
- ಭಾರತೀಯ ಅಂಚೆ ಮತ್ತು ಪೊಲೀಸ್ ಇಲಾಖೆ ಒಡಂಬಡಿಕೆ
- ದಕ್ಷಿಣ ಕನ್ನಡ, ಉಡುಪಿ ಎಲ್ಲ ಅಂಚೆ ಕಚೇರಿಯಲ್ಲಿ ಪಾವತಿಗೆ ಅವಕಾಶ
ಸಂಚಾರ ನಿಯಮ ಉಲ್ಲಂಘಿಸಿದವರು ಅಂಜೆ ಕಚೇರಿಯಲ್ಲಿಯೂ ದಂಡ ಪಾವತಿಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದೆ. ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗ ಮತ್ತು ಮಂಗಳೂರು ನಗರ ಪೊಲೀಸ್ ಇಲಾಖೆ ಒಡಂಬಡಿಕೆ ಮಾಡಿಕೊಂಡು, ಹೊಸ ಅವಕಾಶ ಕಲ್ಪಿಸಿವೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಮತ್ತು ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್ ಹೊಸ ಒಡಂಬಡಿಕೆಗೆ ಸೋಮವಾರ ಸಹಿಹಾಕಿದ್ದಾರೆ.
ಹೊಸ ಸೇವೆಯ ಬಗ್ಗೆ ಶ್ರೀಹರ್ಷ ಮಾತನಾಡಿ, ”ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 188 ಅಂಚೆ ಕಚೇರಿಗಳಿದ್ದು, ಈ ಎಲ್ಲ ಅಂಚೆ ಕಚೇರಿಗಳಲ್ಲಿ ದಂಡದ ಶುಲ್ಕ ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ. ಸಂಚಾರ ನಿಯಮ ಉಲ್ಲಂಘನೆಯ ದಂಡ ಶುಲ್ಕ ಪಾವತಿಸಲು ಜಿಲ್ಲೆಯ ಜನರು ಅಲೆದಾಡುವ ಅವಶ್ಯಕತೆಯಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ?: ಮುರುಘಾ ಮಠದಲ್ಲಿ ಮಕ್ಕಳ ಅಕ್ರಮ ದತ್ತು; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ 'ಒಡನಾಡಿ' ಆಗ್ರಹ
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, “ಈ ವ್ಯವಸ್ಥೆಯಿಂದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ದಂಡ ಶುಲ್ಕ ಪಾವತಿಸಲು ಟ್ರಾಫಿಕ್ ಪೊಲೀಸ್ ಠಾಣೆ ಮತ್ತು ಮಂಗಳೂರು ಒನ್ ಸೆಂಟರ್ಗಳನ್ನು ಅವಲಂಬಿಸಬೇಕಾಗಿಲ್ಲ. ಹತ್ತಿರದ ಅಂಚೆ ಕಚೇರಿಗೆ ಹೋಗಿ ದಂಡ ಪಾವತಿಸಬಹುದು” ಎಂದರು.
ಒಡಂಬಡಿಕೆಗೆ ಸಹಿಹಾಕುವ ಕಾರ್ಯಕ್ರಮದಲ್ಲಿ ಡಿಸಿಪಿ ಅಂಶುಕುಮಾರ್, ಎಸಿಪಿ ಗೀತಾ ಕುಲಕರ್ಣಿ ಮತ್ತು ಅಂಚೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.