ಭಾರತ್ ಜೋಡೋ ಯಾತ್ರೆ | ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ರಾಹುಲ್ ಗಾಂಧಿ ಸಂವಾದ

  • ಪಾದಯಾತ್ರೆಯಲ್ಲಿ ಸಿ ಆರ್ ನೀಲಕಂದನ್ ಭಾಗಿ
  • ಕೇರಳದ ಭರ್ಜರಿ ಊಟ ಸವಿದ ಯಾತ್ರಾರ್ಥಿಗಳು

ಭಾರತ್ ಜೋಡೋ ಯಾತ್ರೆಯ 14ನೇ ದಿನ ಮುಕ್ತಾಯವಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಸಂವಾದ ನಡೆಸಿದ್ದಾರೆ.

ಯಾತ್ರೆಯಲ್ಲಿ ಪಾಲ್ಗೊಂಡ ನಾಯಕರು

ಕಾಂಗ್ರೆಸ್ ಮುಖಂಡರಾದ ಸಚಿನ್ ಪೈಲಟ್, ವಿ ಡಿ ಸತೀಶನ್, ರಮೇಶ್ ಚೆನ್ನಿತ್ತಲ, ಬೆನ್ನಿ ಬಹನ್ನನ್, ಕೋಡಿಕುನ್ನಿಲ್ ಸುರೇಶ್, ಹೈಬಿ ಈಡನ್, ಮತ್ತು ಕೆ ಬಾಬು, ಎಂ ಎಂ ಹಸನ್, ಉಮಾ ಥಾಮಸ್ ಮುಂತಾದವರು ಜೊತೆಗಿದ್ದರು. ಕೆಪಿಸಿಸಿ ಅಧ್ಯಕ್ಷ ಕೆ ಸುಧಾಕರನ್, ಕೆ ಮುರಳೀಧರನ್ ಕೂಡ ಕಾಂಗ್ರೆಸ್ ಮುಖಂಡರ ಜತೆ ಹೆಜ್ಜೆ ಹಾಕಿದ್ದಾರೆ.

ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಸಂವಾದ

ರಾಹುಲ್ ಗಾಂಧಿ ಅವರು ಕೊಚ್ಚಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವನ್ನು ಭೇಟಿ ಮಾಡಿದ್ದು, ಅವರೊಂದಿಗೆ ಸಂವಾದ ನಡೆಸಿದ್ದಾರೆ. ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ಅವರ ಕನಸುಗಳು ಮತ್ತು ಭವಿಷ್ಯದ ಭಾರತದ ಭರವಸೆಗಳ ಬಗ್ಗೆ ಮಾತನಾಡಿದ್ದಾರೆ.

ರಾಹುಲ್ ಗಾಂಧಿ ಅವರು ಕೊಚ್ಚಿಯಲ್ಲಿ  ಕೇರಳದ ಯುವಜನತೆ ಮತ್ತು ವೃತ್ತಿಪರರೊಂದಿಗೆ ಸಂವಾದ ನಡೆಸಿದ್ದಾರೆ. ವ್ಯವಹಾರಗಳಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ. ವೃತ್ತಿಪರರು ಎದುರಿಸುತ್ತಿರುವ ಸವಾಲುಗಳನ್ನು ಮೀರಿ ಗುರಿ ತಲುಪುವುದು ಹೇಗೆ ಎಂಬ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ.

ಪಾದಯಾತ್ರೆಯಲ್ಲಿ ಸಿ ಆರ್ ನೀಲಕಂದನ್

ಭಾರತ್ ಜೋಡೋ ಯಾತ್ರೆಯ 14ನೇ ದಿನ ಪರಿಸರ ಹೋರಾಟಗಾರ ಸಿ ಆರ್ ನೀಲಕಂದನ್ ಅವರು ಪಾಲ್ಗೊಂಡಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಮಹತ್ವದ ಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ.

ಕೊಚ್ಚಿಯ ಗಣ್ಯರೊಂದಿಗೆ ಮಾತುಕತೆ

ಕೊಚ್ಚಿಯ ಗಣ್ಯ ವ್ಯಕ್ತಿಗಳೊಂದಿಗೆ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವದ ಕುರಿತು ಚರ್ಚೆ ಮಾಡಿದ್ದಾರೆ. “ಕೊಚ್ಚಿಯ ಗಣ್ಯ ವ್ಯಕ್ತಿಗಳು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಮೋದಿ ಸರ್ಕಾರವು ತನ್ನ ವೈಫಲ್ಯಗಳನ್ನು ಮರೆಮಾಚಲು ಪ್ರಜಾಪ್ರಭುತ್ವ ಸಂಸ್ಥೆಗಳ ದುರುಪಯೋಗಪಡಿಸಿಕೊಳ್ಳುತ್ತಿದೆ ಮತ್ತು ದೇಶದ ಇಂದಿನ ಪರಿಸ್ಥಿತಿ ಎದುರಿಸಲು ಭಾರತ್ ಜೋಡೋ ಯಾತ್ರೆ ಅಗತ್ಯದಂತಹ ವಿವಿಧ ಪ್ರಮುಖ ವಿಷಯಗಳ ಮೇಲೆ ಚರ್ಚೆ ನಡೆದಿದೆ” ಎಂದು ಶ್ರೀನಿವಾಸ್ ಬಿ ವಿ ಟ್ವೀಟ್ ಮಾಡುವ ಮೂಲಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕೇರಳದ ತರತರಹದ ಊಟ ಸವಿದ ಯಾತ್ರಾರ್ಥಿಗಳು

ಯಾತ್ರಾರ್ಥಿಗಳು ಬುಧವಾರದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೇರಳ ರಾಜ್ಯದ ವಿಶೇಷ ಊಟವನ್ನು ಸವಿದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಭಾರತ್ ಜೋಡೋ ಟ್ವಿಟರ್ ಹ್ಯಾಂಡಲ್, “ನಿಮಗೆ ಹಸಿವಾಗಿದ್ದರೆ ಇದನ್ನು ನೋಡಬೇಡಿ! ಭಾರತ ಯಾತ್ರಿಗಳು ರುಚಿಕರವಾದ ಕೇರಳದ ಸವಿಯನ್ನು ಸವಿಯುತ್ತಿದ್ದಾರೆ” ಎಂದು ಬರೆದುಕೊಂಡಿದೆ.

ಅಕ್ಷರಶಃ ಇರುವೆಯಂತೆ ಕಂಡ ಯಾತ್ರೆಯ ಸಾಲು

ಭಾರತ್ ಜೋಡೋ ಯಾತ್ರೆಗೆ ಬೆಂಬಲ ದಿನೇ ದಿನೇ ಹೆಚ್ಚಾಗುತ್ತಿರುವ ವರದಿಗಳ ನಡುವೆ, ಕೇರಳದಲ್ಲಿ ಇಂದು ಮೆಟ್ರೋ ಸ್ಟೇಷನ್‌ ಕೆಳಗೆ ಯಾತ್ರಾರ್ಥಿಗಳು ಇರುವೆ ಸಾಲಿನಂತೆ ನಡೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿವೆ.

ಕೋಲಾಟ ಆಡಿದ ಯಾತ್ರಾರ್ಥಿಗಳು

ಯಾತ್ರೆಯ ನಡುವೆ ಇತರರನ್ನು ಹುರಿದುಂಬಿಸುತ್ತಾ ಕೆಲವು ಯಾತ್ರಾರ್ಥಿಗಳು ಕೋಲಾಟ ಆಡುತ್ತಾ ಕುಣಿದಿದ್ದಾರೆ. ಈ ಮೊದಲು ಸಾಂಪ್ರದಾಯಿಕ ನೃತ್ಯಗಳ ಪ್ರದರ್ಶನಕ್ಕೆ ಭಾರತ್ ಜೋಡೋ ಸಾಕ್ಷಿಯಾಗಿತ್ತು. ಇದೀಗ ಯಾತ್ರಾರ್ಥಿಗಳೇ ಮನರಂಜನೆ ದಾರಿ ಹಿಡಿದು ಯಾತ್ರೆಯನ್ನು ಆನಂದಿಸುತ್ತಿದ್ದಾರೆ.

ಯಾತ್ರೆಯಲ್ಲಿ ಸಾವರ್ಕರ್ ಪೋಸ್ಟರ್

ಭಾರತ್ ಜೋಡೋ ಯಾತ್ರೆಯ 14ನೇ ದಿನ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸಾವರ್ಕರ್ ಅವರ ಪೋಸ್ಟರ್ ಕಂಡು ಬಂದಿದೆ. ಕಾಂಗ್ರೆಸ್ ಸಾವರ್ಕರ್ ವಿಷಯವಾಗಿ ಬಿಜೆಪಿಯನ್ನು ಟೀಕಿಸುತ್ತಲೇ ಬಂದಿತ್ತು. ಆದರೆ ಇದೀಗ ದಿಢೀರ್ ಪೋಸ್ಟರ್ ಕಾಣಿಸಿಕೊಂಡಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಪಕ್ಷ, ಮುದ್ರಣ ದೋಷದಿಂದ ತಪ್ಪಾಗಿದೆ ಎಂದು ಹೇಳಿದೆ. “ಮುದ್ರಕರಿಗೆ ಸಂಕ್ಷಿಪ್ತವಾಗಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳೊಂದಿಗೆ ಪೋಸ್ಟರ್ ರಚಿಸಿ ಕೊಡುವಂತೆ ಹೇಳಲಾಗಿತ್ತು. ಅವರು ಆನ್‌ಲೈನ್‌ಗೆ ಹೋಗಿ ಪರಿಶೀಲನೆ ಮಾಡದೆ ಲಭ್ಯವಿರುವ ಪೋಸ್ಟರ್‌ಗಳನ್ನು ಮಾಡಿದ್ದಾರೆ" ಎಂದು ಪಕ್ಷ ಹೇಳಿದೆ.

ತಪ್ಪನ್ನು ಗಮನಿಸಿದ ಸ್ಥಳೀಯ ಕಾರ್ಯಕರ್ತರು ಮಹಾತ್ಮ ಗಾಂಧಿಯವರ ಫೋಟೋದಿಂದ ಮುಚ್ಚಲು ಪ್ರಯತ್ನಿಸಿದ್ದಾರೆ.

ಶಾಸಕಿಗೆ ಕೂರುವಂತೆ ಸೂಚಿಸಿದ ಸಚಿನ್ ಪೈಲಟ್

ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಬರುತ್ತಿದ್ದಂತೆಯೇ ಯಾತ್ರೆಯಲ್ಲಿ ಪಾಲ್ಗೊಂಡಿರುವ ಶಾಸಕಿ ದನಸಾರಿ ಅನಸೂಯ ಅವರು ಎದ್ದು ನಿಲ್ಲಲು ಪ್ರಯತ್ನಿಸುತ್ತಿದ್ದರು. ಆಗ ಸಚಿನ್ ಪೈಲಟ್ ಕುಳಿತೇ ಮಾತಾಡುವಂತೆ ಸೂಚಿಸಿದರು. ಆದರೂ ಶಾಸಕಿ ಎದ್ದು ನಿಂತು ಮಾತನಾಡಿದ್ದಾರೆ.

ಕಲಮಸ್ಸೆರಿಯಲ್ಲಿ 14ನೇ ದಿನದ ಯಾತ್ರೆ ಮುಕ್ತಾಯ

ಸಾಮಾಜಿಕ- ಸಾಂಸ್ಕೃತಿಕ ಹಾಗೂ ವ್ಯಾಪಾರ ಕ್ಷೇತ್ರದ ಪ್ರಮುಖ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದ ರ‍್ಯಾಲಿಯು ಕಲಮಸ್ಸೆರಿಯಲ್ಲಿ ಮುಕ್ತಾಯವಾಗಿದೆ. ರಾಹುಲ್ ಗಾಂಧಿ ಅವರು ಆಲುವಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app