- ಆದಿತ್ಯ ಠಾಕ್ರೆಯವರಿಗೆ ಗೋಮೂತ್ರ ಸ್ನಾನ ಮಾಡಿಸುವಂತೆ ಒತ್ತಾಯ
- ಶಿವಾಜಿ ಉದ್ಯಾನವನ ಶುದ್ಧೀಕರಿಸಿದ ಉದ್ಧವ್ ಠಾಕ್ರೆ ಕಾರ್ಯಕರ್ತರು
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಾಳ್ ಠಾಕ್ರೆ ಸ್ಮಾರಕಕ್ಕೆ ಭೇಟಿ ನೀಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಏಕನಾಥ್ ಶಿಂಧೆ ಸ್ಮಾರಕದಿಂದ ತೆರಳಿದ ಬಳಿಕ ಉದ್ಧವ್ ಠಾಕ್ರೆ ಬಣದ ಶಿವಸೇನಾ ಕಾರ್ಯಕರ್ತರು ಆ ಜಾಗದಲ್ಲಿ ಗೋಮೂತ್ರ ಚಿಮುಕಿಸಿ ಸ್ಮಾರಕವನ್ನು ಶುದ್ಧೀಕರಿಸಿದ್ದಾರೆ.
ಬಾಳ್ ಠಾಕ್ರೆ ಪುಣ್ಯತಿಥಿಯ ಏಕನಾಥ್ ಶಿಂಧೆ ಮತ್ತು ಬಾಳಾಸಾಹೇಬ್ ಶಿವಸೇನೆ ಶಾಸಕರು ಮತ್ತು ಸಂಸದರು ಶಿವಾಜಿ ಉದ್ಯಾನವನದಲ್ಲಿರುವ ಬಾಳ್ ಠಾಕ್ರೆ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ.
ಬಾಳ್ ಠಾಕ್ರೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಶಿವಾಜಿ ಉದ್ಯಾನವನದಿಂದ ಶಿಂಧೆ ತೆರಳಿದ ಬಳಿಕ ಉದ್ಧವ್ ಠಾಕ್ರೆ ಬಣದ ಶಿವಸೇನಾ ಕಾರ್ಯಕರ್ತರು ಮತ್ತು ದಕ್ಷಿಣ ಮುಂಬೈ ಸಂಸದ ಅರವಿಂದ್ ಸಾವಂತ್ ಅವರು ಗೋಮೂತ್ರ ಚಿಮುಕಿಸುವ ಮೂಲಕ ಸ್ಮಾರಕದ ಸುತ್ತಮುತ್ತಲಿನ ಪ್ರದೇಶವನ್ನು ಶುದ್ಧಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಏಕನಾಥ್ ಶಿಂಧೆ ಬಾಳ್ ಠಾಕ್ರೆ ಅವರಿಗೆ ಹಾಕಿದ ಹೂಮಾಲೆಯನ್ನೂ ಸಹ ಬದಲಾಯಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಾವರ್ಕರ್ ಬ್ರಿಟಿಷರಿಗೆ ಬರೆದ ಪತ್ರವನ್ನು ದೇವೇಂದ್ರ ಫಡ್ನಾವೀಸ್ ಕೂಡ ಓದಲಿ ಎಂದ ರಾಹುಲ್ ಗಾಂಧಿ
ಆದಿತ್ಯ ಠಾಕ್ರೆ ಶುದ್ಧೀಕರಿಸಿ ಎಂದ ಶಿಂಧೆ ಬಣ
ಉದ್ಧವ್ ಠಾಕ್ರೆ ಬಣದ ಈ ಕೃತ್ಯಕ್ಕೆ ತಿರುಗೇಟು ನೀಡಿರುವ ಏಕನಾಥ್ ಶಿಂಧೆ ಬಣ ಮತ್ತು ಆಡಳಿತದ ಮೈತ್ರಿ ಬಿಜೆಪಿ, ವಾಸ್ತವವಾಗಿ ಉದ್ಧವ್ ಠಾಕ್ರೆ ಅವರಿಗೇ ಶುದ್ಧೀಕರಣದ ಅಗತ್ಯವಿದೆ ಎಂದು ಹೇಳಿವೆ.
ಉದ್ಧವ್ ಠಾಕ್ರೆ ಬಣದ ನಾಯಕ ಆದಿತ್ಯ ಠಾಕ್ರೆ ಅವರು ನ.11ರಂದು ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆಹಾಕಿದ್ದರು. ಆ ಸಂದರ್ಭದಲ್ಲಿ ಇಬ್ಬರು ನಾಯಕರು ಪರಸ್ಪರ ಅಪ್ಪಿಕೊಂಡಿದ್ದರು. ಈ ಘಟನೆಯನ್ನು ನೆನಪಿಸಿರುವ ಬಿಜೆಪಿ ನಾಯಕರು ಮತ್ತು ಶಿವಸೇನಾ ಶಿಂಧೆ ಬಣ, ಆದಿತ್ಯ ಠಾಕ್ರೆ ಅವರಿಗೆ ಗೋಮೂತ್ರದಿಂದ ಸ್ನಾನ ಮಾಡಿಸಿ ಶುದ್ಧೀಕರಿಸಬೇಕು ಎಂದು ತಿರುಗೇಟು ನೀಡಿದ್ದಾರೆ.
"ವಿನಾಯಕ ದಾಮೋದರ್ ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿ ಮಾತನಾಡುತ್ತಿದ್ದು, ರಾಹುಲ್ ಗಾಂಧಿಯನ್ನು ಅಪ್ಪಿಕೊಂಡಿರುವ ಆದಿತ್ಯ ಠಾಕ್ರೆಯನ್ನು ಗೋಮೂತ್ರ ಸ್ನಾನ ಮಾಡಿಸಬೇಕು" ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸಚಿವ ದೀಪಕ್ ಕೇಸರ್ಕರ್, ವಕ್ತಾರ ಶೀತಲ್ ಮ್ಹಾತ್ರೆ, ಬಿಜೆಪಿಯ ಕೇಂದ್ರ ಸಚಿವ ರಾವ್ಸಾಹೇಬ್ ದಾನ್ವೆ ಹಾಗೂ ಇತರ ನಾಯಕರು ಸಹ ಉದ್ಧವ್ ಠಾಕ್ರೆ ಶುದ್ಧೀಕರಣದ ಮಾತನಾಡಿದ್ದಾರೆ.