ಮೈಸೂರು | ಮಸೀದಿ ಮಾದರಿಯಲ್ಲಿ ‘ಬಸ್ ನಿಲ್ದಾಣ' ವಿವಾದ; ಸಂಸದ ಪ್ರತಾಪ್ ಸಿಂಹಗೆ ನೆಟ್ಟಿಗರ ತರಾಟೆ

Mysore
  • ‘ತೆರವುಗೊಳಿಸದಿದ್ದರೆ ಒಡೆದು ಹಾಕುತ್ತೇವೆ ಎಂದಿದ್ದ ಸಂಸದ
  • ಶಾಸಕ ರಾಮದಾಸ್ ನೇತೃತ್ವದಲ್ಲಿ ಬಸ್ ನಿಲ್ದಾಣ ನಿರ್ಮಾಣ

ಮೈಸೂರಿನ ಜೆಎಸ್ಎಸ್ ಕಾಲೇಜು ಬಳಿ ಸರ್ಕಾರವೇ ನಿರ್ಮಾಣ ಮಾಡಿರುವ ಬಸ್ ನಿಲ್ದಾಣದ ‘ವಿನ್ಯಾಸ’ ಹೊಸ ವಿವಾದ ಹುಟ್ಟುಹಾಕಿದೆ. ಬಸ್ ನಿಲ್ದಾಣವನ್ನು ‘ಮಸೀದಿ ಮಾದರಿ’ಯಲ್ಲಿ ಕಟ್ಟಿಸಲಾಗಿದೆ ಎಂಬುದು ವಿವಾದದ ಕೇಂದ್ರ ಬಿಂದುವಾಗಿದೆ. ವಿವಾದ ಸೃಷ್ಟಿಸಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. 

ಬಿಜೆಪಿ ಶಾಸಕ ರಾಮದಾಸ್‌ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಜೆಎಸ್‌ಎಸ್‌ ಕಾಲೇಜಿನ ಬಳಿ ಹೊಸ ಬಸ್‌ ತಂಗುದಾಣ ನಿರ್ಮಿಸಿದ್ದಾರೆ. ನಿಲ್ದಾಣವು ಇಂಡೋ-ಇಸ್ಲಾಮಿಕ್ ಶೈಲಿನ ವಿನ್ಯಾಸವನ್ನು ಹೊಂದಿದೆ. ಆದರೆ, ಸಂಸದ ಪ್ರತಾಪ್‌ ಸಿಂಹ ಅವರು ನಿಲ್ದಾಣವು ಮಸೀದಿ ಮಾದರಿಯಲ್ಲಿದೆ, ಅದನ್ನು ಕೆಡವಬೇಕೆಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.

‘ಮಸೀದಿ ಮಾದರಿಯಲ್ಲಿ ಕಟ್ಟಲಾಗಿರುವ ಬಸ್ ನಿಲ್ದಾಣವನ್ನು ಮೂರು ದಿನಗಳಲ್ಲಿ ತೆರವುಗೊಳಿಸಬೇಕು. ಇಲ್ಲದಿದ್ದರೆ, ಜೆಸಿಬಿ ತಂದು ಒಡೆದು ಹಾಕಲಾಗುವುದು’ ಎಂದು ಸಂಸದ ಪ್ರತಾಪ ಸಿಂಹ ಹೇಳಿಕೆ ನೀಡಿದ್ದು, ಅವರನ್ನು ನಾನಾ ರೀತಿಯಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಆದರೂ, ಈ ಮಧ್ಯೆ, ಸಂಸದರು ಹೇಳಿಕೆ ಬೆನ್ನಲ್ಲೇ ಬಸ್ ವಿನ್ಯಾಸವನ್ನು ಹಿಂದೂವೀಕರಣಗೊಳಿಸುವ ಪ್ರಯತ್ನಗಳು ರಾತ್ರೋರಾತ್ರಿ ನಡೆದಿವೆ. ಗುಮ್ಮಟದ ಮೇಲೆ ಕಳಶಗಳನ್ನು ಜೋಡಿಸಲಾಗಿದೆ. ಬಸ್ ನಿಲ್ದಾಣದ ಒಳಭಾಗದಲ್ಲಿ ಶಾಸಕ ರಾಮದಾಸ್, ಚಾಮುಂಡೇಶ್ವರಿ ದೇಮಸ್ಥಾನದ ಗೋಪುರ, ಮೈಸೂರು ಅರಮನೆ ಪೋಟೋವನ್ನು ಅಂಟಿಸಲಾಗಿದೆ.

Mysore
ಹಿಂದೂವೀಕರಣಗೊಂಡ ಬಸ್‌ ನಿಲ್ದಾಣ
 

ಬಸ್‌ ನಿಲ್ದಾಣದ ಹಿಂದೂವೀಕರಣ ಮತ್ತು ಸಂಸದರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು, "ಮೈಸೂರು ಅರಮನೆ, ಆದಿಚುಂಚನಗಿರಿ ಮಠ ಮತ್ತು ಆಸ್ಪತ್ರೆ, ಜೆಎಸ್ಎಸ್ ಕಾಲೇಜು ಮತ್ತು ಆಸ್ಪತ್ರೆ ಹೀಗೆ ಅನೇಕ ಕಟ್ಟಡಗಳಲ್ಲಿ ಗುಮ್ಮಟ ಮಾದರಿಯ ವಿನ್ಯಾಸವನ್ನು ಹೊಂದಿವೆ. ಬಸ್ ನಿಲ್ದಾಣವನ್ನು ಕೆಡವಲು ಜೆಸಿಬಿ ತರುವ ಸಂಸದರು, ಈ ಕಟ್ಟಡಗಳನ್ನು ಏನು ಮಾಡುತ್ತಾರೆ? ಎಲ್ಲದರಲ್ಲೂ ರಾಜಕೀಯ ಮಾಡುವ ಬಾಲಿಶ ಗುಣವನ್ನು ಸಂಸದರು ಬಿಡಬೇಕು" ಎಂದಿದ್ದಾರೆ. 

“ಮೈಸೂರು ನಗರದ ಊಟಿ ರಸ್ತೆಯಲ್ಲಿರುವ ಬಸ್ ತಂಗುದಾಣದ ಮೇಲಿನ ಗುಮ್ಮಟಗಳನ್ನು ಮೂರು ದಿನಗಳಲ್ಲಿ ತೆರವುಗೊಳಿಸಬೇಕೆನ್ನುವ ಪ್ರತಾಪ್ ಸಿಂಹ, ಮೈಸೂರು ಅರಮನೆಯನ್ನು ಏನು ಮಾಡುತ್ತಾರೆ?” ಎಂದು ಶೆಟ್ಟರ್ ಆಶೋಕ್‌ ಎಂಬವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. 

“’ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿನೇ’ ಮೈಸೂರಿನಲ್ಲಿ ನಿರ್ಮಿಸಿರು ಈ ಬಸ್ ಸ್ಟಾಂಡ್ ಪ್ರತಾಪುವಿಗೆ ಗೋಲ್ ಗುಮ್ಮಟ(ಮುಸ್ಲಿಂ ಮಸೀದಿ) ಮಾದರಿ ಇದೆ ಎಂದು ತಲೆ ಎಲ್ಲಾ ಕೆಡಸಿಕೊಂಡು ಮೂರು ದಿನ ವ್ಯಾಲಿಡಿಟಿ ಕೊಟ್ಟವರೇ. ಜೆಸಿಬಿ ಕರುಸ್ತಿನಿ ಹೇಳಿದ್ದಾನೆ. ಹಂಗೆ ಮೈಸೂರು ಅರಮನೆ ಕಡೆಗೆ ಕಣ್ಣು ಬಿಡು. ಅರಮನೆ ನಿನ್ನ ಕಣ್ಣಿಗೆ ಹೆಂಗ್ ಕಾಣ್ತಿತಿದೆ” ಎಂದು ಮಂಜು ಗಣಪತಿ ಎಂಬವರು ಗುಡುಗಿದ್ದಾರೆ. 

"ಈ ರೀತಿಯ ಸಣ್ಣಪುಟ್ಟ ಟ್ರಿಗರ್‌ಗಳನ್ನು ಎತ್ತಿಕೊಂಡು, ಜನಪ್ರತಿನಿಧಿಗಳೆನ್ನಿಸಿಕೊಂಡವರು ಏನನ್ನು ಮುಚ್ಚಿಹಾಕುತ್ತಿದ್ದಾರೆ, ತಮ್ಮ ಯಾವ ಬೇಜವಾಬ್ದಾರಿಯನ್ನು, ಯಾವ ಕೆಲಸಕಳ್ಳತನವನ್ನು, ಯಾವ ವೈಫಲ್ಯವನ್ನು ಮುಚ್ಚಿಹಾಕಿಕೊಳ್ಳುತ್ತಿದ್ದಾರೆ ಎಂಬುದನ್ನು ಅರಸುವುದು ನಡೆಯಬೇಕು” ಎಂದಿರುವ ರಾಜರಾಮ್ ತಲ್ಲೂರು ತಮ್ಮ ಫೇಸ್ಬುಕ್ ಪೇಜ್‌ನಲ್ಲಿ ಇಂಡೋ-ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪದ ಬಗ್ಗೆ ವಿವರವಾಗಿ ಬರದಿದ್ದಾರೆ.

ಸುಮಾರು 10 ಲಕ್ಷ ವೆಚ್ಚದಲ್ಲಿ ಶಾಸಕ ರಾಮದಾಸ್ ವಿಶೇಷ ಮುತುವರ್ಜಿ ವಹಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದರು. ಅರಮನೆ ಶೈಲಿಯಲ್ಲಿ ಬಸ್ ನಿಲ್ದಾಣ ಮಾಡುವುದು ರಾಮದಾಸ್ ಅವರ ಕನಸಾಗಿತ್ತು ಎಂದು ಗುತ್ತಿಗೆದಾರರೊಬ್ಬರು ತಿಳಿಸಿದ್ದರು. ಸ್ವತಃ ತಮ್ಮ ಪಕ್ಷದವರೇ ನಿರ್ಮಿಸಿದ ನಿಲ್ದಾಣದ ಮೇಲೆ ಅದೇ ಪಕ್ಷದ ಇನ್ನೊಬ್ಬ ಜೆಸಿಬಿ ತಂದು ಒಡೆದು ಹಾಕುತ್ತೇನೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಕೆಗೆ ಒಳಗಾಗಿದೆ.

ಅದೆಷ್ಟು ಒಡೆದು ಹಾಕುತ್ತಾರೋ ಹಾಕಲಿ: ತನ್ವೀರ್ ಸೇಠ್

Mysore

ಸಂಸದ ಪ್ರತಾಪ್‌ಸಿಂಹ ಅವರಿಗೆ ಬಸ್ ನಿಲ್ದಾಣದ ಗುಮ್ಮಟಗಳೆಲ್ಲವೂ ಮುಸ್ಲಿಮರ ಮಸೀದಿಯಂತೆ ಕಾಣ್ತಿವೆ. ಅದಕ್ಕೆ ನಾವೇನು ಮಾಡೋಕಾಗುತ್ತದೆ ಎಂದು ಶಾಸಕ ತನ್ವೀರ್ ಸೇಠ್ ಅವರು ಸಂಸದ ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ತನ್ವೀರ್ ಸೇಠ್, “ಯಾರ್‍ಯಾರ ದೃಷ್ಟಿಯಲ್ಲಿ ಏನು ಕಾಣುತ್ತದೋ ಅದೇ ಕಾಣುವುದು. ಗೋಪುರಗಳು ಮಸೀದಿ ಮಾದರಿಯಲ್ಲಿದೆ ಎಂದು ಹೇಳುವ ಪ್ರತಾಪ್ ಸಿಂಹ ಪ್ರಜ್ಞೆ ಯಾವ ರೀತಿಯಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇದು ಸರ್ಕಾರದ ಆಸ್ತಿ. ಏನೆಲ್ಲಾ ಒಡೆಯುತ್ತಾರೆ ಕಾದು ನೋಡಬೇಕು” ಎಂದರು.

“ಗೋಪುರದ ರೀತಿ ಕಾಣುವುದೆಲ್ಲಾ ಸಾಬ್ರುದು(ಮುಸ್ಲಿಂ) ಅನ್ನೋದಾದ್ರೆ ನಾವೇನು ಮಾಡುವುದಕ್ಕೆ ಆಗಲ್ಲ. ಬಸ್ ನಿಲ್ದಾಣ ಯಾರು ವಿನ್ಯಾಸ ಮಾಡಿದವರು ಎಂಬುದು ನನಗೆ ಗೊತ್ತಿಲ್ಲ. ಗುಮ್ಮಟ ಮಾದರಿಯ ಬಸ್ ನಿಲ್ದಾಣ ಒಡೆದು ಹಾಕ್ತಾರಂತೆ, ಅದೆಷ್ಟು ಕಟ್ಟಡ ಒಡೆದು ಹಾಕ್ತಾರೆ ಹಾಕಲಿ ನೋಡಣ” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app