಮರಗಳನ್ನು ಉಳಿಸಲು ನಾವು ಅಭಿಯಾನ ಪ್ರಾರಂಭಿಸುತ್ತೇವೆ. ಹಣ್ಣುಗಳನ್ನು ನೀಡುವ ಸಸ್ಯಗಳು, ಔಷಧೀಯ ಮತ್ತು ಹೂಬಿಡುವ ಸಸ್ಯಗಳು ಸೇರಿದಂತೆ 40 ಪ್ರಭೇದದ ಮರಗಳು ಇಲ್ಲಿವೆ" ಎಂದು ಪರಿಸರವಾದಿಗಳು ಹೇಳಿದ್ದಾರೆ.
“ಸ್ಮಾರಕಕ್ಕಾಗಿ ಮರಗಳನ್ನು ಕಡಿಯದಂತೆ ಸ್ಥಳೀಯರು ಆಕ್ಷೇಪಿಸಿದ್ದಾರೆ. ಸ್ಮಾರಕ ನಿರ್ಮಾಣಕ್ಕಾಗಿ ಎಷ್ಟು ಮರಗಳು ಹಾನಿಯಾಗುತ್ತವೆ ಎಂಬುದನ್ನು ನಿಖರವಾಗಿ ಹೇಳಲು ನಮಗೆ ಸಾಧ್ಯವಾಗಿಲ್ಲ. ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್), ಎಂಸಿಸಿ ಮತ್ತು ಪರಿಸರವಾದಿಗಳೊಂದಿಗೆ ಸಭೆ ಕರೆಯಲು ಇಲಾಖೆ ನಿರ್ಧರಿಸಿದೆ" ಎಂದು ಹಿರಿಯ ಅರಣ್ಯ ಅಧಿಕಾರಿಗಳು ಹೇಳಿದರು.
ಈ ಸುದ್ದಿ ಓದಿದ್ದೀರಾ? ಅಡಿಕೆ ಆತಂಕ| ಎಲೆಚುಕ್ಕೆ ರೋಗಕ್ಕೆ ತೋಟ ನಾಶ: ರೈತರ ಮೂಗಿಗೆ ಅನುದಾನದ ತುಪ್ಪ ಸವರಿತೇ ಸರ್ಕಾರ?
“ಸ್ಮಾರಕ ನಿರ್ಮಾಣದ ಬಗ್ಗೆ ಎಂಸಿಸಿ ಅರಣ್ಯ ಇಲಾಖೆಗೆ ಪತ್ರ ಬರೆದಿದೆ. ಸ್ಮಾರಕದ ಕೆಲಸ ಇನ್ನೂ ಪ್ರಾರಂಭವಾಗಿಲ್ಲ. ಸ್ಮಾರಕ ನಿರ್ಮಾಣಕ್ಕೆಂದು ಗುರುತಿಸಿದ್ದ ಸ್ಥಳದಲ್ಲಿ ಸ್ವಚ್ಛತೆಯನ್ನು ನಿರ್ವಹಿಸದೇ, ಅದರ ಸುತ್ತಲೂ ಕಸವನ್ನು ಹಾಕಲಾಗಿದೆ” ಎಂದು ಎಂಸಿಸಿ ಅಧಿಕಾರಿಗಳು ಹೇಳಿದರು.
“ಎಂಸಿಸಿ ಆಯುಕ್ತ ಅಕ್ಷಿ ಶ್ರೀಧರ್ ಅವರು ಈಗಾಗಲೇ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಯೋಜನೆಯ ಬಗ್ಗೆ ಚರ್ಚಿಸಿದ್ದಾರೆ. ಕೆಲಸವನ್ನು ಪ್ರಾರಂಭಿಸುವ ಮೊದಲು, ನಾವು ಮತ್ತೊಂದು ಚರ್ಚೆ ನಡೆಸುತ್ತೇವೆ. ಸ್ಮಾರಕಕ್ಕಾಗಿ ಮರಗಳನ್ನು ಕಡಿಯುವ ಬಗ್ಗೆ ನಾವು ಇನ್ನೂ ನಿರ್ಧಾರ ಕೈಗೊಂಡಿಲ್ಲ" ಎಂದು ಅವರು ಹೇಳಿದರು.