ದಕ್ಷಿಣ ಕನ್ನಡ | ಕಳೆಗುಂದಿರುವ 'ನಾಟಿ ಚಿಕಿತ್ಸೆ'ಯಲ್ಲಿ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಲಲಿತಾ ಕೋಟೆಬಾಗಿಲು

  • ತಂದೆಯ ನಂತರ ನಾಟಿ ವೈದ್ಯ ಪದ್ಧತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಗಳು
  • ನಾಟಿ ವೈದ್ಯ ಪದ್ಧತಿ ಮುಂದುವರಿಸಲು ಅವಿವಾಹಿತೆಯಾಗಿ ಉಳಿದಿರುವ ಲಲಿತಾ

ವಂಶ ಪಾರಂಪರ್ಯವಾಗಿ ಬರುವ ನಾಟಿ ವೈದ್ಯ ಪದ್ಧತಿಗೆ ನಮ್ಮ ದೇಶದ ಹಲವೆಡೆ ಇಂದಿನ ಆಧುನಿಕ ಕಾಲದಲ್ಲೂ ಮಹತ್ವವಿದೆ. ಇಂದು ಅದೆಷ್ಟೋ ಕಾಯಿಲೆಗಳಿಗೆ ನಾಟಿ ವೈದ್ಯ ಪದ್ಧತಿಯೇ ಆಧಾರವಾಗಿದೆ. ಆಂಗ್ಲ ಔಷಧೋಪಚಾರಗಳು ಬರುವ ಮುಂಚೆ ಭಾರತ ದೇಶ ನಾಟಿ ವೈದ್ಯ ಪದ್ಧತಿಯನ್ನು ಅವಲಂಬಿಸಿದ್ದವು. ಬಳಿಕ ಜನರು ಬೇಗನೆ ಗುಣಮುಖರಾಗುತ್ತಿದ್ದ ಆಂಗ್ಲ ಔಷಧೋಪಚಾರಗಳ ಕಡೆಗೆ ಹೆಚ್ಚು ವಾಲಿದ್ದರಿಂದ ನಂತರದ ದಿನಗಳಲ್ಲಿ ನಾಟಿ ವೈದ್ಯ ಪದ್ಧತಿ ಕಳೆಗುಂದುತ್ತಾ ಬಂದಿದೆ.

21ನೇ ಶತಮಾನದಲ್ಲಿಯೂ ವಂಶಪಾರರ್ಯವಾಗಿ ಬಂದಿರುವ ನಾಟಿ ವೈದ್ಯ ಪದ್ಧತಿಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವವರು ಈಗಲೂ ನಮ್ಮ ನಡುವೆಯೇ ಇದ್ದಾರೆ. ಇಂತಹ ಕೆಲವೇ ಕೆಲವು ಮಂದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ತಾಲೂಕಿನ ಕೋಟೆಬಾಗಿಲನ ಲಲಿತಾ ಕೂಡ ಒಬ್ಬರು.

ಗಿಡಮೂಲಿಕೆ ಬಗ್ಗೆ ಅಗಾಧವಾದ ಜ್ಞಾನ ಪಡೆದುಕೊಂಡಿರುವ ಲಲಿತಾ, ತಮ್ಮನ್ನು ಹುಡುಕಿಕೊಂಡು ಬರುವ ರೋಗಿಗಳ ಮೇಲೆ ತಮ್ಮ ಕೈಚಳಕದಲ್ಲೇ ತಯಾರಿಸಿದ ಮದ್ದನ್ನು ಪ್ರಯೋಗಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧ ನಾಟಿ ವೈದ್ಯೆ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ.

Image
lalilta moodbidre

ಎಂಟನೇ ತರಗತಿ ಓದುತ್ತಿರುವಾಗಲೇ ತಂದೆ, ಖ್ಯಾತ ನಾಟಿ ವೈದ್ಯ ಅಣ್ಣು ಮೇಸ್ತ್ರಿಯವರಿಂದ ನಾಟಿ ವೈದ್ಯ ಪದ್ಧತಿ ಬಗ್ಗೆ ತಿಳಿದುಕೊಂಡಿದ್ದರು. ಬಂದ ರೋಗಿಗಳಿಗೆ  ಮದ್ದು ಕೊಡುವುದನ್ನು ಕಲಿಯುತ್ತಿದ್ದರು. ತಂದೆ ಮರಣ ಹೊಂದಿದ ಬಳಿಕ ಅಂದರೆ ಸುಮಾರು 30 ವರ್ಷಗಳಿಂದ ನಾನಾ ರೋಗಗಳ ನಿವಾರಣೆಗಾಗಿ ಬಂದ ಎಲ್ಲ ರೋಗಿಗಳಿಗೆ ಸೂಕ್ತ ಔಷಧಿಗಳನ್ನು ನೀಡಿ ಗುಣಪಡಿಸುತ್ತಿದ್ದಾರೆ. ಈ ಕಾಯಕವನ್ನು ಈಗಲೂ ಮುಂದುವರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಮೈಸೂರು | ತಂಬಾಕು ಬೆಳೆಗೆ ಕರಿಕಡ್ಡಿ ರೋಗ; ಬೆಳೆ ನಷ್ಟದಿಂದ ಕಂಗಾಲಾದ ರೈತ

ಹಾವು ಕಡಿತ, ಸರ್ಪಸುತ್ತು, ಕೆಂಪು ರೋಗ (ತುಳುವಿನಲ್ಲಿ ಬಂಗಾರ್ ರೋಗ ಎನ್ನುತ್ತಾರೆ), ಕಜ್ಜಿ, ಬಾವು ಗಳಗಂಡರೋಗ) ಹೀಗೆ ಹಲವು ರೋಗಗಳಿಗೆ ನಾಟಿ ಮದ್ದಿನ ಮೂಲಕವೇ ಚಿಕಿತ್ಸೆ ನೀಡಿ ಅನೇಕ ರೋಗಿಗಳ ಬಾಳಿಗೆ ಹೊಸ ಬೆಳಕನ್ನು ನೀಡಿರುವುದು ಇವರ ವಿಶೇಷತೆ. 

ಅವಿವಾಹಿತರಾಗಿರುವ ಲಲಿತಾ, ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದಾರೆ. ತಂದೆ-ತಾಯಿ ಹಾಗೂ ಇಬ್ಬರು ಸಹೋದರರ ಮರಣದ ಬಳಿಕ ನಾಲ್ವರು ಅಕ್ಕಂದಿರ ಜೊತೆಗೆ ಸಹಬಾಳ್ವೆ ನಡೆಸುತ್ತಿದ್ದಾರೆ. ಮದುವೆ ಯಾಕೆ ಇನ್ನೂ ಆಗಿಲ್ಲ ಎಂದು ಯಾರಾದರೂ ಪ್ರಶ್ನಿಸಿದರೆ, 'ನಾಟಿ ಮದ್ದು ಕೊಡುವುದಕ್ಕಾಗಿಯೇ ಮದುವೆಯಾಗದೆ ಉಳಿದಿದ್ದೇನೆ' ಎಂದು ಮಾರುತ್ತರ ನೀಡುತ್ತಾರೆ.

ಇವರ ಸಾಧನೆಯನ್ನು ಗುರುತಿಸಿ ರೋಟರ್‍ಯಾಕ್ಟ್‌ ಸಂಸ್ಥೆ ಸೇರಿದಂತೆ ಅನೇಕ ಸಂಘ, ಸಂಸ್ಥೆಗಳು ಸನ್ಮಾನ ಮಾಡಿ, ಗೌರವಿಸಿದೆ.

"ಪ್ರತಿಷ್ಠಿತ ಆಸ್ಪತ್ರೆಗಳು ಕೆಲವೊಂದು ರೋಗಿಗಳಿಗೆ ಚಿಕಿತ್ಸೆ ನೀಡಿದ್ದರೂ ಅವರ ರೋಗ ಗುಣಮುಖರಾಗಿರಲಿಲ್ಲ. ಅಂತಹ ರೋಗಿಗಳು ನನ್ನನ್ನು ಹುಡುಕಿಕೊಂಡು ಬಂದು ಚಿಕಿತ್ಸೆ ಪಡೆಯುತ್ತಾರೆ. ಅಂತಹ ಹಲವಾರು ಮಂದಿ ನನ್ನಲ್ಲಿ ಚಿಕಿತ್ಸೆ ಪಡೆದು ಈಗ ಗುಣಮುಖರಾಗಿದ್ದಾರೆ. ಅದು ನನಗೆ ಸಂತಸ ನೀಡುತ್ತದೆ" ಎನ್ನುತ್ತಾರೆ ನಾಟಿ ವೈದ್ಯೆ ಲಲಿತಾ.

ಆಯುರ್ವೇದ ಮತ್ತು ನಾಟಿ ವೈದ್ಯ ಪದ್ಧತಿಗಿರಿರುವ ಅಂತರ ಕಡಿಮೆ. ಇವೆರಡರಲ್ಲಿಯೂ ಬಳಕೆಯಾಗುವುದು ಗಿಡಮೂಲಿಕೆಗಳೇ. ಆದರೆ ಔಷಧೋಪಾಚಾರದಲ್ಲಿ ನಾಟಿ ಪದ್ಧತಿಯು ಆಯುರ್ವೇದಕ್ಕಿಂತ ಸ್ಪಲ್ಪ ವಿಭಿನ್ನವಾಗಿದೆ. ನಾಟಿ ವೈದ್ಯ ಪದ್ಧತಿ ವಂಶಪಾರಂಪರ್ಯವಾಗಿ ಬರುವುದಾಗಿದ್ದು, ಸಾಮಾನ್ಯವಾಗಿ ಹಳ್ಳಿಗಳಲ್ಲಿ ಈ ಚಿಕಿತ್ಸೆ ಈಗಲೂ ಚಾಲ್ತಿಯಲ್ಲಿದೆ.

ಎಲ್ಲರಿಗೂ ಈ ಪದ್ಧತಿ ಬಗ್ಗೆ ತಿಳಿಯುವುದು ಕಡಿಮೆ. ನಾಟಿ ಚಿಕಿತ್ಸೆಯನ್ನೇ ರೂಢಿಯಾಗಿರಿಸಿಕೊಂಡು ಬಂದವರು ಅದನ್ನು ಬಳುವಳಿಯಾಗಿ ಇನ್ನೊಬ್ಬರಿಗೆ ನೀಡಬಹುದು. ಅಥವಾ ನೀಡದೆಯೂ ಇರಬಹುದು. ಎಷ್ಟೋ ನಾಟಿ ವೈದ್ಯ ಪದ್ಧತಿಗಳು ಇನ್ನೊಬ್ಬರಿಗೆ ತಿಳಿಯದೇ ಹಾಗೆ ನಾಶವಾಗಿ ಹೋಗಿರುವುದು ಮಾತ್ರ ಇತಿಹಾಸ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180