ಭಾರತ್ ಜೋಡೋ ಯಾತ್ರೆ | 1300 ವರ್ಷಗಳ ಹಳೆಯ ದೇವಸ್ಥಾನಕ್ಕೆ ಭೇಟಿ ನೀಡಿದ ಯಾತ್ರಾರ್ಥಿಗಳು

  • ನೆಲದ ಮೇಲೆ ಮಲಗಿದ ದಿಗ್ವಿಜಯ್ ಸಿಂಗ್
  • ಆಟೋ ಚಾಲಕ ಅಳಲು ಕೇಳಿದ ರಾಹುಲ್ 

ಭಾರತ್ ಜೋಡೋ ಯಾತ್ರೆಯ 13ನೇ ದಿನ ಮುಕ್ತಾಯವಾಗಿದ್ದು, ಕಾಂಗ್ರೆಸ್ ನಾಯಕರು ಸೇರಿದಂತೆ ಯಾತ್ರಾರ್ಥಿಗಳು ಕೇರಳದ ತುರುವೂರು ಮಹಾಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ ದಿನೇದಿನೆ ಸಾರ್ವಜನಿಕರ ಬೆಂಬಲ ಹೆಚ್ಚಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇಂದು (ಸೆ. 20) ಸಾವಿರಾರು ಯಾತ್ರಾರ್ಥಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

1300 ಹಳೆಯ ದೇವಸ್ಥಾನಕ್ಕೆ ಭೇಟಿ ನೀಡಿದ ರಾಹುಲ್

ಭಾರತ್ ಜೋಡೋ ಯಾತ್ರೆಯ 13ನೇ ದಿನ ರಾಹುಲ್ ಗಾಂಧಿ ಅವರು, ಕೇರಳದ ತುರುವೂರು ಮಹಾಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ದೇವಸ್ಥಾನವು ಸುಮಾರು 1,300 ವರ್ಷಗಳ ಹಳೆಯದು ಎಂದು ಕಾಂಗ್ರೆಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದೆ. ಶತಮಾನಗಳ ಹಳೆಯ ಕೇರಳದ ಕಲಾ ಪ್ರಕಾರದ ಪ್ರದರ್ಶನವನ್ನು ಯಾತ್ರಾರ್ಥಿಗಳು ಆನಂದಿಸಿದ್ದಾರೆ.

ಯಾತ್ರಾರ್ಥಿಗಳ ಸ್ವಾಗತಕ್ಕೆ ದೇವಸ್ಥಾನದಲ್ಲಿ ಹಬ್ಬದ ವಾತವಾರಣವೇ ಸೃಷ್ಟಿಯಾಗಿತ್ತು. ಸಾಂಸ್ಕೃತಿಕ ಕಹಳೆಯಂತಹ ವಾದ್ಯ ನುಡಿಸುವ ಮೂಲಕ ಯಾತ್ರಾರ್ಥಿಗಳನ್ನು ಬರಮಾಡಿಕೊಳ್ಳಲಾಗಿದೆ.

ನನ್ನ ಜೀವನದ ಭಾಗವಾಗಲು ಇದೊಂದು ಸುವರ್ಣಾವಕಾಶ

ಯಾತ್ರೆಯ ಕುರಿತು ಮಾತನಾಡಿರುವ ಉತ್ತರ ಪ್ರದೇಶ ಮೂಲದ ಕೆ ಕೆ ಶಾಸ್ತ್ರಿ ಎಂಬುವವರು “ಭಾರತ್ ಜೋಡೋ ಯಾತ್ರೆ ನನ್ನ ಜೀವನದ ಭಾಗವಾಗಲು ಇದೊಂದು ಸುವರ್ಣಾವಕಾಶ” ಎಂದು ಹೇಳಿದ್ದಾರೆ.

“ಭಾರತವನ್ನು ಒಗ್ಗೂಡಿಸುವ ಉದ್ದೇಶದಿಂದ ನಾಯಕ ಪಾದಯಾತ್ರೆ ಹೊರಟಿದ್ದಾರೆ. ಈ ದೇಶದ ಯುವ ಜನತೆ ಅವರಿಗೆ ಬೆಂಬಲ ನೀಡಬೇಕು. ಇಂದು, ದೇಶವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿರುವಾಗ, ಈ ಕಷ್ಟದ ಸಮಯದಲ್ಲಿ ಭಾರತವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಇದು ಅತ್ಯಂತ ಶ್ಲಾಘನೀಯ ಹೆಜ್ಜೆ” ಎಂದು ಯಾತ್ರಾರ್ಥಿ ಹೇಳಿದ್ದಾರೆ.

ನೆಲದ ಮೇಲೆ ಮಲಗಿದ ದಿಗ್ವಿಜಯ್ ಸಿಂಗ್

ಯಾತ್ರೆಯ ವಿರಾಮದ ಸಮಯದಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ನೆಲದ ಮೇಲೆ ಹಾಸಿರುವ ಹಾಸಿಗೆಯ ಮೇಲೆ ಮಲಗಿರುವ ಫೋಟೋವೊಂದನ್ನು ಹಂಚಿಕೊಂಡಿರುವ ಟ್ವೀಟಿಗಗೊಬ್ಬರು “ಈ ವಯಸ್ಸಿನಲ್ಲಿ ಪಕ್ಷದ ಮೇಲಿನ ಶ್ರದ್ಧೆ ಕೆಲವೇ ನಾಯಕರಲ್ಲಿ ಕಂಡು ಬರುತ್ತದೆ” ಎಂದಿದ್ದಾರೆ.

Image

ಆಟೋ ಚಾಲಕ ಅಳಲು ಕೇಳಿದ ರಾಹುಲ್ ಗಾಂಧಿ

ಯಾತ್ರೆಯಲ್ಲಿ ನಿರತರಾಗಿರುವ ರಾಹುಲ್ ಗಾಂಧಿ ಅವರು ಆಟೋ ಚಾಲಕರ ಅಳಲು ಕೇಳಿದ್ದಾರೆ. ಬೆಲೆ ಏರಿಕೆಯಂತಹ ಸಮಸ್ಯೆಗಳ ವಿರುದ್ಧವೇ ಹೋರಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಈ ನಡುವೆ ಆಟೋ ಚಾಲಕರು ಬೆಲೆ ಏರಿಕೆಯಿಂದ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ.

ಮೊದಲು ಹೆಚ್ಚು ಹಣ ಗಳಿಸುತ್ತಿದ್ದವರು, ಇಂದು ಇಂಧನ ಬೆಲೆಯೇರಿಕೆಯಿಂದಾಗಿ ಹೆಚ್ಚು ಆಟೋ ಓಡಿಸುತ್ತಿದ್ದಾರೆ. "ದಿನಕ್ಕೆ ಸುಮಾರು ₹300 ಮಾತ್ರ ಮನೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಆಟೋ ಚಾಲಕರು ಹೇಳಿದ್ದಾರೆ. ಈಗಿರುವ ಬೆಲೆಯಿಂದ ಮಕ್ಕಳನ್ನು ಓದಿಸುವುದು ಕಷ್ಟ ಎಂದು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ.

ರಸ್ತೆಯುದ್ದಕ್ಕೂ ಸಾಂಪ್ರದಾಯಿಕ ನೃತ್ಯಗಳು

ಕೇರಳದ ರಸ್ತೆಗಳಲ್ಲಿ ಯಾತ್ರೆಗೆ ಹುರಿದುಂಬಿಸಲು ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಲಾಯಿತು. ರಸ್ತೆಯುದ್ದಕ್ಕೂ ಕುಣಿದ ಜಾನಪದ ಕಲಾವಿದರು ಜಾತ್ರೆಯ ವಾತಾವಾರಣ ಸೃಷ್ಟಿಸಿದ್ದಾರೆ. ಕೆಲವು ತಂಡಗಳು ನೃತ್ಯದಲ್ಲಿ ಬೇರೆ ಬೇರೆ ಪ್ರಕಾರದ ಶೈಲಿಗಳನ್ನು ಪ್ರದರ್ಶಿಸಿದರೆ, ಸಾಂಸ್ಕೃತಿಕ ಕಿರಿಟ ಹೊತ್ತ ನೃತ್ಯದ ಮೂಲಕ ಯಾತ್ರಾರ್ಥಿಗಳನ್ನು ರಂಜಿಸಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲು ಶಕ್ತಿ ನೀಡಿದ ಜನತೆ

ಭಾರೀ ಜನಸ್ತೋಮದ ಫೋಟೋಗಳನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ಕಾಂಗ್ರೆಸ್, “ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲು ನಮಗೆ ಎಲ್ಲಿಂದ ಶಕ್ತಿ ಬರುತ್ತಿದೆ ಎಂದು ನೀವು ಕೇಳುತ್ತೀರಿ? ಭಾರತ್ ಜೋಡೋ ಯಾತ್ರೆಗೆ ಸೇರಿದ ಜನರು ನಮ್ಮನ್ನು ಹುರಿದುಂಬಿಸುತ್ತಿದ್ದಾರೆ ನೋಡಿ. ಜನತೆಯ ಉತ್ಸಾಹ ನಮಗೆ ಶಕ್ತಿ ನೀಡುತ್ತದೆ” ಎಂದು ಹೇಳಿದೆ.

ಭಾರತ್ ಜೋಡೋ ಯಾತ್ರೆಯ 13ನೇ ದಿನ ಕೇರಳದ ಆರೂರ್ ಜಂಕ್ಷನ್‌ನಲ್ಲಿ ಮುಗಿದಿದೆ. ಬೃಹತ್ ಜನಸಮೂಹವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ.

ಸಂಚಾರ ಸಂಕಷ್ಟಕ್ಕೆ ಪರಿಹಾರ ಕೊಡಿ ಎಂದ ವಕೀಲ

ವಕೀಲ ಕೆ ವಿಜಯನ್ ಅವರು ಯಾತ್ರೆಯನ್ನು ನಿಯಂತ್ರಿಸುವಂತೆ ನ್ಯಾಯಾಲಯದ ನಿರ್ದೇಶನ ಕೋರಿದ್ದಾರೆ. ಯಾತ್ರೆಗಾಗಿ ಗಂಟೆಗಟ್ಟಲೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ನಿತ್ಯ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.

ಯಾತ್ರೆಯ ಭದ್ರತಾ ವ್ಯವಸ್ಥೆಗೆ ಭಾರಿ ವೆಚ್ಚವಾಗುತ್ತಿದೆ ಮತ್ತು ನೂರಾರು ಪೊಲೀಸರು ರಸ್ತೆಗಳಲ್ಲಿ ಬೀಡುಬಿಟ್ಟಿದ್ದಾರೆ ಎಂದು ಪ್ರತಿಪಾದಿಸಿದ ಕೆ ವಿಜಯನ್ ಅವರು, ತೆರಿಗೆದಾರರ ಹಣದಿಂದ ಪಾವತಿಸುವ ಬದಲು ಕಾಂಗ್ರೆಸ್ ಪಕ್ಷವು ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ. ನ್ಯಾಯಾಲಯವು ಗುರುವಾರ ಅರ್ಜಿಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

ನಕಲಿ ಗಾಂಧಿಗಳ ಉಳಿವಿನ ಯಾತ್ರೆ ಎಂದ ಸಿ ಟಿ ರವಿ

ಭಾರತ್ ಜೋಡೋ ಯಾತ್ರೆಯ ಕುರಿತು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ವಾಗ್ದಾಳಿ ನಡೆಸಿದ್ದಾರೆ.

"ಮುಳುಗುತ್ತಿರುವ ನಕಲಿ ಗಾಂಧಿಗಳನ್ನು ಉಳಿಸುವ ಕೋಮುಯಾತ್ರೆಯಲ್ಲದೆ ಬೇರೇನೂ ಅಲ್ಲ” ಎಂದು ಭಾರತ್ ಜೋಡೋ ಯಾತ್ರೆಯನ್ನು ತಿರಸ್ಕರಿಸಿದ್ದಾರೆ.

“ವಿವಾದಾತ್ಮಕ ಕ್ರಿಶ್ಚಿಯನ್ ಪಾದ್ರಿಯನ್ನು ಬೆಂಬಲಿಸುವುದರಿಂದ ಹಿಡಿದು ಹಿಜಾಬ್ ಅನ್ನು ವೈಭವೀಕರಿಸುವವರೆಗೆ, ಕಾಂಗ್ರೆಸ್ ಸಹ ಮಾಲೀಕ ರಾಹುಲ್ ಗಾಂಧಿ ಅವರು ಮತ್ತು ಅವರ ಪಕ್ಷವು ತುಷ್ಟೀಕರಣದ ರಾಜಕೀಯದಲ್ಲಿ ಉಳಿದುಕೊಂಡಿದೆ ಎಂದು ಸಾಬೀತುಪಡಿಸಲು ಎಲ್ಲವನ್ನೂ ಮಾಡುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180