ಬಿಜೆಪಿ ಆಂತರಿಕ ಕಿಚ್ಚಿಗೆ ಪ್ರತಾಪ್ ಸಿಂಹ v/s ರಾಮದಾಸ್ ಕಾಳಗವೇ ಸಾಕ್ಷಿ: ಕಾಂಗ್ರೆಸ್‌ ವ್ಯಂಗ್ಯ

ರಾಜ್ಯದಲ್ಲಿ ಬಿಜೆಪಿ ವರ್ಸಸ್‌ ಬಿಜೆಪಿ ಕಿಚ್ಚು ಹೆಚ್ಚಾಗಿದೆ. ಪಕ್ಷದಲ್ಲಿನ ಆಂತರಿಕ ಅಸಮಾಧಾನಗಳು ಬೀದಿಗೆ ಬರುತ್ತಿವೆ. ಬಿಜೆಪಿ ನಾಯಕರಲ್ಲಿ ಒಳಬಂಡಾಯ, ದ್ವೇಷ ಹೆಚ್ಚಾಗಿದೆ. ಅದಕ್ಕೆ, ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಾಪ್ ಸಿಂಹ v/s ರಾಮದಾಸ್ ಕಾಳಗವೇ ಸಾಕ್ಷಿ ಎಂದು ಕರ್ನಾಟಕ ಕಾಂಗ್ರೆಸ್‌ ವ್ಯಂಗ್ಯವಾಡಿದೆ. 

ಮೈಸೂರಿನಲ್ಲಿ ನಿರ್ಮಾಣವಾಗಿರುವ ಇಂಡೋ-ಇಸ್ಲಾಮಿಕ್‌ ಶೈಲಿಯ ಬಸ್‌ ನಿಲ್ದಾಣ ವಿವಾದಕ್ಕೆ ಕಾರಣ ಬಸ್‌ ನಿಲ್ದಾಣದ ವಿನ್ಯಾಸ ಮಾತ್ರ ಕಾರಣವಲ್ಲ, ಸ್ಥಳೀಯ ಬಿಜೆಪಿಯಲ್ಲಿರುವ ಆಂತರಿಕ ಅಸಮಾಧಾನ ಮತ್ತು ದ್ವೇಷವೂ ಕಾರಣ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. 

Eedina App

ಬಸ್‌ ನಿಲ್ದಾಣದ ವಿವಾದವನ್ನು ಬಿಜೆಪಿ ಆಂತರಿಕ ಸಮಸ್ಯೆಗೆ ತಳುಕು ಹಾಕಿರುವ ಕಾಂಗ್ರೆಸ್‌, ಟ್ವಿಟರ್‌ನಲ್ಲಿ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದೆ. "ಬಿಜೆಪಿvsಬಿಜೆಪಿ ಕಿಚ್ಚು ಎಷ್ಟಿದೆ ಎನ್ನಲು ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಾಪ್ ಸಿಂಹ vs ರಾಮದಾಸ್ ಕಾಳಗವೇ ಸಾಕ್ಷಿ. ಶಾಸಕರು ಕಟ್ಟಿಸಿದ ಬಸ್ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ! ಬೇರೆಯವರ ಮನೆಯ ದೋಸೆಯ ತೂತನ್ನು ಹುಡುಕುವ ಬದಲು ಬಿಜೆಪಿಗರು ತಮ್ಮ ಮನೆಯ ಕಾವಲಿಯ ತೂತುನ್ನು ನೋಡಿಕೊಂಡರೆ ಒಳಿತು!" ಎಂದು ಕುಟುಕಿದೆ. 

ಮೈಸೂರಿನ ಬಿಜೆಪಿ ಶಾಸಕ ರಾಮದಾಸ್‌ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಜೆಎಸ್‌ಎಸ್‌ ಕಾಲೇಜಿನ ಬಳಿ ಹೊಸ ಬಸ್‌ ತಂಗುದಾಣ ನಿರ್ಮಿಸಿದ್ದಾರೆ. ನಿಲ್ದಾಣವು ಇಂಡೋ-ಇಸ್ಲಾಮಿಕ್ ಶೈಲಿನ ವಿನ್ಯಾಸವನ್ನು ಹೊಂದಿದೆ. ಆದರೆ, ಸಂಸದ ಪ್ರತಾಪ್‌ ಸಿಂಹ ಅವರು ನಿಲ್ದಾಣವು ಮಸೀದಿ ಮಾದರಿಯಲ್ಲಿದೆ, ಅದನ್ನು ಕೆಡವಬೇಕೆಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.

ವಿವಾದ ಕುರಿತು ಪ್ರತಿಕ್ರಿಯಿಸಿರುವ ಶಾಸಕ ರಾಮದಾಸ್‌, "ನಿಲ್ದಾಣವು ಅರಮನೆ ಮಾದರಿಯಲ್ಲಿದೆಯೇ ಹೊರತು, ಧರ್ಮವನ್ನು ಆಧರಿಸಿಲ್ಲ. ವಿನ್ಯಾಸವನ್ನು ತಪ್ಪಾಗಿ ಅರ್ಥೈಸಿಕೊಂಡು, ಮಸೀದಿಯಂತೆ ನಿರ್ಮಿಸಲಾಗುತ್ತಿದೆ ಮತ್ತು ಗುತ್ತಿಗೆದಾರ ಮುಸ್ಲಿಂ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಕೂಡಲೇ ಸೂಕ್ತ ಕ್ರಮಕ್ಕಾಗಿ ನಗರ ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ದೂರು ನೀಡಿದ್ದೇನೆ” ಎಂದಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಅನ್ಯ ಪಕ್ಷಗಳಿಂದ ಕಾಂಗ್ರೆಸ್ಸಿಗೆ ಬರಲು ಕೆಲವರು ಸಿದ್ಧ; ಟಿಕೆಟ್‌ಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿದ ಕೆಪಿಸಿಸಿ

“ನಗರದಲ್ಲಿ ಈಗಾಗಲೇ ಹಲವೆಡೆ ಇದೇ ಮಾದರಿಯ ಬಸ್ ತಂಗುದಾಣಗಳಿವೆ. ಅದೇ ಮಾದರಿಯನ್ನು ನಾವೂ ಅನುಸರಿಸಿದ್ದೇವೆ. ಸಂಸದ ಪ್ರತಾಪ ಸಿಂಹ ಹೇಳಿಕೆ ನಂತರ ರಾತ್ರೋರಾತ್ರಿ ಕಳಶ ಅಳವಡಿಸಿಲ್ಲ. ಕಳೆದ ವಾರವೇ ಹಾಕಲಾಗಿದೆ. ಮಹದೇವ್ ಎಂಬ ಗುತ್ತಿಗೆದಾರ ಇದನ್ನು ನಿರ್ಮಿಸುತ್ತಿದ್ದಾರೆ. ಎಲ್‌ಇಡಿ ಪರದೆ ಅಳವಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನೂ ತಿಳಿಸಲಾಗುವುದು.‌ ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ” ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app