‘ಮೊಟ್ಟೆ ದಾಳಿ’ ರಾಜ್ಯ ಸರ್ಕಾರದ ಪ್ರಾಯೋಜಿತ ಕೃತ್ಯ; ವಿಪಕ್ಷ ಉಪನಾಯಕ ಯು ಟಿ ಖಾದರ್

Dakshina kannada
  • ಕಾಂಗ್ರೆಸ್‌ನ ಜನಪರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ
  • ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭಯ

ಮಡಿಕೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ‘ಮೊಟ್ಟೆ ದಾಳಿ’ ಪರೋಕ್ಷವಾಗಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಪ್ರಾಯೋಜಿತ ಕೃತ್ಯವೆಂದು ಶಾಸಕ ಯು ಟಿ ಖಾದರ್ ಆರೋಪಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು,  “ಕಾಂಗ್ರೆಸ್‌ನ ಜನಪರ ಧ್ವನಿಯನ್ನು ಹತ್ತಿಕ್ಕಲು ಇಂತಹ ಕೃತ್ಯಗಳನ್ನು ಬಿಜೆಪಿ ನಡೆಸಿದೆ. ಮಾಜಿ ಮುಖ್ಯಮಂತ್ರಿಯನ್ನು ಅವಮಾನಿಸಲೆಂದೇ ನಿಂತ ಗುಂಪನ್ನು ಚದುರಿಸುವ ಬದಲು ಗುಂಪಿನ ಕೈಗೊಂಬೆಯಾಗಿ ಪೊಲೀಸರು ವರ್ತಿಸಿದ್ದಾರೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ” ಎಂದರು.

"ಮುಂದಿನ ಚುನಾವಣೆಯಲ್ಲಿ ಸೋಲುವ ಭಯ ಬಿಜೆಪಿ ಸರ್ಕಾರಕ್ಕೆ ಕಾಡಿದೆ. ಆ ಕಾರಣಕ್ಕೆ ಕಾಂಗ್ರೆಸ್‌ ನಾಯಕರ ವಿರುದ್ಧ ಇಂತಹ ಕೃತ್ಯವನ್ನು ನಡೆಸುತ್ತಿದೆ. ಇದರಿಂದ ಬಿಜೆಪಿಯ ಮುಖವಾಡ ಜನರಿಗೆ ತಿಳಿಯಿತು" ಎಂದರು.

“ಫ್ಲೆಕ್ಸ್‌ ಹಾಕುವುದಕ್ಕೆ ಅನುಮತಿ ಪಡೆದರೆ ಸಾಕಾಗುವುದಿಲ್ಲ. ಎಂತಹ  ಫ್ಲೆಕ್ಸ್‌ ಹಾಕಬೇಕೆಂಬ ಕನಿಷ್ಠ ಜ್ಞಾನವಿರಬೇಕು. ನಮ್ಮ ಊರಿನಲ್ಲಿ ಹಾಕಿರುವ ಫ್ಲೆಕ್ಸ್‌ ನೋಡಿ ಜನರು ನಗಾಡಿಕೊಂಡು ಹೋಗಿದ್ದಾರೆ. ಅನುಮತಿ ಪಡೆಯದೇ ಹಾಕಿರುವ ಫ್ಲೆಕ್ಸ್‌ಗಳನ್ನು ಸಂಬಂಧಪಟ್ಟವರು ತೆಗೆಸಿದ್ದಾರೆ”  ಎಂದು ಫ್ಲೆಕ್ಸ್‌ ವಿವಾದದ ಬಗ್ಗೆ ಸೃಷ್ಟೀಕರಣ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: 'ನನ್ನ ಸ್ವಾತಂತ್ರ್ಯ ದಿನಾಚರಣೆ ಹೀಗಿತ್ತು': 'ಮುಸ್ಲಿಂ' ಆಗಿದ್ದಕ್ಕೆ ಮನೆ ನಿರಾಕರಿಸಿದ್ದನ್ನು ಹಂಚಿಕೊಂಡ ಬೆಂಗಳೂರಿನ ಮಹಿಳೆ

“ನೆಹರೂ ಅವರ ಪೋಟೋ ಕೈಬಿಟ್ಟಿರುವುದು ಒಳ್ಳೆಯದೇ ಆಯಿತು. ಯಾರ್‍ಯಾರೋ ಪೋಟೋ ನಡುವೆ ಅವರ ಪೋಟೋ ಬರುವುದು ಅವರ ಘನತೆಗೆ ಧಕ್ಕೆ. ಆದರೆ, ಪೋಟೋ ಕೈಬಿಟ್ಟು ಯಾವ ಸಂದೇಶ ನೀಡಲು ರಾಜ್ಯ ಸರ್ಕಾರ ಹೊರಟಿದೆ ಎಂದು ತಿಳಿಯಬೇಕಿದೆ” ಎಂದು ಆಗ್ರಹಿಸಿದರು.

“ಸಾವರ್ಕರ್ ದೇಶಪ್ರೇಮಿ ಅಲ್ಲ ಎಂದು ಕಾಂಗ್ರೆಸ್‌ ಹೇಳಿಲ್ಲ. ಸಾವರ್ಕರ್ ಬಗ್ಗೆ ಕಾಂಗ್ರೆಸ್‌ಗೆ ಸೈದ್ದಾಂತಿಕ ಭಿನ್ನಾಭಿಪ್ರಾಯವಿದೆ ಅಷ್ಟೇ. ಸಾವರ್ಕರ್ ದಯಾ ಭಿಕ್ಷೆ ಕೋರಿ ಬ್ರಿಟೀಷರಿಗೆ ಪತ್ರ ಬರೆದಿದ್ದರು. ನೆಹರೂ ದಯಾ ಭಿಕ್ಷೆಯ ಪತ್ರವನ್ನು ತಮ್ಮ ಪತ್ನಿಗೆ ನೀಡಿದ್ದರು. ಇದು ನೆಹರೂ ಮತ್ತು ಸಾವರ್ಕರ್ ನಡುವಿನ ವ್ಯತ್ಯಾಸ. 1924ರ ನಂತರ ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ ಎಂಬ ಒಂದು ಉದಾಹರಣೆ ಕೂಡ ಇಲ್ಲ” ಎಂದು ಖಾದರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಸಂತೋಷ್‌ಕುಮಾರ್ ಶೆಟ್ಟಿ, ಸದಾಶಿವ ಉಳ್ಳಾಲ್‌, ದೇವನಂದ ಶೆಟ್ಟಿ, ಫಾರೂಕ್‌, ರೆಹಮಾನ್‌, ಅಚ್ಚುತ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180