ಮಂಗಳೂರು ದಸರಾಗೆ ಕೆಎಸ್ಆರ್‍‌ಟಿಸಿ 'ಟೂರ್ ಪ್ಯಾಕೇಜ್'; 9 ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ಅವಕಾಶ

Dakshina kannada
  • ಸೆಪ್ಟೆಂಬರ್ 26ರಿಂದ ಧಾರ್ಮಿಕ ಪ್ರವಾಸ ಆರಂಭ
  • ಆನ್‌ಲೈನ್‌ನಲ್ಲಿ ಪ್ರಾರಂಭವಾದ ಬುಕ್ಕಿಂಗ್

ಮೈಸೂರು ದಸರಾ ಪ್ಯಾಕೇಜ್‌ನಂತೆಯೇ ಇದೇ ಮೊದಲ ಬಾರಿಗೆ ‘ಮಂಗಳೂರು ದಸರಾ’ ಪ್ಯಾಕೇಜ್‌ವೊಂದು ಘೋಷಣೆಯಾಗಿದೆ. ಕೆಎಸ್ಆರ್‍‌ಟಿಸಿ ಮಂಗಳೂರು ವಿಭಾಗವು ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ಅನುಕೂಲವಾಗುವಂತೆ ‘ಟೂರ್ ಪ್ಯಾಕೇಜ್’ ಘೋಷಿಸಿದೆ. ಒಂದು ದಿನದಲ್ಲಿ ಮಂಗಳೂರಿನ ಸುತ್ತಮುತ್ತವಿರುವ ಸುಮಾರು 9 ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಅವಕಾಶವನ್ನು ಕಲ್ಪಿಸಿದೆ.

ಕರಾವಳಿ ಭಾಗದಲ್ಲಿ ‘ಮಂಗಳೂರು ದಸರಾ’ ಅತ್ಯಂತ ಜನಪ್ರಿಯ ಹಬ್ಬವಾಗಿದೆ. ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಒಂಭತ್ತು ದಿನಗಳ ಕಾಲ ವೈಭವದ ದಸರಾ ನಡೆಯುತ್ತದೆ. ಸಾವಿರಾರು ಜನರು ಈ ವೈಭವದಲ್ಲಿ ಭಾಗಿಯಾಗುತ್ತಾರೆ. 

ಈ ಸಂಸತಸವನ್ನು ಇಮ್ಮಡಿಗೊಳಿಸಲು ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರ ಕೆಎಸ್ಆರ್‌ಟಿಸಿ ಟೂರ್ ಪ್ಯಾಕೇಜ್ ಘೋಷಿಸಿದೆ. ಒಂದು ದಿನದ ಪ್ರವಾಸಕ್ಕೆ ವಯಸ್ಕರಿಗೆ 300 ರೂಪಾಯಿ ಹಾಗೂ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ 250 ರೂಪಾಯಿ ನಿಗದಿಪಡಿಸಲಾಗಿದೆ. ಒಂದು ಬಸ್‌ನಲ್ಲಿ ಸುಮಾರು 30 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಊಟ ಮತ್ತು ಉಪಹಾರದ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು ಎಂದು ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?: ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರ್ಪಡೆ ವಿರೋಧಿಸಿದ ವಿದ್ಯಾರ್ಥಿ ಸಂಘಟನೆ

ಎಂಟು ಗಂಟೆಗೆ ವಿಶೇಷ ಟೂರ್ ಪ್ಯಾಕೇಜಿನ ಬಸ್ ಮಂಗಳೂರಿನ ಬಿಜೈ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಮಂಗಳಾದೇವಿ ದೇವಸ್ಥಾನಕ್ಕೆ ಹೊರಡುತ್ತದೆ. ನಂತರ 9 ಗಂಟೆಯ ವೇಳೆಗೆ ಅಲ್ಲಿಂದ ತೆರಳಿ ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ತಲುಪುತ್ತದೆ. ನಂತರ ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ದೇವಸ್ಥಾನದಿಂದ ಸಸಿಹಿತ್ಲು ಶ್ರೀಭಗವತಿ ದೇವಸ್ಥಾನ, ಚಿತ್ರಾಪುರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಉರ್ವ ಶ್ರೀಮಾರಿಯಮ್ಮ ದೇವಸ್ಥಾನ ತಲುಪಿ ನಂತರ ಅಲ್ಲಿಂದ ಸುಮಾರು 6.30ರ ಸಮಯದಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ತಲುಪಲಿದೆ.

ಆನ್ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದ್ದು, ಈಗಾಗಲೇ ಬುಕಿಂಗ್ ಪ್ರಾರಂಭಗೊಂಡಿದೆ. ಸ್ಥಳದಲ್ಲಿಯೇ ಟಿಕೆಟ್ ಕೊಡುವ ವ್ಯವಸ್ಥೆಯೂ ಇದೆ. ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಬಸ್‌ ನಿಲ್ದಾಣದ ಮುಂಗಡ ಬುಕ್ಕಿಂಗ್ ಕೌಂಟರ್ ಸಂಖ್ಯೆ 9663211553 ಕ್ಕೆ ಕರೆ ಮಾಡುವಂತೆ ತಿಳಿಸಿದೆ. ಪ್ರಯಾಣಿಕರ ಸ್ಪಂದನೆಗೆ ಅನುಗುಣವಾಗಿ ಬೇಡಿಕೆ ಹೆಚ್ಚಾದರೆ ಹೆಚ್ಚು ಬಸ್‌ಗಳ ವ್ಯವಸ್ಥೆ ಮಾಡುವುದಕ್ಕೆ ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180