ಮೈಸೂರು | ಕೆಎಸ್‌ಎಸ್‌ಸಿ ಮೂಲಕ ಭತ್ತ ಖರೀದಿ ಆದೇಶ ಕೈಬಿಡಲು ರೈತರ ಆಗ್ರಹ

ಮೈಸೂರು| ಭತ್ತ ಖರೀದಿ ಕೇಂದ್ರವನ್ನು ಕೆ ಎಸ್ ಎಫ್ ಸಿ ಮೂಲಕ ಖರೀದಿಸುವ ಆದೇಶವನ್ನು ಕೈಬಿಟ್ಟು ಅಕ್ಕಿ ಗಿರಣಿಗಳ ಮೂಲಕ ಖರೀದಿಸುವಂತೆ ಆಗ್ರಹಿಸಿ;ರಾಜ್ಯ ರೈತ ಸಂಘದ ಮುಖಂಡರು:ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
  • ಹಳ್ಳಿ, ಹೋಬಳಿಯಲ್ಲಿ ಅಕ್ಕಿ ಗಿರಣಿ ಮೂಲಕ ಭತ್ತ ಖರೀದಿಸಬೇಕು
  • ಕೆಎಸ್‌ಎಸ್‌ಸಿ ಮೂಲಕ ಖರೀದಿ ಆದೇಶ ಹಿಂಪಡೆಯಲು ಆಗ್ರಹ

ಕೆಎಸ್‌ಎಸ್‌ಸಿ ಮೂಲಕ ಭತ್ತ ಖರೀದಿ ಮಾಡುವ ಆದೇಶ ಕೈಬಿಡಬೇಕು. ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಅಕ್ಕಿ ಗಿರಣಿಗಳ ಮೂಲಕವೇ ಭತ್ತ ಖರೀದಿ ಮಾಡುವಂತೆ ಸರ್ಕಾರ ಆದೇಶ ಹೊರಡಿಸಬೇಕು ಹಾಗೂ ತಕ್ಷಣವೇ ಭತ್ತ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.

ಈ ಸಂಬಂಧ ಈದಿನ.ಕಾಮ್ ಜೊತೆ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, "ಕಳೆದ ನಾಲ್ಕೈದು ವರ್ಷಗಳ ಹಿಂದೆ ಹಳ್ಳಿ, ಹೋಬಳಿಗಳಲ್ಲಿ ಅಕ್ಕಿ ಗಿರಣಿಗಳ ಮಾಲೀಕರ ಸಹಕಾರದೊಂದಿಗೆ ಭತ್ತ ಖರೀದಿ ಮಾಡಲಾಗುತ್ತಿತ್ತು. ಈ ವ್ಯವಸ್ಥೆಯಿಂದ ರೈತರಿಗೆ ಸಾಗಣೆ ವೆಚ್ಚ ಹಾಗೂ ಸರದಿಯಲ್ಲಿ ಕಾಯುವ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಅಲ್ಲದೆ, ದಲ್ಲಾಳಿಗಳ ಹಾವಳಿಯೂ ತಪ್ಪುತ್ತಿತ್ತು" ಎಂದು ವಿವರಿಸಿದರು.

"ಪ್ರಸ್ತುತ ತಾಲೂಕುವಾರು ಕೇಂದ್ರಗಳಲ್ಲಿ ಕೆಎಸ್‌ಎಸ್‌ಸಿ ಮೂಲಕ ಭತ್ತ ಖರೀದಿ ಮಾಡಲಾಗುತ್ತಿದೆ. ಈ ವೇಳೆ ದಲ್ಲಾಳಿಗಳ ಹಾವಳಿ ಅಧಿಕವಾಗಿರುತ್ತದೆ. ಇದರಿಂದ ರೈತರಿಗೆ ಅನಾನುಕೂಲವೇ ಹೆಚ್ಚು. ಹೀಗಾಗಿ, ಕೆಎಸ್‌ಎಸ್‌ಸಿ ಮೂಲಕ ಖರೀದಿ ಆದೇಶ ಹಿಂಪಡೆಯಬೇಕು. ಈಗಾಗಲೇ ಭತ್ತದ ಕಟಾವು ಪ್ರಾರಂಭ ಆಗಿರುವುದರಿಂದ ತುರ್ತಾಗಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗಿದೆ" ಎಂದು ತಿಳಿಸಿದರು.

"ದಕ್ಷಿಣ ಕನ್ನಡ ಜಿಲ್ಲೆಯ ನಾಟಿ ಭತ್ತದ ತಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪ್ರತಿ ಕ್ವಿಂಟಾಲ್‌ಗೆ 500 ರೂ. ಸಹಾಯಧನ ನೀಡಲಾಗುತ್ತಿದೆ. ಪ್ರತಿ ಎಕರೆಗೆ 40 ಕ್ವಿಂಟಾಲ್ ಭತ್ತ ಖರೀದಿ ಮಾಡಲು ಅವಕಾಶ ಕೊಡಲಾಗಿದೆ. ಅದೇ ರೀತಿಯಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಕೂಡ ನಾಟಿ ತಳಿಯ ಭತ್ತಕ್ಕೆ ಸಹಾಯ ಧನದೊಂದಿಗೆ ಭತ್ತ ಖರೀದಿ ಮಾಡಲು ಅವಕಾಶ ಮಾಡಿಕೊಡಬೇಕು" ಎಂದು ರಾಜ್ಯ ರೈತ ಸಂಘದ ಹಿರಿಯ ಮುಖಂಡರಾದ ಮರಂಕಯ್ಯ ಆಗ್ರಹಿಸಿದ್ದಾರೆ. 

ರೈತ ನಿಯೋಗದಲ್ಲಿ ಮೈಸೂರು ಜಿಲ್ಲಾಧ್ಯಕ್ಷೆ ನೇತ್ರಾವತಿ, ಕರೊಟ್ಟಿ ಕುಮಾರ ಸ್ವಾಮಿ, ಹೆಜ್ಜೆಗೆ ಪ್ರಕಾಶ್, ಶಿವಯೋಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಾಸ್ ಮೀಡಿಯಾ ಮೈಸೂರು ಜಿಲ್ಲಾ ಮಾಧ್ಯಮ ಸಂಯೋಜಕ ಜಿ ಮೋಹನ್ ಮಾಹಿತಿ ಆಧರಿಸಿ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app