ನೋಯ್ಡಾ| ಮಹಿಳೆಯ ಮೇಲೆ ಹಲ್ಲೆ; ಆರೋಪಿ ರಾಜಕಾರಣಿ ಪಕ್ಷದ ಸದಸ್ಯನಲ್ಲ ಎಂದ ಬಿಜೆಪಿ

  • ಜೆಪಿ ನಡ್ಡಾ ಜೊತೆಗಿನ ಆರೋಪಿಯ ಫೋಟೊ ವೈರಲ್
  • ತ್ಯಾಗಿ ತಲೆಮರೆಸಿಕೊಂಡಿರುವುದಾಗಿ ತಿಳಿಸಿದ ಪೊಲೀಸರು 

ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನೋಯ್ಡಾ ಪೊಲೀಸರು ರಾಜಕಾರಣಿ ಶ್ರೀಕಾಂತ್ ತ್ಯಾಗಿ ಅವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ. 

ಆರೋಪಿ ಶ್ರೀಕಾಂತ್ ತ್ಯಾಗಿ ತಾನು ಬಿಜೆಪಿಯ ಕಿಸಾನ್ ಮೋರ್ಚಾದ ಸದಸ್ಯ ಎಂದು ಹೇಳಿಕೊಂಡಿದ್ದು, ಬಿಜೆಪಿಯ ನಾಯಕರೊಂದಿಗಿನ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಆ ಪಕ್ಷ ಈ ಕುರಿತು ಪ್ರತಿಕ್ರಿಯಿಸಿದ್ದು, ಆರೋಪಿ ಪಕ್ಷದ ಸದಸ್ಯನಲ್ಲ ಎಂದು ಹೇಳಿಕೊಂಡಿದೆ.

ಶ್ರೀಕಾಂತ್ ತ್ಯಾಗಿ ನೋಯ್ಡಾದ ಗ್ರ್ಯಾಂಡ್‌ ಓಮ್ಯಾಕ್ಸ್‌ ಸೊಸೈಟಿಯಲ್ಲಿ ಸಸಿಗಳನ್ನು ನೆಡಲು ಮುಂದಾಗಿದ್ದು, ಮಹಿಳೆಯೊಬ್ಬರು ಅದನ್ನು ವಿರೋಧಿಸಿದಾಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶ್ರೀಕಾಂತ್ ತ್ಯಾಗಿ ಮಹಿಳೆಯ ಮೇಲೆ ಹಲ್ಲೆ ಮಾಡಿರುವ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ದೃಶ್ಯಗಳಲ್ಲಿ ಸೆರೆಯಾಗಿವೆ.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್‌ 354 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಉಪ ಆಯುಕ್ತ (ಮಹಿಳಾ ಸುರಕ್ಷತೆ) ಅಂಕಿತಾ ಶರ್ಮಾ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಂಚಲನ ಸೃಷ್ಟಿಸಿದ ಮೋದಿ- ದೀದಿ ಭೇಟಿ| 45 ನಿಮಿಷ ಮೋದಿಯೊಂದಿಗೆ ಸಭೆ, ಬಾಕಿ ಅನುದಾನ ಕೋರಿದೆ ಎಂದ ಮಮತಾ!

ತ್ಯಾಗಿ ಅವರು ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮತ್ತು ಆಡಳಿತ ಪಕ್ಷದ ಯುವ ಕಿಸಾನ್ ಸಮಿತಿಯ ರಾಷ್ಟ್ರೀಯ ಸಹ ಸಂಯೋಜಕ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಂಡಿದ್ದಾರೆ ಹಾಗೂ ಟ್ವೀಟರ್ ಖಾತೆಯಲ್ಲು ತಾನು ಬಿಜೆಪಿಯ ಸದಸ್ಯ ಎಂದು ಹೇಳಿಕೊಂಡಿದ್ದಾರೆ.

ಶುಕ್ರವಾರ ರಾತ್ರಿ ಹೆಚ್ಚುವರಿ ಡಿಸಿಪಿ ಶರ್ಮಾ ಅವರು, ತ್ಯಾಗಿ ತಲೆಮರೆಸಿಕೊಂಡಿದ್ದು, ಪೊಲೀಸ್ ತಂಡಗಳು ಆತನಿಗಾಗಿ ಶೋಧ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.

Image
Jp Nadda
ಬಿಜೆಪಿ ನಾಯಕ ಜೆಪಿ ನಡ್ಡಾ ಅವರೊಂದಿಗೆ ಶ್ರೀಕಾಂತ್ ತ್ಯಾಗಿ

ಬಿಜೆಪಿಯ ನೋಯ್ಡಾ ಘಟಕದ ಮುಖ್ಯಸ್ಥ ಮನೋಜ್ ಗುಪ್ತಾ ಅವರು “ಶ್ರೀಕಾಂತ್ ತ್ಯಾಗಿಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಹೇಳಿದ್ದಾರೆ.

ವಿವಾದ ಸುಳಿಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ತ್ಯಾಗಿ ಅವರಿಂದ ದೂರವಿರಲು ಪ್ರಯತ್ನಿಸುತ್ತಿದ್ದಂತೆ, ಪಕ್ಷದ ಹಿರಿಯ ನಾಯಕರಾದ ಜೆಪಿ ನಡ್ಡಾ ಮತ್ತು ಸ್ವತಂತ್ರ ದೇವ್ ಸಿಂಗ್ ಅವರೊಂದಿಗಿನ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸಮಾಜವಾದಿ, ಆಮ್ ಆದ್ಮಿ ಪಕ್ಷ ಸೇರಿದಂತೆ ಇತರ ವಿಪಕ್ಷಗಳು ಕಠಿಣ ಕ್ರಮಕ್ಕೆ ಆಗ್ರಹಿಸಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180