- 2020ರಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಬಂಡಾಯ ಸಾರಿದ್ದ ಪೈಲಟ್
- ಸಿಎಂ ಗಾದಿಗಾಗಿ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಗೆಹ್ಲೋಟ್
ರಾಜಸ್ಥಾನ ನಾಯಕತ್ವದ ಕದನ ಮತ್ತೆ ತೀವ್ರ ಸ್ವರೂಪಕ್ಕೆ ತಿರುಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ವಿರುದ್ಧ ನೇರವಾಗಿ ಹರಿಹಾಯ್ದಿದ್ದು, "ಪಕ್ಷಕ್ಕೆ ದ್ರೋಹ ಬಗೆದವರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ.
ಎನ್ಡಿಟಿವಿ ಸುದ್ದಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅಶೋಕ್ ಗೆಹ್ಲೋಟ್ ಸಚಿನ್ ಪೈಲಟ್ ವಿರುದ್ಧ ಕಿಡಿಕಾರಿದ್ದಾರೆ. ಮತ್ತೊಂದೆಡೆ ಸಚಿನ್ ಪೈಲಟ್, ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.
"ಪಕ್ಷಕ್ಕೆ ದ್ರೋಹ ಬಗೆದಿರುವವರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ. ಕೇವಲ 10 ಶಾಸಕರ ಬೆಂಬಲವೂ ಇಲ್ಲದ ವ್ಯಕ್ತಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ" ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
2020ರ ರಾಜಸ್ಥಾನ ರಾಜಕೀಯ ಬಿಕ್ಕಟ್ಟನ್ನು ಉಲ್ಲೇಖಿಸಿದ ಅಶೋಕ್ ಗೆಹ್ಲೋಟ್, "ಪಕ್ಷದ ಅಧ್ಯಕ್ಷರೊಬ್ಬರು ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿರಬೇಕು" ಎಂದು ಹೇಳಿದ್ದಾರೆ.
ಸಚಿನ್ ಪೈಲಟ್ ಅವರ ಬಂಡಾಯದ ಹಿಂದೆ ಬಿಜೆಪಿ ಕೈವಾಡ ಇರುವುದಾಗಿ ಆರೋಪಿಸಿರುವ ಗೆಹ್ಲೋಟ್, "ದೆಹಲಿ ಬಿಜೆಪಿ ಕಚೇರಿಯಿಂದ ಅವರಿಗೆ 10 ಕೋಟಿ ರೂಪಾಯಿ ನೆರವು ನೀಡಲಾಗಿದೆ. ಇದಕ್ಕೆ ನನ್ನ ಬಳಿ ಪುರಾವೆಗಳಿವೆ. ಆದರೆ ಯಾರ್ ಯಾರಿಗೆ ಎಷ್ಟೆಷ್ಟು ಹಣ ನೀಡಿದ್ದಾರೆ ಎನ್ನುವ ಕುರಿತು ಮಾಹಿತಿ ಇಲ್ಲ" ಎಂದು ಹೇಳಿದ್ದಾರೆ.
"ಅಮಿತ್ ಶಾ, ಮತ್ತು ಧರ್ಮೇಂದ್ರ ಪ್ರಧಾನ್ ಹಾಗೂ ಸಚಿನ್ ಪೈಲಟ್ ಮೂರು ಸೇರಿ ದೆಹಲಿಯಲ್ಲಿ ಸಭೆ ನಡೆಸಿದ್ದರು. ಧರ್ಮೇಂದ್ರ ಪ್ರಧಾನ್ ಕೂಡ ಬಂಡಾಯ ನಾಯಕರು ತಂಗಿದ್ದ ಹೋಟೆಲ್ಗೆ ಭೇಟಿಯಾಗಲು ಹೋಗಿದ್ದರು" ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ರಾಜಸ್ಥಾನ ರಾಜಕಾರಣ | ರಾಜ್ಯ ಉಸ್ತುವಾರಿ ಸ್ಥಾನಕ್ಕೆ ಅಜಯ್ ಮಾಕನ್ ರಾಜೀನಾಮೆ
"2009ರಲ್ಲಿ ಯುಪಿಎ ಸರ್ಕಾರ ರಚನೆಯಾದಾಗ ಅವರನ್ನು (ಪೈಲಟ್) ಕೇಂದ್ರ ಸಚಿವರನ್ನಾಗಿ ಮಾಡುವಂತೆ ಶಿಫಾರಸು ಮಾಡಿದ್ದೆ" ಎಂದು ಸಿಎಂ ಗೆಹ್ಲೋಟ್ ಹೇಳಿದ್ದಾರೆ.
ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ಅವರ ರಾಜಕೀಯ ಸ್ಥಾನಮಾನದ ಕದನ ಇಂದು ನಿನ್ನೆಯದಲ್ಲ. 2020ರಿಂದ ಹಿಡಿದು ಮೊನ್ನೆಮೊನ್ನೆ ಎಐಸಿಸಿ ಅಧ್ಯಕ್ಷ ಚುನಾವಣೆಯವರೆಗೂ ಕೆಸರೆರೆಚಾಟ ಮುಂದುವರೆದುಕೊಂಡು ಬಂದಿದೆ.
2020ರ ರಾಜಕೀಯ ಬಿಕ್ಕಟ್ಟು
2020ರಲ್ಲಿ ರಾಜಸ್ಥಾನ ಕಾಂಗ್ರೆಸ್ನಲ್ಲಿ ಉದ್ಭವಿಸಿದ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ, ಸಚಿನ್ ಪೈಲಟ್ 19 ಶಾಸಕರೊಂದಿಗೆ ದೆಹಲಿ ಬಳಿಯ ರೆಸಾರ್ಟ್ಗೆ ತೆರಳಿದ್ದರು.
ಒಂದೋ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಅಥವಾ ಕಾಂಗ್ರೆಸ್ನಿಂದ ಹೊರ ನಡೆಯಲಾಗುವುದು ಎಂಬುದು ಪೈಲಟ್ ಬಣ ಪಕ್ಷಕ್ಕೆ ಒಡ್ಡಿದ ನೇರ ಸವಾಲಾಗಿತ್ತು. ಆದಾಗ್ಯೂ, ಪೈಲಟ್ ಬಂಡಾಯ, ಗೆಹ್ಲೋಟ್ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಪೈಲಟ್ ಪಕ್ಷದವರೊಂದಿಗೆ ರಾಜಿ ಮಾಡಿಕೊಂಡರು. ಆದರೆ, ಅವರನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಯಿತು. ಇದರೊಂದಿಗೆ ಉಪಮುಖ್ಯಮಂತ್ರಿ ಸ್ಥಾನದಿಂದಲೂ ಅವರನ್ನು ವಜಾಗೊಳಿಸಲಾಗಿತ್ತು.
ಗೆಹ್ಲೋಟ್ ಬೆಂಬಲಿಗರಿಂದ ಬಂಡಾಯ
ಎಐಸಿಸಿ ಅಧ್ಯಕ್ಷ ಚುನಾವಣೆಗೆ ಅಶೋಕ್ ಗೆಹ್ಲೋಟ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿತ್ತು. ರಾಜಸ್ಥಾನ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದುಕೊಂಡೆ ಅಧ್ಯಕ್ಷರಾಗುವ ಅಪೇಕ್ಷೆಯನ್ನು ಗೆಹ್ಲೋಟ್ ವ್ಯಕ್ತಪಡಿಸಿದ್ದರು. ಆದರೆ, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಪಕ್ಷದ 'ಒಬ್ಬ ವ್ಯಕ್ತಿ ಒಂದು ಹುದ್ದೆ' ಸಿದ್ಧಾಂತಕ್ಕೆ ಬದ್ಧರಾಗಿ ಇರುವಂತೆ ತಾಕೀತು ಮಾಡಿದ್ದಾರೆ.
ಗೆಹ್ಲೋಟ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಮತ್ತು ಪೈಲಟ್ ರಾಜಸ್ಥಾನದ ರುವಾರಿಯಾಗಲಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಶುರುವಾಗಿದ್ದವು. ಈ ಕುರಿತು ಸೆಪ್ಟೆಂಬರ್ 25ರಂದು ಕಾಂಗ್ರೆಸ್ ಶಾಸಕಾಂಗದ ಸಭೆ (ಸಿಎಲ್ಪಿ) ಆಯೋಜಿಸಲಾಗಿತ್ತು. ಆದರೆ, ಆ ಸಭೆಗೆ ಹಾಜರಾಗದೆ ಅಶೋಕ್ ಗೆಹ್ಲೋಟ್ ಬೆಂಬಲಿತ ನಾಯಕರು, ಪ್ರತ್ಯೇಕ ಸಭೆ ನಡೆಸಿದ್ದರು.
ಬಂಡಾಯ ಶಮನಕ್ಕೆಂದು ಎಐಸಿಸಿ ಅಧ್ಯಕ್ಷ ಚುನಾವಣೆಯಿಂದ ಅಶೋಕ್ ಗೆಹ್ಲೋಟ್ ಹಿಂದೆ ಸರಿದರು. ಜೊತೆಗೆ ಪೈಲಟ್ ಮುಖ್ಯಮಂತ್ರಿ ಕನಸಿಗೂ ತಣ್ಣೀರು ಎರಚಿದ್ದರು.