ಭಾರತ್ ಜೋಡೋ | ಆದಿವಾಸಿಗಳು ವನವಾಸಿಗಳಲ್ಲ, ದೇಶದ ನಿಜ ಮಾಲೀಕರು ಎಂದ ರಾಹುಲ್ ಗಾಂಧಿ

rahul gandhi bharat jodo yatra
  • ಬುಡಕಟ್ಟು ಸಮುದಾಯಗಳಿಗೆ ವಿವಿಧ ಭರವಸೆ ನೀಡಿದ ರಾಹುಲ್ 
  • ಆದಿವಾಸಿಗಳ ಬಿಲ್ಲು-ಬಾಣ ಹಿಡಿದ ಅಣ್ಣ-ತಂಗಿ ರಾಹುಲ್-ಪ್ರಿಯಾಂಕಾ

ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿರುವ ರಾಹುಲ್ ಗಾಂಧಿ ಗುರುವಾರ ಮಧ್ಯಪ್ರದೇಶದ ಬುಡಕಟ್ಟು ನಾಯಕ ತಾಂತ್ಯ ಭಿಲ್ ಅವರ ಜನ್ಮಸ್ಥಳವಾದ ಪಂಧಾನಕ್ಕೆ ಭೇಟಿ ನೀಡಿದ್ದಾರೆ. ನಂತರ ಬುಡಕಟ್ಟು ಸಮುದಾಯದ ಬೃಹತ್ ಸಭೆ ಉದ್ದೇಶಿಸಿ ಮಾತನಾಡಿದ್ದಾರೆ.

ಬೃಹತ್ ಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಬಿಜೆಪಿ- ಆರ್‌ಎಸ್‌ಎಸ್‌ ವಿರುದ್ಧ ಕಿಡಿಕಾರಿದ್ದಾರೆ. ಆದಿವಾಸಿಗಳ ಗೌರವ ಮತ್ತು ಹಕ್ಕುಗಳ ವಿಷಯ ಕುರಿತು ಧ್ವನಿ ಎತ್ತಿದ ಅವರು, ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಆದಿವಾಸಿಗಳಿಗೆ ಹಿಂಸಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನ್ನು ಗುರಿಯಾಗಿಸಿಕೊಂಡು, “ಇಂದು ಅವರು ತಾಂತ್ಯ ಭಿಲ್ ಅವರ ಕುರಿತು ಮಾತನಾಡುತ್ತಾರೆ. ಆದರೆ, ಬ್ರಿಟಿಷರು ತಾಂತ್ಯ ಅವರನ್ನು ಗಲ್ಲಿಗೇರಿಸಿದ್ದಾಗ ಆರ್‌ಎಸ್‌ಎಸ್ ಬ್ರಿಟಿಷರಿಗೇ ಸಹಾಯ ಮಾಡಿತ್ತು. ಇದು ಇಡೀ ಜಗತ್ತಿಗೆ ತಿಳಿದ ಸತ್ಯ" ಎಂದು ಹೇಳಿದ್ದಾರೆ.

"ಬರೀ ತಾಂತ್ಯ ಜೀಯವರ ಕೊಲೆಯ ವಿಚಾರದಲ್ಲಿ ಅಷ್ಟೇ ಅಲ್ಲ. ಬಿರ್ಸಾ ಮುಂಡಾ ಅವರ ವಿಚಾರದಲ್ಲೂ ಆರ್‌ಎಸ್ಎಸ್‌ ಬಿಜೆಪಿಗೆ ಸಹಾಯ ಮಾಡಿದೆ. ಈ ಇಬ್ಬರೂ ಮಹಾಪುರುಷರು ಆದಿವಾಸಿಗಳಿಗಾಗಿ ಹೋರಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಬ್ರಿಟಿಷರನ್ನು ಭಾರತದಿಂದ ಓಡಿಸಿದೆ. ಆದರೆ ನಿಮ್ಮ ಮಹಾಪುರುಷರನ್ನು ಗಲ್ಲಿಗೇರಿಸಿದ ಬ್ರಿಟಿಷರ ವಿರುದ್ಧ ನಾವು ಹೋರಾಡುತ್ತಿದ್ದಾಗ ಆರ್‌ಎಸ್‌ಎಸ್ ಬ್ರಿಟಿಷರೊಂದಿಗೆ ನಿಂತಿತ್ತು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ" ಎಂದು ಹೇಳಿದ್ದಾರೆ.

ಆದಿವಾಸಿಗಳನ್ನು ಅರಣ್ಯವಾಸಿಗಳು ಎಂದು ಕರೆಯುವುದು ತಪ್ಪು

ಬಿಜೆಪಿ-ಆರ್‌ಎಸ್‌ಎಸ್ ಆದಿವಾಸಿಗಳನ್ನು ಅರಣ್ಯವಾಸಿಗಳು ಎಂದು ಕರೆಯುವ ಮೂಲಕ ಅವಮಾನಿಸುತ್ತಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಮಧ್ಯಪ್ರದೇಶ | ಭಾರತ್ ಜೋಡೋಗೆ ಪ್ರತಿಯಾತ್ರೆ ಪ್ರಾರಂಭಿಸಿದ ಬಿಜೆಪಿ

“ನರೇಂದ್ರ ಮೋದಿಯವರು ವನವಾಸಿ ಎನ್ನುವ ಹೊಸ ಪದ ತಂದಿದ್ದಾರೆ. ಇದರ ಅರ್ಥ ಬೇರೆಯೇ ಇದೆ. ಮೊದಲ ಅರ್ಥ: ನೀವು ದೇಶದ ಮೊದಲ ಮಾಲೀಕರಲ್ಲ ಎಂಬುದು, ನೀವು ಕೇವಲ ಕಾಡಿನಲ್ಲಿ ವಾಸಿಸುತ್ತೀರಿ ಎನ್ನುವುದಾಗಿದೆ. ಎರಡನೆಯ ಅರ್ಥ: ನೀವು ಕಾಡಿನ ಹೊರಗೆ ಯಾವುದೇ ಹಕ್ಕುಗಳನ್ನು ಪಡೆಯಬಾರದು. ಮೂರನೇ ಅರ್ಥ: ಬಿಜೆಪಿ ಸರ್ಕಾರ ಇರುವಲ್ಲೆಲ್ಲಾ ಕೈಗಾರಿಕೋದ್ಯಮಿಗಳಿಗೆ ಅರಣ್ಯ ನೀಡಲಾಗುತ್ತಿದೆ. ಕಾಡುಗಳನ್ನು ಕಡಿಯಲಾಗುತ್ತಿದೆ. ಕಾಡುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಯಾವಾಗ ಕಾಡುಗಳು ನಿರ್ನಾಮವಾಗುತ್ತವೋ ಆಗ ನಾಡಿನಲ್ಲಿಯೂ ನಿಮಗೆ ಜಾಗ ಇರುವುದಿಲ್ಲ" ಎಂದು ಹೇಳಿದ್ದಾರೆ.

"ನಾವು ನಿಮ್ಮನ್ನು ಬುಡಕಟ್ಟು ಎಂದು ಕರೆಯುತ್ತೇವೆ. ಏಕೆಂದರೆ ನೀವು ಈ ದೇಶದ ಮೊದಲ ಮತ್ತು ನಿಜವಾದ ಮಾಲೀಕರು ಎನ್ನುವುದು ನಮ್ಮ ನಂಬಿಕೆ. ಅವರು ನಿಮ್ಮಿಂದ ಎಲ್ಲ ಹಕ್ಕುಗಳನ್ನು ಕಸೆದುಕೊಳ್ಳಲು ಬಯಸುವುದರಿಂದ ವನವಾಸಿ ಎನ್ನುತ್ತಾರೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಬಿಜೆಪಿ ಕ್ಷಮೆಯಾಚಿಸಬೇಕು

"ಬುಡಕಟ್ಟು ಸಮುದಾಯವನ್ನು ವನವಾಸಿ ಎಂದು ಕರೆದಿದ್ದಕ್ಕೆ ಬಿಜೆಪಿಯವರು ಕ್ಷಮೆಯಾಚಿಸಬೇಕು" ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

"ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಆದಿವಾಸಿಗಳಿಗೆ ಎಲ್ಲ ಹಕ್ಕುಗಳನ್ನು ನೀಡಲಾಗುವುದು ಮತ್ತು ಆದಿವಾಸಿಗಳ ಪರವಾಗಿ ಮಾಡಿರುವ ಪೆಸಾ ಕಾಯ್ದೆ, ಭೂಸ್ವಾಧೀನ ಕಾಯಿದೆ, ಅರಣ್ಯ ಹಕ್ಕು ಕಾಯಿದೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗುವುದು" ಎಂದು ರಾಹುಲ್ ಘೋಷಿಸಿದ್ದಾರೆ.

ಆದಿವಾಸಿಗಳ ಬಿಲ್ಲು-ಬಾಣ ಹಿಡಿದ ಅಣ್ಣ- ತಂಗಿ

ಬುಡಕಟ್ಟು ಸಮುದಾಯದವರ ಬಿಲ್ಲು ಬಾಣಗಳೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಕೂಡಿಕೊಂಡಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಬ್ಬರು ಸಹ ಬಿಲ್ಲು ಹಿಡಿದು ಬಾಣ ಬಿಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180