ದಕ್ಷಿಣ ಕನ್ನಡ | ಕೊಲೆ ಅಪರಾಧಿ ಪ್ರವೀಣ್ ಕುಮಾರ್ ಜೈಲಿನಿಂದ ಬಿಡುಗಡೆ ಮಾಡದಂತೆ ತಿಳಿಸಿದ್ದೇವೆ: ಎಸ್‌ಪಿ

  • 1994ರಲ್ಲಿ ಮಂಗಳೂರನ್ನು ಬೆಚ್ಚಿ ಬೀಳಿಸಿದ್ದ ಕೊಲೆ ಅಪರಾಧಿ ಪ್ರವೀಣ್ ಕುಮಾರ್
  • ಪ್ರವೀಣ್ ಕುಮಾರ್ ಬಿಡುಗಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕುಟುಂಬ ಸದಸ್ಯರು

ಚಿನ್ನದ ದುರಾಸೆಯಿಂದ ತನ್ನ ನಾಲ್ವರು ಸಂಬಂಧಿಕರನ್ನು ಕೊಂದ ಪ್ರವೀಣ್ ಕುಮಾರ್‌ನನ್ನು ಸನ್ನಡತೆಗಾಗಿ ಭಾರತದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಉತ್ತಮ ನಡತೆಗಾಗಿ ಬಿಡುಗಡೆ ಮಾಡುವ ಸಾಧ್ಯತೆ ತುಂಬಾ ಕಡಿಮೆ ಎಂದು ತಿಳಿದುಬಂದಿದೆ.

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಜೈಲಿನಲ್ಲಿರುವ ಅಪರಾಧಿಗಳನ್ನು ಸನ್ನಡತೆಯಿಂದಾಗಿ ಬಿಡುಗಡೆ ಮಾಡುವ ಅಪರಾಧಿಗಳ ಪಟ್ಟಿಯಲ್ಲಿ ಪ್ರವೀಣ್ ಕುಮಾರ್ ಅವರ ಹೆಸರು ಕಾಣಿಸಿಕೊಂಡಿರುವ ಬಗ್ಗೆ ವರದಿ ನೀಡುವಂತೆ ರಾಜ್ಯ ಕಾರಾಗೃಹ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗೆ ಸೂಚಿಸಿತ್ತು.

ಕುಟುಂಬ ಸದಸ್ಯರ ಹೇಳಿಕೆಯನ್ನು ಜಿಲ್ಲಾ ಪೊಲೀಸರು ಪಡೆದಿದ್ದು, ಘೋರ ಅಪರಾಧಕ್ಕೆ ಬಲಿಯಾದವರಿಬ್ಬರ ಕುಟುಂಬ ಸದಸ್ಯರು ಪ್ರವೀಣ್ ನನ್ನು ಬಿಡುಗಡೆ ಮಾಡಬಾರದು ಎಂದು ಈಗಾಗಲೇ ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಅವನನ್ನು ಬಿಡುಗಡೆ ಮಾಡಿದರೆ ಇಡೀ ಕುಟುಂಬವು ಅವನಿಂದ ಜೀವ ಬೆದರಿಕೆಯನ್ನು ಎದುರಿಸಬೇಕಾಗುತ್ತದೆ ಎಂದು ಕೊಲೆಯಾಗಿದ್ದ ಅಪ್ಪಿ ಶೇರಿಗಾರ್ತಿಯ ಮಗ ಸೀತಾರಾಮ ಗುರುಪುರ ತಿಳಿಸಿದ್ದರು. ಜೊತೆಗೆ ಜನ ಪ್ರತಿನಿಧಿಗಳು ಮತ್ತು ವಿವಿಧ ಹುದ್ದೆಗಳ ಅಧಿಕಾರಿಗಳು ಸಹ ಪ್ರವೀಣ್‌ನನ್ನು ಬಿಡುಗಡೆ ಮಾಡದಂತೆ ಮನವಿ ಮಾಡಿದ್ದರು.

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಮಾತನಾಡಿ, "ಪ್ರವೀಣ್ ಕುಮಾರ್ ಅವರ ಬಿಡುಗಡೆಗೆ ಕುಟುಂಬ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಅವರನ್ನು ಬಿಡುಗಡೆ ಮಾಡಬಾರದು ಎಂದು ನಾವು ಕಾರಾಗೃಹ ಇಲಾಖೆಗೆ ವರದಿ ಕಳುಹಿಸಿದ್ದೇವೆ. ಆದ್ದರಿಂದ ಅವರ ಬಿಡುಗಡೆಯ ಸಾಧ್ಯತೆಗಳು ತುಂಬಾ ಕಡಿಮೆ" ಎಂದು ಮಾಧ್ಯಮವೊಂದಕ್ಕೆ  ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಟೈಲರ್ ಪ್ರವೀಣ್ ನಡೆಸಿದ್ದ ಭೀಕರ ಹತ್ಯೆಗಳು: ಮಂಗಳೂರನ್ನು ಬೆಚ್ಚಿ ಬೀಳಿಸಿದ್ದ ಮೂರು ದಶಕದ ಕೊಲೆ ಕೇಸಿಗೆ ಈಗ ಮರುಜೀವ!

1994ರಲ್ಲಿ ಚಿನ್ನಾಭರಣಕ್ಕಾಗಿ ತನ್ನ ಅತ್ತೆ ಅಪ್ಪಿ ಶೇರಿಗಾರ್ತಿ, ಆಕೆಯ ಮಗ ಗೋವಿಂದ, ಮಗಳು ಶಕುಂತಲಾ ಮತ್ತು ಶಕುಂತಲಾ ಅವರ ಮಗಳು ದೀಪಿಕಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದನು.

ದುರಂತಕ್ಕೆ ಬಲಿಯಾದ ಅಪ್ಪಿ ಶೇರಿಗಾರ್ತಿ ಅವರ ಪುತ್ರ ಸೀತಾರಾಮ ಗುರುಪುರ ಅವರು, 'ಪ್ರವೀಣ್ ಕುಮಾರ್ ಅವರನ್ನು ಬಿಡುಗಡೆ ಮಾಡುವುದಿಲ್ಲ ಎಂದು ಸಚಿವಾಲಯದಿಂದ ಮಾಹಿತಿ ಬಂದಿದೆ ಮತ್ತು ಪ್ರವೀಣ್ ಜೈಲಿನಿಂದ ಹೊರಬರುವುದಿಲ್ಲ ಎಂಬ ವಿಶ್ವಾಸವಿದೆ' ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್