ರೊಹಿಂಗ್ಯಾ ನಿರಾಶ್ರಿತರಿಗೆ ಫ್ಲ್ಯಾಟ್‌ | ಕೇಂದ್ರ ಸಚಿವ ಭರವಸೆ ನೀಡಿದ ಕೆಲ ತಾಸಲ್ಲೇ ಗೃಹ ಇಲಾಖೆ 'ಯೂಟರ್ನ್'!

rohingya refugees in india
  • ಬುಧವಾರ ಬೆಳಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ 
  • ರೊಹಿಂಗ್ಯನ್ನರಿಗೆ ಅಂತಹ ಯಾವುದೇ ಪ್ರಯೋಜನಗಳನ್ನು ಘೋಷಿಸಲಾಗಿಲ್ಲ

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮ್ಯಾನ್ಮಾರ್‌ನಿಂದ ಬಂದಿರುವ ರೊಹಿಂಗ್ಯಾ ನಿರಾಶ್ರಿತರಿಗೆ ದೆಹಲಿಯಲ್ಲಿ ಮನೆ ಮತ್ತು ಭದ್ರತೆಯನ್ನು ಘೋಷಿಸಿ ಟ್ವೀಟ್ ಮಾಡಿದ ಕೆಲವೇ ಗಂಟೆಗಳ ನಂತರ, ರೊಹಿಂಗ್ಯನ್ನರಿಗೆ ಅಂತಹ ಯಾವುದೇ ಪ್ರಯೋಜನಗಳನ್ನು ಘೋಷಿಸಲಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವು ಹೇಳಿಕೆ ನೀಡಿದೆ.

ಬುಧವಾರ ಬೆಳಗ್ಗೆ ಟ್ವೀಟ್ ಮಾಡಿದ್ದ ಕೇಂದ್ರ ವಸತಿ ಸಚಿವ, "ದೇಶದಲ್ಲಿ ಆಶ್ರಯ ಪಡೆದವರನ್ನು ಭಾರತ ಯಾವಾಗಲೂ ಸ್ವಾಗತಿಸುತ್ತದೆ. ಮಹತ್ವದ ನಿರ್ಧಾರದಲ್ಲಿ ಎಲ್ಲ ರೋಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಬಕ್ಕರ್‌ವಾಲಾ ಪ್ರದೇಶದಲ್ಲಿರುವ ಇಡಬ್ಲ್ಯುಎಸ್‌ ಫ್ಲಾಟ್‌ಗಳಿಗೆ ಸ್ಥಳಾಂತರಿಸಲಾಗುವುದು. ಅವರಿಗೆ ಮೂಲಭೂತ ಸೌಕರ್ಯಗಳ ಸಹಿತ ದೆಹಲಿ ಪೊಲೀಸರು ಭದ್ರತೆ ನೀಡಿಲಿದ್ದಾರೆ" ಎಂದು ತಿಳಿಸಿದ್ದರು.

ಈ ಟ್ವೀಟ್ ಸುದ್ದಿಯಾಗುತ್ತಿದ್ದಂತೆಯೇ ಯೂ ಟರ್ನ್ ಹೊಡೆದಿರುವ ಕೇಂದ್ರ ಗೃಹ ಸಚಿವಾಲಯವು, ದೆಹಲಿಯಲ್ಲಿ ರೋಹಿಂಗ್ಯಾ ನಿರಾಶ್ರಿತರಿಗೆ ವಸತಿ ಒದಗಿಸುವ ಕುರಿತು ಕೇಂದ್ರವು ಯಾವುದೇ ನಿರ್ದೇಶನಗಳನ್ನು ನೀಡಿಲ್ಲ. ಕಾನೂನು ಪ್ರಕಾರ ಅಕ್ರಮ ವಿದೇಶಿಗರನ್ನು ಗಡಿಪಾರು ಮಾಡುವವರೆಗೆ ಅವರನ್ನು ನಿರಾಶ್ರಿತರ  ಕೇಂದ್ರದಲ್ಲಿ ಇರಿಸಲಾಗುವುದು ಮತ್ತು ಪ್ರಸ್ತುತ ಸ್ಥಳವನ್ನು ಬಂಧನ ಕೇಂದ್ರವೆಂದು ಘೋಷಿಸುವಂತೆ ಸಚಿವಾಲಯವು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಸರಣಿ ಟ್ವೀಟ್‌ ಮಾಡಿರುವ ಸಚಿವಾಲಯವು,'ದಿಲ್ಲಿ ಸರ್ಕಾರವು ರೋಹಿಂಗ್ಯಾಗಳನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಸ್ತಾಪಿಸಿದೆ. ರೊಹಿಂಗ್ಯಾದಿಂದ ಬಂದಿರುವ ಅಕ್ರಮ ವಿದೇಶಿಗರು ಪ್ರಸ್ತುತ ಸ್ಥಳದಲ್ಲಿಯೇ ಮುಂದುವರಿಯುವ ಬಗ್ಗೆ ಖಚಿತಪಡಿಸಿಕೊಳ್ಳಲು ಈಗಾಗಲೇ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದೆ. ಸಂಬಂಧಪಟ್ಟ ದೇಶದೊಂದಿಗೆ ಅವರನ್ನು ಗಡೀಪಾರು ಮಾಡುವ ವಿಷಯವನ್ನು ಕೈಗೆತ್ತಿಕೊಂಡಿದ್ದೇವೆ' ಎಂದು ತಿಳಿಸಿದೆ.

ರೊಹಿಂಗ್ಯಾ ನಿರಾಶ್ರಿತರ ಹಕ್ಕುಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಮಾನವ ಹಕ್ಕು ಕಾರ್ಯಕರ್ತ ಅಲಿ ಜೋಹರ್ ಅವರ ಅಂದಾಜಿನ ಪ್ರಕಾರ, ಈ ವರ್ಷದ ಆರಂಭದಲ್ಲಿ ಸುಮಾರು 1,100 ರೊಹಿಂಗ್ಯಾಗಳು ದೆಹಲಿಯಲ್ಲಿ ಮತ್ತು 17,000 ಜನರು ಭಾರತದಲ್ಲಿ ವಾಸಿಸುತ್ತಿದ್ದರು. ಈ ವರ್ಷ ಸುಮಾರು 2,000 ಜನರು ಭಯ ಮತ್ತು ಆತಂಕದಿಂದ ಬಾಂಗ್ಲಾದೇಶಕ್ಕೆ ಹಿಂದಿರುಗಿದ್ದಾರೆ ಎಂದು ಸುದ್ದಿ ಸಂಸ್ಥೆ 'ರಾಯಿಟರ್ಸ್‌'ಗೆ ತಿಳಿಸಿದರು.

ಫೋಟೊ: ಎಪಿ-ಎಎನ್‌ಐ
ನಿಮಗೆ ಏನು ಅನ್ನಿಸ್ತು?
0 ವೋಟ್