ಮೈಸೂರು | ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ನೇಮಕ ಆಗಬಾರದು: ನ್ಯಾ. ಸಂತೋಷ್ ಹೆಗ್ಡೆ

santhosh hegde
  • ನ್ಯಾಯಾಂಗದ ಮೇಲೆ ಹಿಡಿತ ಇಟ್ಟುಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ
  • ಬಹುಮತ ಇದೆ ಎಂಬ ಕಾರಣಕ್ಕೆ ತನಗಿಷ್ಟ ಬಂದ ಹಾಗೆ ನಡೆದುಕೊಳ್ಳಲು ಸಾಧ್ಯವಿಲ್ಲ

“ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತಿರುವುದಕ್ಕೆ ನ್ಯಾಯಾಂಗವನ್ನು ತನ್ನ ಸ್ವಾಧೀನಕ್ಕೆ ಪಡೆಯುವ ಉದ್ದೇಶವೇ ಕಾರಣ. ಇದು ಯಾವುದೇ ಕಾರಣಕ್ಕೂ ಆಗಬಾರದು. ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ನೇಮಕಕ್ಕೆ ನನ್ನ ಸಂಪೂರ್ಣ ವಿರೋಧವಿದೆ” ಎಂದು ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ  ಸ್ಪಷ್ಟಪಡಿಸಿದರು.

ಮೈಸೂರು ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, “ಒಬ್ಬ ನ್ಯಾಯಾಧೀಶರನ್ನು ನೇಮಕ ಮಾಡುವ ಅಧಿಕಾರ, ಅರ್ಹತೆ ಕೊಲಿಜಿಯಂಗೆ ಬಿಟ್ಟರೆ ಹೊರಗಿನವರಿಗೆ ಇರುವುದಿಲ್ಲ. ನ್ಯಾಯಾಧೀಶರಾಗಿ ನೇಮಕವಾಗುವ ವಕೀಲರು ನ್ಯಾಯಾಲಯದಲ್ಲಿ ಯಾವ ರೀತಿ ಪ್ರಕರಣಗಳನ್ನು ಮಾಡಿದ್ದಾರೆ, ಇವರ ಅನುಭವ ಏನು? ಮತ್ತು ಇವರು ನ್ಯಾಯಾಧೀಶರ ಹುದ್ದೆಗೆ ಅರ್ಹರೆ ಎಂಬುದು ಕೊಲಿಜಿಯಂಗೆ ಮಾತ್ರ ಗೊತ್ತಿರುತ್ತದೆ. ಹಾಗಾಗಿ ಸರ್ಕಾರದ ಪ್ರತಿನಿಧಿಗಳ ಹಸ್ತಕ್ಷೇಪ ಸರಿಯಲ್ಲ” ಎಂದರು. 

“ಒಂದು ಸಚಿವ ಸಂಪುಟಕ್ಕೆ ಯಾರನ್ನು ನೇಮಕ ಮಾಡಿಕೊಳ್ಳಬೇಕು, ಯಾರು ಬೇಡ ಎಂಬ ಅಧಿಕಾರ ಮುಖ್ಯಮಂತ್ರಿಗಳಿಗೆ ಇರುತ್ತದೆ. ಅದೇ ರೀತಿ ಯಾರನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಬೇಕು ಎಂಬುದು ಕೊಲಿಜಿಯಂ ವಿವೇಚನೆಗೆ ಬಿಟ್ಟಿದ್ದು, ಕೊಲಿಜಿಯಂನಲ್ಲಿ ಮುಖ್ಯ ನ್ಯಾಯಾಧೀಶರ ತೀರ್ಮಾನವೇ ಅಂತಿಮವಾಗುವುದಿಲ್ಲ. ಅಲ್ಲಿಯೂ ಸಹ ಮೂರು ಪೀಠ, ಐವರ ಪೀಠ ಎಂಬುದಿರುತ್ತದೆ. ಅವರ ಶಿಫಾರಸ್ಸಿನ ಮೇಲೆ ನೇಮಕ ಮಾಡುವುದು. ಹಾಗಾಗಿ ಸರ್ಕಾರದ ಮಧ್ಯಪ್ರವೇಶ ಇರಬಾರದು” ಎಂದು ಹೇಳಿದರು.

“ಶಾಸಕಾಂಗ ಈಗಾಗಲೇ ಕಾರ್ಯಾಂಗದ ಆಡಳಿತವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಅದೇ ರೀತಿ ನ್ಯಾಯಾಂಗವನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂಬ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈ ಹಿಂದೆ ಇದ್ದಂತಹ ಸರ್ಕಾರಗಳಲ್ಲಿ ಇಂತಹ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲು ಹೊರಟಿರುವುದು ಅತ್ಯಂತ ದುರಂತ” ಎಂದು ಬೇಸರ ವ್ಯಕ್ತಪಡಿಸಿದರು.

“ಒಂದು ಸರ್ಕಾರಕ್ಕೆ ಸ್ಪಷ್ಟ ಬಹುಮತ ಇದೆ ಎಂದ ಕಾರಣಕ್ಕೆ ತನಗಿಷ್ಟ ಬಂದಹಾಗೆ ನಡೆದುಕೊಳ್ಳಲು ಸಾಧ್ಯವಿಲ್ಲ. ಸಂಸತ್ ನಲ್ಲಿ ತಾನು ತೆಗೆದುಕೊಂಡ ನಿರ್ಣಯವನ್ನು ಯಾರೂ ಪ್ರಶ್ನಿಸಬಾರದು ಎಂದರೆ ಏನರ್ಥ? ಇಂದು ಶಾಸಕಾಂಗ, ಕಾರ್ಯಾಂಗಗಳು ಭ್ರಷ್ಟಾಚಾರದಿಂದ ಕೂಡಿದೆ. ನ್ಯಾಯಾಂಗದಲ್ಲಿ ಎಲ್ಲ ಸರಿ ಇದೆ ಎಂದು ಹೇಳುವುದಿಲ್ಲ. ಆದರೆ, ಈ ಎರಡು ರಂಗಗಳಿಗಿಂತ ಕಡಿಮೆ ಭ್ರಷ್ಟಾಚಾರ ನ್ಯಾಯಾಂಗ ವ್ಯವಸ್ಥೆಯಲ್ಲಿದೆ. ಅದನ್ನು ತನ್ನ ಹಿಡಿತಕ್ಕೆ ಕೇಂದ್ರ ಸರ್ಕಾರ ಪಡೆಯಬೇಕು ಎಂದರೆ ಪ್ರಜೆಗಳು ಎಲ್ಲಿಗೆ ಹೋಗಬೇಕು? ಇದು ಸಂವಿಧಾನ ವಿರೋಧಿ ನಡೆ” ಎಂದು ಕಿಡಿ ಕಾರಿದರು.

“ಕೊಲಿಜಿಯಂ ಶಿಫಾರಸ್ಸು ಮಾಡಿದ ನ್ಯಾಯಾಧೀಶರನ್ನು ವೈಯಕ್ತಿಕ ಕಾರಣ ಕೊಟ್ಟು ಕೇಂದ್ರ ಸರ್ಕಾರ ನಿರಾಕರಿಸಿರುವ ಕ್ರಮ ಸರಿಯಲ್ಲ. ಒಬ್ಬ ಮನುಷ್ಯ ಎಂದ ಮೇಲೆ ಅವನಿಗೆ ಆದ ವೈಯಕ್ತಿಕ ಜೀವನ ಇರುತ್ತದೆ. ಅದನ್ನು ಆಡಳಿತ ದೃಷ್ಟಿಯಲ್ಲಿ ನೋಡಬಾರದು” ಎಂದು ಹೇಳಿದರು.

ಬಿಲ್ಕಿಸ್ ಬಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಟ್ಟಿರುವ ಕ್ರಮ ಸರಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಇದು ನ್ಯಾಯಾಧೀಶರ ವಿವೇಚನೆಗೆ ಬಿಟ್ಟಿದ್ದು. ಆ ಜಡ್ಜ್‌ಮೆಂಟ್‌ನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಇಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಕೆಲವರು ಗಲ್ಲು ಶಿಕ್ಷೆಯನ್ನು ನೀಡುತ್ತಾರೆ. ಇನ್ನು ಕೆಲವು ನ್ಯಾಯಾಧೀಶರು ಜೀವಾವಧಿ ಶಿಕ್ಷೆಯನ್ನು ನೀಡುತ್ತಾರೆ. ನ್ಯಾಯಾಯಲಗಳ ನ್ಯೂನತೆಯಿಂದ ಇಂತಹ ತೀರ್ಮಾನ ಕೈಗೊಂಡಿರಬಹುದು” ಎಂದು ಹೇಳಿದರು.

“ಲೊಕಯುಕ್ತಕ್ಕೆ ಈಗಲೂ ಪರಮಾಧಿಕಾರ ಇದೆ. ಅದರ ಜವಾಬ್ದಾರಿ ವಹಿಸಿಕೊಳ್ಳುವವರು ತಮ್ಮ ಅಧಿಕಾರವನ್ನು ಚಲಾಯಿಸಬೇಕು. ಸರ್ಕಾರ ತನ್ನ ಮಾತು ಕೇಳುವ ಅಧಿಕಾರಿಗಳನ್ನು ನೇಮಕ ಮಾಡಿದರೆ ನ್ಯಾಯಾಲಯಕ್ಕೆ ಹೋಗಿ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು ಮತ್ತು ಈ ಹುದ್ದೆಯಲ್ಲಿರುವವರು ಭ್ರಷ್ಟಾಚಾರದಿಂದ ದೂರ ಇರುವವರು ಆಗಬೇಕು” ಎಂದರು.

“ಇಂದು ಮನುಷ್ಯನಿಗೆ ದುರಾಸೆ ಹೆಚ್ಚಾಗಿ ಭ್ರಷ್ಟಚಾರ ತಾಂಡವವಾಡುತ್ತಿದೆ. ಜೈಲಿಗೆ ಹೋಗಿ ಬಂದವರನ್ನು ಹಾರ ಹಾಕಿ ಪಟಾಕಿ ಹೊಡೆದು ಬರಮಾಡಿಕೊಳ್ಳಲಾಗುತ್ತಿದೆ. ಈ ವ್ಯವಸ್ಥೆಗೆ ಯಾರು ಕಾರಣ ಎಂದರೆ ಸಮಾಜ. ಹಾಗಾಗಿ ಈ ಸಮಾಜವೇ ಮುಂದೊಂದು ದಿನ ದಂಗೆ ಏಳುವ ಕಾಲ ಬರಬಹುದು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ | ಎಬಿವಿಪಿ ಕಾರ್ಯಕರ್ತರಿಂದ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ

ಕಮಿಷನ್: ಬಿಜೆಪಿ–ಕಾಂಗ್ರೆಸ್ ಆರೋಪ ಪ್ರತ್ಯಾರೋಪ

''ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಶೇ.10ರಷ್ಟು ಕಮಿಷನ್ ಸರ್ಕಾರ ಎನ್ನುತ್ತಿತ್ತು. ಇದೀಗ ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರವನ್ನು ಶೇ. 40ರಷ್ಟು ಕಮಿಷನ್ ಸರ್ಕಾರ ಎಂದು ಜರಿಯುತ್ತಿದೆ. ಅಡಿಕೆ ಕದ್ದರೂ ಕಳ್ಳನೆ, ಆನೆ ಕದ್ದರೂ ಕಳ್ಳನೆ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ಆರೋಪ ಸಾಬೀತಾದರೆ 7 ವರ್ಷ ಶಿಕ್ಷೆ ವಿಧಿಸಲಾಗುತ್ತದೆ. ಚೀನಾದಲ್ಲಿ ಭ್ರಷ್ಟರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಇದೆ. ನಾನು ಯಾವ ಪಕ್ಷದ ಪರವೂ ಇಲ್ಲ. ನಾನು ನೀಡಿರುವ ಗಣಿ ವರದಿಯಲ್ಲಿ ಮೂರು ಪಕ್ಷಗಳ ಮಾಜಿ ಸಿಎಂಗಳು, 8 ಶಾಸಕರ ಹೆಸರು ಇದೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app