ಮಂಗಳೂರು ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕು: ಬಿ.ಕೆ ಹರಿಪ್ರಸಾದ್ ಒತ್ತಾಯ

  • "ಪ್ರಪಂಚದಲ್ಲಿರುವುದು ಒಂದೇ ಜಾತಿ, ಒಂದು ಧರ್ಮ, ಒಂದೇ ದೇವರು"
  • "ನಾರಾಯಣ ಗುರುಗಳ ಪಾಠಗಳನ್ನು ಕೈಬಿಡುವ ಹುನ್ನಾರ ನಡೆದಿತ್ತು"

ಮಂಗಳೂರು ರೈಲು ನಿಲ್ದಾಣಕ್ಕೆ ಸಮಾಜ ಸುಧಾರಕ ನಾಯಯಣ ಗುರು ಅವರ ಹೆಸರಿಡಬೇಕು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ನಾರಾಯಣ ಗುರು ಜನ್ಮದಿನದ ಅಂಗವಾಗಿ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿನಲ್ಲಿ ಶನಿವಾರ ‘ಗುರು ಸಂದೇಶ ಯಾತ್ರೆ’ ಆಯೋಜಿಸಿದ್ದರು. ಯಾತ್ರೆಗೆ ಚಾಲನೆ ನೀಡಿ ಹರಿಪ್ರದಾಸ್ ಮಾತನಾಡಿದರು. 

"ನಾರಾಯಣ ಗುರುಗಳು 1908ರಲ್ಲಿ ಮೊದಲ ಬಾರಿಗೆ ರೈಲಿನ ಮೂಲಕ ಮಂಗಳೂರು (ದಕ್ಷಿಣ ಕನ್ನಡ ಜಿಲ್ಲೆ) ಕೇಂದ್ರ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ನಂತರ ಅವರು ಕುದ್ರೋಳಿಯಲ್ಲಿ ಶಿವಲಿಂಗವನ್ನು ಸ್ಥಾಪಿಸಿದರು. ಮುಂದೆ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನವಾಗಿ ಮಾರ್ಪಟ್ಟಿತು" ಎಂದು ಅವರು ಹೇಳಿದ್ದಾರೆ. 

"ನಾರಾಯಣ ಗುರುಗಳು ಕೇವಲ ದಕ್ಷಿಣ ಕನ್ನಡ ಮತ್ತು ಕೇರಳದಲ್ಲಿ ಮಾತ್ರ ಪ್ರಸಿದ್ದರಲ್ಲ. ಅವರು ಪ್ರಪಂಚದಾದ್ಯಂತ ಪರಿಚಿತರಾಗಿದ್ದಾರೆ. ಅವರು ಇಡೀ ಪ್ರಪಂಚದಲ್ಲಿರುವುದು ಒಂದೇ ಜಾತಿ, ಒಂದು ಧರ್ಮ, ಒಂದೇ ದೇವರು ಎಂದು ಪ್ರಚಾರ ಮಾಡಿದರು" ಎಂದು ಹರಿಪ್ರಸಾದ್‌ ವಿವರಿಸಿದ್ದಾರೆ.

ಶಾಂತಿಪ್ರಿಯರ, ಸಹಿಷ್ಣುಗಳ ನಾಡಾಗಿದ್ದ ಮಂಗಳೂರು ಕಳೆದ ಕೆಲವು ವರ್ಷಗಳಿಂದ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ನಾರಾಯಣ ಗುರುಗಳು ಶಿವಲಿಂಗವನ್ನು ಪ್ರತಿಷ್ಠಾಪಿಸದೇ ಇದ್ದಿದ್ದರೆ ಜಿಲ್ಲೆಯ ವಂಚಿತ ವರ್ಗದ ಅನೇಕರು ಮತಾಂತರಗೊಳ್ಳುತ್ತಿದ್ದರು. ಸಮಾನತೆಯನ್ನು ಬೋಧಿಸಿದ ಸಮಾಜ ಸುಧಾರಕ ನಾರಾಯಣ ಗುರುಗಳ ಪಾಠಗಳನ್ನು ಪಠ್ಯಪುಸ್ತಕಗಳಿಂದ ಕೈಬಿಡುವ ಪ್ರಯತ್ನಗಳನ್ನು ಬಿಜೆಪಿ ಸರ್ಕಾರ ಮಾಡಿತ್ತು" ಎಂದು ಅವರು ಹೇಳಿದ್ದಾರೆ. 

"ಸಮಾನತೆ, ಸಾಮಾಜಿಕ ನ್ಯಾಯ, ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ಆಶಯಗಳನ್ನು ವಿರೋಧಿಸುವವರ ಹೆಸರನ್ನು ಪಠ್ಯಪುಸ್ತಕಗಳಲ್ಲಿ ಸೇರಿಸುವ ಪ್ರಯತ್ನ ನಡೆದಿದೆ" ಎಂದು ಬಿಜೆಪಿ ವಿರುದ್ಧ ಪರಿಷತ್ ವಿಪಕ್ಷ ನಾಯಕರು ಕಿಡಿಕಾರಿದ್ದಾರೆ. 

"ನಾರಾಯಣ ಗುರುಗಳು ತಾವು ಯಾವುದೇ ಧರ್ಮದ ವಿರುದ್ಧವಿಲ್ಲ ಎಂದಿದ್ದರು. ಅವರು ಧರ್ಮದಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಮಾತ್ರ ಪ್ರಯತ್ನಿಸಿದರು. ನಾರಾಯಣ ಗುರುಗಳ ಕುರಿತು ಸಂದೇಶ ಸಾರುವ ಅಗತ್ಯವಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕು. ಈ ಕುರಿತು ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸುತ್ತೇನೆ" ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್