ದಕ್ಷಿಣ ಕನ್ನಡ | ಪಾಲಿಕೆ ಮೇಯರ್‌ಗಳ ಅಧಿಕಾರಾವಧಿ ಹೆಚ್ಚಿಸಬೇಕು: ಪ್ರೇಮಾನಂದ ಶೆಟ್ಟಿ

  • "ಪಾಲಿಕೆಗಳಲ್ಲಿ ಮೇಯರ್‌ಗಳ ಅಧಿಕಾರಾವಧಿಯನ್ನು 30 ತಿಂಗಳಿಗೆ ವಿಸ್ತರಿಸಬೇಕು"
  • "ವಿವಿಧ ಕಾರಣಗಳಿಂದ ಮೇಯರ್ ಚುನಾವಣೆಯನ್ನು ಮುಂದೂಡಲಾಗಿತ್ತು"

'ಮೇಯರ್‌ ಅಧಿಕಾರಾವಧಿಯನ್ನು ವಿಸ್ತರಿಸುವ ಅಗತ್ಯವಿದೆ. ಒಂದು ವರ್ಷದ ಕಡಿಮೆ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ" ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದ್ದಾರೆ. 

ಪ್ರೇಮಾನಂದ ಶೆಟ್ಟಿ ಅವರ ಅಧಿಕಾರಾವಧಿ ಗುರುವಾರ ಅಂತ್ಯಗೊಂಡಿದೆ. ಪಾಲಿಕೆಯ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿಗಳಿಗೆ ಇಂದು (ಶುಕ್ರವಾರ) ಚುನಾವಣೆ ನಡೆಯಲಿದೆ.

ಶೆಟ್ಟಿ ಅವರ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸಂವಾದ ಕಾರ್ಯಕ್ರಮವನ್ನು ಆಯೋಜಿತ್ತು. ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಕುರಿತ ಚರ್ಚೆಯಲ್ಲಿ ಮಾತನಾಡಿದ ಶೆಟ್ಟಿ, "ಪಾಲಿಕೆಗಳ ಮೇಯರ್‌ ಅಧಿಕಾರಾವಧಿಯನ್ನು ವಿಸ್ತರಿಸಬೇಕು. ಇದರಿಂದ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ" ಎಂದು ಹೇಳಿದ್ದಾರೆ. 

"ಅಲ್ಲದೆ, ಭಕ್ತವತ್ಸಲ ಆಯೋಗವು ಎಲ್ಲ ಮಹಾನಗರ ಪಾಲಿಕೆಗಳಲ್ಲಿ ಮೇಯರ್ ಮತ್ತು ಉಪಮೇಯರ್‌ಗಳ ಅಧಿಕಾರಾವಧಿಯನ್ನು 30 ತಿಂಗಳಿಗೆ ವಿಸ್ತರಿಸುವಂತೆ ಶಿಫಾರಸು ಮಾಡಿತ್ತು" ಎಂದು ಅವರು ವಿವರಿಸಿದ್ದಾರೆ. 

"ಮಾರ್ಚ್‌ 2ರಂದೇ ಮೇಯರ್ ಚುನಾವಣೆ ನಡೆಯಬೇಕಿತ್ತು. ಆದರೆ, ವಿವಿಧ ಕಾರಣಗಳಿಂದ ಚುನಾವಣೆಯನ್ನು ಮುಂದೂಡಲಾಗಿದೆ. ಇದರಿಂದಾಗಿ ಎರಡು ಬೇಸಿಗೆಯಲ್ಲಿ ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸುವ ಜವಾಬ್ದಾರಿ ನನ್ನ ಮೇಲಿತ್ತು. ಅದೃಷ್ಟವಶಾತ್, ಯಾವುದೇ ಕೊರತೆಯಾಗಲಿಲ್ಲ" ಎಂದು ಶೆಟ್ಟಿ ಹೇಳಿದ್ದಾರೆ. 

ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ತೃಪ್ತಿಯಿದೆ ಎಂದ ಶೆಟ್ಟಿ, "ಆನ್‌ಲೈನ್‌ನಲ್ಲಿ ಟ್ರೇಡ್ ಲೈಸೆನ್ಸ್ ಅಳವಡಿಕೆ ಮತ್ತು ಆಡಳಿತ ಸುಧಾರಣೆ ಸೇರಿದಂತೆ ಹಲವು ಹೊಸ ತಂತ್ರಜ್ಞಾನಗಳನ್ನು ಪಾಲಿಕೆ ಆಡಳಿತದಲ್ಲಿ ಅಳವಡಿಸಿಕೊಳ್ಳಲಾಗಿದೆ" ಎಂದಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಚಿಕಿತ್ಸೆ ನೀಡಲು ಲಂಚ ಕೇಳುವ ಆಸ್ಪತ್ರೆ ಸಿಬ್ಬಂದಿ: ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆ

"ರಸ್ತೆ ವಿಸ್ತರಣೆ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ನಾನು ಮೇಯರ್ ಆಗಿದ್ದರೂ ಪಾಲಿಕೆ ಸಮಿತಿಗಳ ತೀರ್ಮಾನವೇ ಅಂತಿಮ. ಎಲ್ಲ ಸಭೆಗಳು ಪಾರದರ್ಶಕವಾಗಿ ನಡೆದು ಸದಸ್ಯರ ವಿಶ್ವಾಸ ಗಳಿಸಿದ ತೃಪ್ತಿ ನನಗಿದೆ. ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್