
- ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿಸಿದ ಧೀಮಂತ
- ಹರೇಕಳ ಗ್ರಾಮಕ್ಕೆ ಹಾಜಬ್ಬನಿಂದ ಸಿಕ್ಕ ಘನತೆ
ಹರೇಕಳ ಎಂಬ ಪುಟ್ಟ ಗ್ರಾಮದ ಹೆಸರನ್ನು ತಮ್ಮ ‘ಶಿಕ್ಷಣ ಸೇವೆ' ಮೂಲಕ ದೇಶ-ವಿದೇಶಗಳಿಗೆ ಪಸರಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಗ್ರಾಮದ ಜನತೆ ನೂತನ ರೀತಿಯಲ್ಲಿ ಗೌರವ ಸಮರ್ಪಸಿದೆ. ನೂತನವಾಗಿ ನಿರ್ಮಾಣವಾಗುತ್ತಿರುವ ಗ್ರಾಮ ಪಂಚಾಯತ್ ಗೋಡೆಯ ಮೇಲೆ ಹಾಜಬ್ಬ ಅವರ ದೊಡ್ಡ ಚಿತ್ರ ಬಿಡಿಸುವ ಮೂಲಕ ನಮನ ಸಲ್ಲಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಗ್ರಾಮದ ನೂತನ ಗ್ರಾಮ ಪಂಚಾಯತ್ ಕಟ್ಟಡದ ಒಂದು ಭಾಗದ ಗೋಡೆಯಲ್ಲಿ ಕಿತ್ತಳೆ ಹಣ್ಣು ಬುಟ್ಟಿ ಹಿಡಿದುಕೊಂಡ ಹಾಜಬ್ಬರ ಚಿತ್ರ ಬಿಡಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ನಿರ್ಮಾಣವಾಗುತ್ತಿರುವ ಈ ಕಟ್ಟಡ ಸದ್ಯದಲ್ಲೇ ಪೂರ್ಣಗೊಳ್ಳಲಿದೆ.
“ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ ಶ್ರೇಷ್ಟ ಸಂತ ಹಾಜಬ್ಬ. ಹರೇಕಳ ಗ್ರಾಮಕ್ಕೆ ಅವರಿಂದಲೇ ಒಂದು ಘನತೆ ಬಂದಿದೆ. ಇಡೀ ಪ್ರಪಂಚಕ್ಕೆ ನಮ್ಮ ಗ್ರಾಮದ ಹೆಸರನ್ನು ಪರಿಚಯಿಸಿದ್ದಾರೆ. ದೇಶದ ಅತ್ಯುನ್ನತ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದ ಅವರಿಗೆ ಗ್ರಾಮದಿಂದ ಎಂತಹ ಗೌರವ ಕೊಟ್ಟರೂ ಅದು ಸಣ್ಣದು. ಗ್ರಾಮದ ಸರ್ವ ಸದಸ್ಯರ ನಿರ್ಣಯದಂತೆ ಕಟ್ಟಡದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬ ಅವರ ಚಿತ್ರ ಬಿಡಿಸಲಾಗಿದೆ” ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಬದ್ರುದ್ದೀನ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ದಕ್ಷಿಣ ಕನ್ನಡ | ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಅಂಚೆ ಕಚೇರಿಯಲ್ಲಿ ಅವಕಾಶ
ಈದಿನ.ಕಾಮ್ ಜೊತೆ ಮಾತನಾಡಿದ ಹರೇಕಳ ಹಾಜಬ್ಬ, ”ಗ್ರಾಮ ಪಂಚಾಯತ್ ಗೋಡೆ ಮೇಲೆ ನನ್ನ ಚಿತ್ರ ಬರೆದಿದ್ದಾರೆಂದು ಹೇಳಿದ್ದಾರೆ. ನಾನು ಇನ್ನೂ ನೋಡಿಲ್ಲ. ನನ್ನಂತಹ ಬಡವನ ಚಿತ್ರವನ್ನು ಗೋಡೆ ಮೇಲೆ ಚಿತ್ರಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ” ಎಂದರು.
“ನಾನು ತುಂಬಾ ಬಡ ಕುಟುಂಬದಿಂದ ಬಂದಿದ್ದೇನೆ. ನನಗೆ ಒಂದು ಮನೆಯೂ ಇರಲಿಲ್ಲ. ಕಿತ್ತಳೆ ಮಾಡಿ ಜೀವನ ನಡೆಸುತ್ತಿದ್ದೆ. ನನ್ನ ಕೆಲಸ ಗುರುತಿಸಿ ಮೊದಲು ನನ್ನ ಬಗ್ಗೆ ಮಾಧ್ಯಮದಲ್ಲಿ ಬರೆದ ವ್ಯಕ್ತಿಗೆ ಧನ್ಯವಾದ ಹೇಳುತ್ತೇನೆ. ಎಲ್ಲ ಮಾಧ್ಯಮದವರೂ ನನ್ನ ಸೇವೆ ಗುರುತಿಸಿ ನನ್ನನ್ನು ಎಲ್ಲರಿಗೂ ಪರಿಚಯ ಮಾಡಿಸಿದ್ದಾರೆ. ಇಂದು ನನಗೆ ವಾಸ ಮಾಡಲು ಒಂದು ಮನೆಯಿದೆ. ಅದಕ್ಕೆ ಕಾರಣರಾದ ಎಲ್ಲರಿಗೂ ನಾನು ಋಣಿಯಾಗಿರುತ್ತೇನೆ” ಎಂದರು.