ಮಂಗಳೂರು | ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ವಕೀಲ ರಾಜೇಶ್‌ ವಿರುದ್ದ ಚಾರ್ಚ್‌ಶೀಟ್‌

Dakshina kannada
  • ತರಬೇತಿಗೆ ಬಂದಿದ್ದ ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ಆರೋಪ
  • ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ವಕೀಳ

ತರಬೇತಿಗೆ ಬಂದಿದ್ದ ಕಾನೂನು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ವಕೀಲ ರಾಜೇಶ್ ಭಟ್ ವಿರುದ್ದ ಮಂಗಳೂರಿನ ಜೆಎಮ್‌ಎಫ್‌ಸಿ ಮೂರನೇ ನ್ಯಾಯಾಲಯದಲ್ಲಿ ಚಾರ್ಚ್‌ಶೀಟ್‌ ಸಲ್ಲಿಕೆಯಾಗಿದೆ.

ಪ್ರಕರಣದ ತನಿಖೆಯನ್ನು ಎಸಿಪಿ ದಿನಕರ ಶೆಟ್ಟಿ ನಡೆಸಿದ್ದಾರೆ. ತನಿಖೆಯ ವೇಳೆ ವಿದ್ಯಾರ್ಥಿನಿ ಮೇಲೆ ವಕೀಲ ರಾಜೇಶ್‌ ಬೆದರಿಕೆ ಹಾಕಿದ್ದನು ಎಂಬ ವಿಷಯವನ್ನು ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಎಸಿಪಿ ದಿನಕರ ಶೆಟ್ಟಿ ಚಾರ್ಚ್‌ಶೀಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಘಟನೆಯ ಹಿನ್ನೆಲೆ:

ನಗರದ ಕಾನೂನು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಆಗಸ್ಟ್‌ 8, 2021ರಲ್ಲಿ ವಕೀಲ ರಾಜೇಶ್ ಅವರ ಕರಂಗಲ್ಪಾಡಿ ಕಚೇರಿಯಲ್ಲಿ ತರಬೇತಿಯ ಹಿನ್ನೆಲೆಯಲ್ಲಿ ಸೇರಿಕೊಂಡಿದ್ದಳು. ಪ್ರತಿನಿತ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು,  ಸೆಪ್ಟಂಬರ್ 25ರಂದು ತನ್ನ ಚೆಂಬರ್‌ಗೆ ವಿದ್ಯಾರ್ಥಿನಿಯನ್ನು ಕರೆಸಿ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದನು ಎಂದು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. 

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಸಂಜೆ ವ್ಯಾಪಾರ ವಹಿವಾಟಿಗೆ ಅನುಮತಿ ನೀಡುವಂತೆ ಮನವಿ

ವಿದ್ಯಾರ್ಥಿನಿ ನೀಡಿದ ಆರೋಪದ ಆಧಾರದ ಮೇಲೆ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ, ಸಂತ್ರಸ್ತೆಯ ಜೊತೆ ವಕೀಲ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋವನ್ನು ತಿರುಚಲಾಗಿದೆ ಎಂದು ವಕೀಲರು ಉರ್ವ ಪೊಲೀಸ್ ಠಾಣೆಗೆ ಬಂದು ಆರೋಪಿಸಿದ್ದರು.

ವಕೀಲ ರಾಜೇಶ್​ ವಿರುದ್ಧ ಲುಕ್​ಔಟ್​ ನೋಟಿಸ್​:

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ನ್ಯಾಯವಾದಿ ರಾಜೇಶ್ ಭಟ್ ವಿದೇಶಕ್ಕೆ ಪರಾರಿಯಾಗದಂತೆ ಪೊಲೀಸರು ಬೇಹುಗಾರಿಕಾ ಸಂಸ್ಥೆಯ (ಐಬಿ) ಮೂಲಕ ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೇ ಅವರ 12 ಬ್ಯಾಂಕ್  ಖಾತೆ​​ಗಳನ್ನು  ತಟಸ್ಥಗೊಳಿಸಲಾಗಿತ್ತು.

ನ್ಯಾಯಾಲಯದ ಮುಂದೆ ಶರಣಾಗಿದ್ದ ವಕೀಲ:

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಬಳಿಕ ವಕೀಲ ರಾಜೇಶ್ ನಾಪತ್ತೆಯಾಗಿದ್ದರು. ಆರೋಪಿ ವಕೀಲರಿಗೆ ಸಹಕಾರ ನೀಡಿದ ಕಾರಣಕ್ಕೆ ವಕೀಲನ ಪತ್ನಿ ಸೇರಿದಂತೆ ಹಲವರನ್ನು ಬಂಧಿಸಲ್ಪಟ್ಟಿದ್ದರೂ ಆರೋಪಿ ಪತ್ತೆಯಾಗಿರಲಿಲ್ಲ. 2021 ಡಿಸೆಂಬರ್​ 20ರಂದು ಆರೋಪಿ ನ್ಯಾಯಾಲಯದ ಮುಂದೆ ಶರಣಾಗಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್