
- ಹಟ್ಟಿಯಂಗಡಿ ಗ್ರಾಮದ ಅಜ್ಜಿ ಮನೆ ಎಂಬಲ್ಲಿ ಪತ್ತೆ
- ಹಲವು ಅನುಮಾನಗಳಿಗೆ ಎಡೆಮಾಡಿದ ಸಾವು
ಕಾಸರಗೋಡು ಬದಿಯಡ್ಕದಲ್ಲಿ ಸುಮಾರು 30 ವರ್ಷ ದಂತ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ. ಕೃಷ್ಣಮೂರ್ತಿ ಸರ್ಪಂಗಳ ಅವರ ಮೃತದೇಹ ಕುಂದಾಪುರದ ಹಟ್ಟಿಯಂಗಡಿಯ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ಹಲವು ಅನುಮಾನಗಳಿಗೆ ಎಡಮಾಡಿದೆ.
ಸಾವಿಗೆ ಕಾರಣವೇನೆಂಬುದು ನಿಖರವಾಗಿ ತಿಳಿದಿಲ್ಲ. ಹಟ್ಟಿಯಂಗಡಿ ಗ್ರಾಮದ ಅಜ್ಜಿ ಮನೆ ಎಂಬಲ್ಲಿ ರೈಲ್ವೇ ಹಳಿಯ ಮೇಲೆ ಮೃತ ದೇಹ ಸಿಕ್ಕಿದೆ. ದೇಹದ ರುಂಡ-ಮುಂಡ ಬೇರ್ಪಟ್ಟಿದ್ದು, ದೇಹದ ಇರಡು ಭಾಗಗಳು 50 ಮೀಟರ್ ಅಂತರದಲ್ಲಿ ಬಿದ್ದಿದ್ದವು ಎನ್ನಲಾಗಿದೆ.
ನವೆಂಬರ್ 9ರಂದು ಟ್ಯ್ರಾಕ್ಮೆನ್ ಗಣೇಶ್ ಎಂಬುವವರು ಮೃತದೇಹವನ್ನು ಪತ್ತೆ ಹಚ್ಚಿದ್ದು, ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ಮೃತದೇಹವನ್ನು ಕುಂದಾಪುರ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಆತ್ಮಹತ್ಯೆ ಪ್ರಕರಣವೆಂದು ಕುಂದಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಅಪರಿಚಿತ ಮೃತದೇಹ ಪತ್ತೆಯಾಗಿದೆ ಎಂಬ ವಿಷಯ ತಿಳಿದ ಕೃಷ್ಣಮೂರ್ತಿ ಕುಟುಂಬ ಕುಂದಾಪುರಕ್ಕೆ ಬಂದಿದ್ದರು. ದೇಹದ ಮೇಲಿನ ಜನಿವಾರ ಹಾಗೂ ಹಿಂಬದಿ ಮಜ್ಜೆಯನ್ನು ಕಂಡು ಕೃಷ್ಣಮೂರ್ತಿ ಮೃತದೇಹವೆಂದು ಕುಟುಂಬದವರು ಖಚಿತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚಿಕ್ಕಮಗಳೂರು | ಕ್ಯೂಆರ್ ಕೋಡ್ ಮೂಲಕ ಹೊರರೋಗಿ ನೋಂದಣಿ
ಕೃಷ್ಣಮೂರ್ತಿಯವರ ಸಾವಿನ ಹಿಂದೆ ಹಲವು ಅನುಮಾನಗಳು ಹುಟ್ಟಿವೆ. ಕೆಲವರು ಇದು ಸಾವಲ್ಲ ಕೊಲೆ ಎಂದು ಹೇಳಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಬದಿಯಡ್ಕದಿಂದ ಸುಮಾರು 190 ಕೀಲೋಮೀಟರ್ ದೂರಕ್ಕೆ ಬರಬೇಕಿತ್ತೇ ಎಂಬ ಪ್ರಶ್ನೆಗಳೂ ಉದ್ಭವಿಸಿವೆ.
ನವೆಂಬರ್ 8ರಂದು ಕ್ಲಿನಿಕ್ಗೆ ಬಂದಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂಬ ಕಾರಣಕ್ಕೆ ಗುಂಪೊಂದು ಕೃಷ್ಣಮೂರ್ತಿಯವರಿಗೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿತ್ತು ಎನ್ನಲಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೃಷ್ಣಮೂರ್ತಿಯವರ ಕುಟುಂಬ ಗುಂಪಿನ ವಿರುದ್ದ ದೂರು ದಾಖಲಿಸಿದ್ದರು. ಅನುಚಿತ ವರ್ತನೆ ಮಾಡಿದ್ದರೆಂದು ವೈದ್ಯ ಕೃಷ್ಣಮೂರ್ತಿ ವಿರುದ್ದವೂ ದೂರು ದಾಖಲಾಗಿತ್ತು. ಘಟನೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಕೃಷ್ಣಮೂರ್ತಿಯವರಿಗೆ ಕಳೆದ ಆರು ತಿಂಗಳಿಂದ ಕೆಲವರು ಕಿರುಕುಳ ನೀಡುತ್ತಿದ್ದರು. ಜಾಗ ಮಾರುವಂತೆ ಒತ್ತಾಯಿಸುತ್ತಿದ್ದರು ಎಂದು ಕೃಷ್ಣಮೂರ್ತಿ ಅವರ ಸಂಬಂಧಿಕರು ಹೇಳಿದ್ದು, ಕೊಲೆಯೂ ಆಗಿರಬಹುದು ಎಂದು ಸಂಶಯ ವ್ಯಕ್ತವಾಗಿದೆ. ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದ ತಿಳಿಯಬೇಕಾಗಿದೆ.