ಮಂಗಳೂರು | ಮೂರು ಜಿಲ್ಲೆಗಳಲ್ಲಿ ‘ಮತ್ಸ್ಯ ಗ್ರಾಮ’ ಸ್ಥಾಪನೆಗೆ ಸರ್ಕಾರದ ಚಿಂತನೆ

Dakshina kannada
  • ಸುಮಾರು 7.5 ಕೋಟಿ ವೆಚ್ಚದಲ್ಲಿ ನಿರ್ಮಾಣ
  • ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಾಪನೆ 

‘ಮತ್ಸ್ಯ ಸಂಪದ’ ಯೋಜನೆಯಡಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದೊಂದು 'ಮತ್ಸ್ಯ ಗ್ರಾಮ'ಗಳನ್ನು ಸ್ಥಾಪಿಸಲು ಪ್ರಸ್ತಾಪ ನೀಡಲಾಗಿದೆ. ಸುಮಾರು 7.5 ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ಸ್ಯ ಗ್ರಾಮ ನಿರ್ಮಾಣ ಮಾಡಲಾಗುವುದು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

ಮಂಗಳೂರಿನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಮತ್ಸ್ಯ ಗ್ರಾಮದಲ್ಲಿ ಹಸಿ ಮೀನು ಮಾರಾಟ ವ್ಯವಸ್ಥೆ, ಮೀನು ಒಣಗಿಸುವ ಸೌಕರ್ಯ, ಮಂಜುಗಡ್ಡೆ ಘಟಕ, ಉದ್ಯಾನ, ಬಲೆ ತಯಾರಿ ಘಟಕ, ಮೀನು ಶುಚಿಗೊಳಿಸುವುದಕ್ಕೆ ಪ್ರತ್ಯೇಕ ಜಾಗ, ವಿಶ್ರಾಂತಿ ಗೃಹ, ಮೀನಿನ ಖಾದ್ಯಗಳನ್ನು ಪೂರೈಸುವ ಹೊಟೇಲ್ ಹೀಗೆ ಮೊದಲಾದ ಸೌಕರ್ಯಗಳನ್ನು ಒದಗಿಸಲಾಗುತ್ತದೆ” ಎಂದರು.

“ಮತ್ಸ್ಯ ಗ್ರಾಮಕ್ಕೆ ಸೂಕ್ತ ಸ್ಥಳವನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ದಕ್ಷಿಣ ಜಿಲ್ಲೆಯಲ್ಲಿ ಸ್ಥಳಾವಕಾಶ ನೀಡಲು ಜಿಲ್ಲಾಡಳಿತ ಒಪ್ಪಿಗೆ ನೀಡಿದ್ದು, ಸುರತ್ಕಲ್‌ನ ಸಸಿಹಿತ್ಲುವಿನ ಬಳಿ ಐದು ಎಕರೆ ಭೂಮಿ ಮಂಜೂರು ಮಾಡುವುದಾಗಿ ತಿಳಿಸಿದೆ. ಉಡುಪಿಯ ಮಲ್ಪೆ ಹಾಗೂ ಉತ್ತರ ಕನ್ನಡದ ಹೊನ್ನಾವರದಲ್ಲಿ ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಯುತ್ತಿದೆ” ಎಂದರು.

ಈ ಸುದ್ದಿ ಓದಿದ್ದೀರಾ?: ಪಿಎಫ್‌ ಐ ವಿರುದ್ಧ ಕಾರ್ಯಾಚರಣೆ| ಯಾವ್ಯಾವ ಜಿಲ್ಲೆಗಳಲ್ಲಿ ದಾಳಿ? ಎಷ್ಟು ಮಂದಿ ವಶಕ್ಕೆ?

“ಮಹಿಳಾ ಮೀನು ಮಾರಾಟಗಾರರಿಗೆ ಅನುಕೂಲವಾಗುವಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ಸಿಗುವಂತೆ ಮಾಡಲಾಗುವುದು. ತ್ರಿಚಕ್ರ ವಾಹನದಲ್ಲಿ ಶೀಥಲಿಕರಣ ವ್ಯವಸ್ಥೆಯನ್ನು ಅಳವಡಿಸಿ ಮಹಿಳೆಯರೇ ಚಲಾಯಿಸಿಕೊಂಡು ಹೋಗಿ ಮೀನು ಮಾರಾಟ ಮಾಡುವ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಯಂತ್ರಕ್ಕೆ ಸುಮಾರು 8 ಲಕ್ಷ ರೂಪಾಯಿ ವೆಚ್ಚವಾಗುತ್ತದೆ” ಎಂದರು.

“ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಅನುದಾನ ನೀಡುತ್ತದೆ. ಶೇಕಡಾ 40ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸಿದರೆ ಉಳಿದ ಶೇಕಡ 60ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಮೀನಿನ ತ್ಯಾಜ್ಯವನ್ನು ಬಳಸಿ ಜೈವಿಕ ಅನಿಲ ತಯಾರಿಸುವ ಘಟಕವನ್ನು ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಆರಂಭಿಸಲಾಗುವುದು” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಸದಸ್ಯೆ ಕೇಸರಿ ಯುವರಾಜ್‌, ಸದಸ್ಯ ಕಾರ್ಯದರ್ಶಿ ಪ್ರದೀಪ್‌ ಡಿಸೋಜಾ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಮತ್ತಿತ್ತರು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್