ಗಾಂಧಿ ಕುಟುಂಬದ ಹೊರಗಿನವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ಇದೆಯೆ?

2014ರ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಖಾತೆ ತೆರೆದ ಕಾಂಗ್ರೆಸ್ ದಿನದಿಂದ ದಿನಕ್ಕೆ ಕ್ಷೀಣಿಸುತ್ತಲೇ ಇದೆ. ದೇಶಾದ್ಯಂತ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಚುನಾಯಿತ ಅಧ್ಯಕ್ಷರೇ ಇಲ್ಲದಂತಾಗಿದೆ. 2019ರ ಲೋಕಸಭಾ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದು, ಎಐಸಿಸಿ ಮುಂದಿನ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬುದೇ ಸದ್ಯದ ಕುತೂಹಲ.
AICC Leaders

2014ರ ಲೋಕಸಭಾ ಚುನಾವಣೆ ನಂತರ ನೆಲಕಚ್ಚಲು ಆರಂಭಿಸಿದ ಕಾಂಗ್ರೆಸ್ ಪಕ್ಷ ಈವರೆಗೆ ಚೇತರಿಸಿಲ್ಲ. ಸೋನಿಯಾ ಗಾಂಧಿ ಅವರ ನಂತರ 2017ರಲ್ಲಿ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ ರಾಹುಲ್‌ ಗಾಂಧಿ ಅವರು 2019ರ ಚುನಾವಣೆ ಸೋಲಿನ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಳೆದ ನಾಲ್ಕು ವರ್ಷಗಳಿಂದ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.

2019ರ ಚುನಾವಣೆ ಸೋಲಿನ ಬಳಿಕ ಎಐಸಿಸಿ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ರಾಹುಲ್ ಗಾಂಧಿ, ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. 2024ರ ಲೋಕಸಭಾ ಚುನಾವಣೆಗೆ ಇನ್ನು ಒಂದೂವರೆ ವರ್ಷ ಮಾತ್ರ ಬಾಕಿ ಉಳಿದಿದೆ. ಚುನಾವಣೆ ಸಮೀಪಿಸುತ್ತಿದ್ದರೂ 2019 ಸಾರ್ವತ್ರಿಕ ಲೋಕಸಭಾ ಚುನಾವಣೆ ನಂತರ ಅಖಿಲ ಭಾರತ ಕಾಂಗ್ರೆಸ್‌ಗೆ ಪೂರ್ಣ ಪ್ರಮಾಣದ ಚುನಾಯಿತ ಅಧ್ಯಕ್ಷರ ನೇಮಕವಾಗಿಲ್ಲ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಪಕ್ಷದ ನಾಯಕತ್ವದ ವಿರುದ್ಧ ತಿರುಗಿಬಿದ್ದಿದ್ದು, "ಈಗಾಗಲೇ ತಡವಾಗಿದೆ, ಪಕ್ಷದ ಹಿತದೃಷ್ಟಿಯಿಂದ ಶೀಘ್ರವೇ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕು. ಗಾಂಧಿ ಕುಟುಂಬದವರ ಬದಲಿಗೆ ಬೇರೆಯವರನ್ನು ಆ ಸ್ಥಾನಕ್ಕೆ ನೇಮಿಸಬೇಕು" ಎಂದು ಕಾಂಗ್ರೆಸ್‌ ಜಿ- 23 ಗುಂಪು ಒತ್ತಾಯಿಸುತ್ತಾ ಬಂದಿದೆ.

ಗಾಂಧಿ ಕುಟುಂಬದ ಜತೆಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ, ಯುಪಿಎ ಅವಧಿಯಲ್ಲಿ ಆಯಕಟ್ಟಿನ ಸ್ಥಾನದಲ್ಲಿದ್ದವರೇ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ನಂತರ ಪ್ರತ್ಯೇಕ ತಂಡ ಕಟ್ಟಿಕೊಂಡು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬದ ಹೊರಗಿನವರನ್ನು ಆಯ್ಕೆ ಮಾಡಿ, ಪಕ್ಷವನ್ನು ಪುನಶ್ಚೇತನ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಹಾಲಿ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್, ಭೂಪಿಂದರ್ ಸಿಂಗ್ ಹೂಡಾ ಹಾಗೂ ಕರ್ನಾಟಕದ ವೀರಪ್ಪ ಮೋಯ್ಲಿ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಈ ಜಿ-23 ತಂಡದಲ್ಲಿದ್ದಾರೆ. 

ಜಿ-23 ತಂಡದ ವಿರುದ್ಧವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ಅಜಯ್ ಮಾಕನ್, ರಣದೀಪ್ ಸುರ್ಜೆವಾಲಾ ಮತ್ತು ಮಲ್ಲಿಕಾರ್ಜುನ ಖರ್ಗೆ ಮತ್ತು ಇತರರು ಗಾಂಧಿ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ.

"ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬಕ್ಕೆ ಮಾತ್ರ ಅವಕಾಶ" ಎಂಬ ಕುಟುಂಬ ರಾಜಕಾರಣದ ಹಣೆಪಟ್ಟಿಯ ನಡುವೆಯೂ ಕೆಲವರು ಇನ್ನೂ ಗಾಂಧಿ ಕುಟುಂಬದ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ. 2024ರ ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಗಾಂಧಿ ಕುಟುಂಬದ ನಾಯಕತ್ವದಲ್ಲೇ ಎದುರಿಸಬೇಕೆಂದುಕೊಂಡಿದ್ದಾರೆ.

ರಾಹುಲ್ ಗಾಂಧಿ ಮರು ಆಯ್ಕೆಗೆ ಹೆಚ್ಚಿದ ಒತ್ತಡ!

2019ರ ಲೋಕಸಭಾ ಚುನಾವಣೆ ನಂತರ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ರಾಹುಲ್ ಗಾಂಧಿ  ರಾಜೀನಾಮೆ ನೀಡಿದ್ದರು. ಆಗಿನ್ನೂ ಕಾಂಗ್ರೆಸ್‌ನ ಜಿ-23 ತಂಡ ಅಸ್ತಿತ್ವಕ್ಕೆ ಬಂದಿರಲಿಲ್ಲ. ಅತೃಪ್ತ ನಾಯಕರನ್ನು ಹೊರತುಪಡಿಸಿ ಬಹುತೇಕರು ರಾಜೀನಾಮೆ ನೀಡದಂತೆ ರಾಹುಲ್‌ಗೆ ಒತ್ತಾಯಿಸಿದ್ದರು.

ಲೋಕಸಭಾ ಚುನಾವಣೆ ನಡೆಯುವ ಹಿಂದಿನ ವರ್ಷವಷ್ಟೇ ರಾಹುಲ್ ನೇತೃತ್ವದಲ್ಲಿ ಹಲವು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿತ್ತು. ಅದರಲ್ಲೂ ಮೋದಿ ಮತ್ತು ಅಮಿತ್ ಶಾ ಪ್ರಭಾವ ಹೆಚ್ಚಿರುವ ಗುಜರಾತ್‌ನಲ್ಲಿ ಬಿಜೆಪಿ ಪಕ್ಷವನ್ನು ಎರಡಂಕಿ ದಾಟದಂತೆ ತಡೆಯುವಲ್ಲಿ ರಾಹುಲ್ ಪಾತ್ರವೂ ದೊಡ್ಡದಿತ್ತು. ಈ ಎಲ್ಲ ಕಾರಣಗಳಿಗಾಗಿ ರಾಹುಲ್ ಅವರಿಗೆ ರಾಜೀನಾಮೆ ನೀಡದಂತೆ ಹಲವರು ಒತ್ತಾಯ ಮಾಡಿದ್ದರು.

ಒತ್ತಡಗಳಿಗೆ ಮಣಿಯದ ರಾಹುಲ್, ಸೋಲಿನ ನೈತಿಕ ಹೊಣೆ ಹೊತ್ತುಕೊಂಡು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಸೋನಿಯಾ ಗಾಂಧಿ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. 

ಹಾಗಾದರೆ ಮುಂದಿನ ಅಧ್ಯಕ್ಷರು ಯಾರು?

ಚುನಾವಣೆ ಸಮೀಪಿಸುತ್ತಿರುವುದರಿಂದ ಶೀಘ್ರದಲ್ಲೇ ಎಐಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಮೂಲಕವೇ ಅಧ್ಯಕ್ಷರು ಮತ್ತು ಎಐಸಿಸಿ ಪದಾಧಿಕಾರಿಗಳನ್ನು ಆರಿಸುವ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಬೆಂಬಲ ಬೇಕಿದೆ. ರಾಹುಲ್ ಹೊರತುಪಡಿಸಿ ಇನ್ಯಾರಿಗೂ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಎಐಸಿಸಿ ಪದಾಧಿಕಾರಿಗಳ ಒಪ್ಪಿಗೆ ಇಲ್ಲ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.

ಅಧ್ಯಕ್ಷರಾಗಲು ರಾಹುಲ್ ಗಾಂಧಿ ಮೇಲೆ ಒತ್ತಡ

ನೆಹರು ಕುಟುಂಬದ ಮೋತಿಲಾಲ್ ನೆಹರು, ಜವಹಾರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಈವರೆಗೆ ಎಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2017ರಲ್ಲಿ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದಾಗ ಕುಟುಂಬ ರಾಜಕಾರಣದ ಟೀಕೆಗಳು ಕೇಳಿಬಂದಿದ್ದವು. "ಗಾಂಧಿ ಕುಟುಂಬದವರು ಮಾತ್ರ ಕಾಂಗ್ರೆಸ್ ಅಧ್ಯಕ್ಷರಾಗಬೇಕು, ಬೇರೆಯವರಿಗೆ ಅಲ್ಲಿ ಅವಕಾಶ ಇಲ್ಲ" ಎಂದು ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಟೀಕಿಸಿದ್ದವು. ಈಗ ಮತ್ತೆ ರಾಹುಲ್ ಗಾಂಧಿಯವರಿಗೇ ಅಧ್ಯಕ್ಷ ಪಟ್ಟ ವಹಿಸಿಕೊಳ್ಳುವಂತೆ ಕಾಂಗ್ರೆಸ್‌ನ ಹಿರಿಯರು ಒತ್ತಾಯ ಮಾಡುತ್ತಿದ್ದು, ರಾಹುಲ್ ಒಪ್ಪಿಕೊಳ್ಳುತ್ತಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಳೆದ ತಿಂಗಳು ರಾಜಸ್ಥಾನದಲ್ಲಿ ನಡೆದ ರಾಷ್ಟ್ರಮಟ್ಟದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ‘ಭಾರತ್ ಜೋಡೊ’ (ಭಾತರ ಜೋಡಿಸಿ) ಅಭಿಯಾನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಅಭಿಯಾನ ಆರಂಭವಾಗುವುದಕ್ಕೂ ಮೊದಲೇ ಎಐಸಿಸಿಗೆ ಹೊಸ ಚುನಾಯಿತ ಸಾರಥಿ ಆಯ್ಕೆ ಮಾಡಬೇಕಿದೆ. ಈಗಾಗಲೇ ಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರಕಿದೆ ಎಂಬ ಮಾತುಗಳು ಕೇಳಿಬಂದಿದೆ.

2017ರಲ್ಲಿ ರಾಹುಲ್ ಗಾಂಧಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಪ್ರತಿಪಕ್ಷಗಳ ಟೀಕೆಯಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಚುನಾವಣೆ ನಡೆಸಲು ಮುಂದಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಮೂಲಕ, ಏಕಕಾಲದಲ್ಲಿ ಕಾಂಗ್ರೆಸ್ ಪಕ್ಷದ ಜಿ-23 ನಾಯಕರ ಬಾಯಿ ಮುಚ್ಚಿಸುವುದರ ಜತೆಗೆ, ಪ್ರತಿಪಕ್ಷಗಳಿಗೆ ತಕ್ಕ ಉತ್ತರ ಕೊಡಲು ಮುಂದಾಗಿದೆ.

ಸಚಿನ್ ಪೈಲಟ್ ಪರ ಗಾಂಧಿ ಕುಟುಂಬದ ಒಲವು

ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರಿಗೆ ಆಪ್ತರಾಗಿರುವ ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಜತೆಗೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಸಚಿನ್, 2018ರಲ್ಲಿ ನಡೆದ ರಾಜಸ್ಥಾನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 'ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ'ದಲ್ಲಿ ಎಂಬಿಎ ಪದವಿ ಪಡೆದಿರುವ ಅವರು, ಭಾರತೀಯ ಸೇನೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 45 ವರ್ಷದ ಯುವ ರಾಜಕಾರಣಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತದೆ.

Image
AICC Leaders

ಕನ್ನಡಿಗ ಖರ್ಗೆಗೆ ಒಲಿಯುತ್ತಾ ಅಧ್ಯಕ್ಷ ಪಟ್ಟ?

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಮತ್ತು ಅನುಭವಿ ರಾಜಕಾರಣಿಯನ್ನು ಆರಿಸುವ ಅನಿವಾರ್ಯತೆ ಎದುರಾದರೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ. 50 ವರ್ಷಗಳ ಸುಧೀರ್ಘ ರಾಜಕೀಯ ಅನುಭವ ಹೊಂದಿರುವ ಅವರು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೋದಿ ಸರ್ಕಾರವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಗಾಂಧಿ ಕುಟುಂಬಕ್ಕೆ ನಿಷ್ಟರಾಗಿರುವ ಅವರು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಹಿಡಿತ ಹೊಂದಿದ್ದಾರೆ. 2014ರಿಂದ 2019ರವರೆಗೆ ಲೋಕಸಭೆಯಲ್ಲಿ ಬಿಜೆಪಿ ಸರ್ಕಾರವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದೇ ಕಾರಣಕ್ಕೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರನ್ನು ಗುರಿಯಾಗಿಸಕೊಂಡಿದ್ದ ಬಿಜೆಪಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು. 

ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಸೋತ ನಂತರ, ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ, ಪ್ರತಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಈಗ ಹಿರಿತನದ ಆಧಾರದಲ್ಲಿ ಎಐಸಿಸಿಗೆ ಅಧ್ಯಕ್ಷ ಆಯ್ಕೆಯಾಗುವುದಾದರೆ ಖರ್ಗೆ ಅವರಿಗೆ ಸಂಪೂರ್ಣ ಬೆಂಬಲ ಸಿಗುವ ಸಾಧ್ಯತೆ ಇದ್ದು, ಜಿ-23 ನಾಯಕರೂ ದಲಿತ ನಾಯಕ ಖರ್ಗೆ ಆಯ್ಕೆಯನ್ನು ಬೆಂಬಲಿಸುವ ಸಾಧ್ಯತೆ ಇದೆ. 

ಎಐಸಿಸಿ ಅಧ್ಯಕ್ಷರ ರೇಸ್‌ನಲ್ಲಿ ಶಶಿ ತರೂರ್!

ವರ್ಣರಂಜಿತ ವ್ಯಕ್ತಿತ್ವದ ಶಶಿ ತರೂರ್, ತಮ್ಮ ವೈಯಕ್ತಿಕ ವಿವಾದಗಳ ಹೊರತಾಗಿಯೂ ಉತ್ತಮ ರಾಜಕೀಯಪಟು. ವಿದೇಶಾಂಗ ವ್ಯವಹಾರಗಳ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಕೆಲಸಕ್ಕೆ ರಾಜೀನಾಮೆ ನೀಡಿ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿ, ಎಸ್ ಎಂ ಕೃಷ್ಣ ಜತೆಗೆ ಕೆಲಸ ಮಾಡಿದ್ದರು.

ಪೂರ್ಣಪ್ರಮಾಣದ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರೂ, ಅವರ ಆಸಕ್ತಿ ಕ್ಷೇತ್ರಗಳಾದ ಸಾಹಿತ್ಯ, ಬರವಣಿಗೆ ಮತ್ತು ಓದಿನಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸತ್ತಿನ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ರಾಷ್ಟ್ರೀಯ ಮಾಧ್ಯಮದ ಚರ್ಚೆಗಳಲ್ಲಿ ಪಾಲ್ಗೊಂಡು ವಾದ ಮಂಡಿಸುತ್ತಾರೆ. ವಯಸ್ಸು 66 ಆದರೂ ಹೊಸ ತಲೆಮಾರಿನ ರಾಜಕಾರಣಕ್ಕೆ ತಮ್ಮನ್ನು ಒಗ್ಗಿಸಿಕೊಂಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.

ಮೋದಿ ಸರ್ಕಾರದ ಸುಳ್ಳುಗಳನ್ನು ಜಾಲತಾಣ ಮತ್ತು ಸಂಸತ್ತಿನಲ್ಲಿ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದ್ದರಿಂದಲೇ ಬಿಜೆಪಿ ಐಟಿ ಸೆಲ್ ಇವರ ಮೇಲೆ ಸದಾ ಕಣ್ಣಿಟ್ಟಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿರುವ ಬಗ್ಗೆ ತಲೆಕೆಡಿಸಿಕೊಳ್ಳದ ತರೂರ್, ಬಿಜೆಪಿ ವಿರುದ್ಧ ಟೀಕೆ ಮಾಡುತ್ತಲೇ ಇರುತ್ತಾರೆ. 

ಉತ್ತಮ ವಾಕ್ಪಟು, ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಗೆಲ್ಲುತ್ತಿರುವ ಮತ್ತು ಶೈಕ್ಷಣಿಕವಾಗಿ ಕೂಡಾ ಹಲವು ಪದವಿಗಳನ್ನು ಪಡೆದುಕೊಂಡಿರುವ ಶಶಿ ತರೂರ್ ಸಹ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ. ಕಾಂಗ್ರೆಸ್ ಪದಾಧಿಕಾರಿಗಳು ಬೆಂಬಲ ನೀಡಿದರೆ ಇವರೂ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವುದರಿಂದ ಮತ್ತು ಕಾಂಗ್ರೆಸ್‌ನ ಜಿ-23 ನಾಯಕರ ಒತ್ತಡ ಹೆಚ್ಚಿರುವುದರಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಶೀಘ್ರದಲ್ಲೇ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ. ಬಹುತೇಕ ನಾಯಕರ ಒಲವು ರಾಹುಲ್ ಗಾಂಧಿ ಅವರ ಮೇಲೆಯೇ ಇದ್ದರೂ, ಗಾಂಧಿ ಕುಟುಂಬದ ಹೊರಗಿನವರು ಯಾರಾದರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುತ್ತಾರಾ ಎಂಬುದೇ ಸದ್ಯದ ಕುತೂಹಲ.

ನಿಮಗೆ ಏನು ಅನ್ನಿಸ್ತು?
0 ವೋಟ್