ಭಾರತ್ ಜೋಡೋ | ರಾಹುಲ್‌ಗೆ ಸಾಥ್‌ ಕೊಟ್ಟ ತಂಗಿ; ಪತಿ, ಮಗನೊಂದಿಗೆ ಹೆಜ್ಜೆ ಹಾಕಿದ ಪ್ರಿಯಾಂಕ ಗಾಂಧಿ

Bharat Jodo | Priyanka Gandhi Vadra walking with Rahul Gandhi
  • ಯಾತ್ರೆಯಲ್ಲಿಯೇ ರಾಜಸ್ಥಾನದ ನಾಯಕತ್ವದ ಬಗ್ಗೆ ಸಚಿನ್ ಪೈಲಟ್‌ ಜೊತೆ ಚರ್ಚೆ 
  • ಮಧ್ಯಪ್ರದೇಶ ರಾಜ್ಯದಲ್ಲಿ 370 ಕಿ. ಮೀ ಕ್ರಮಿಸಲಿರುವ ಭಾರತ್ ಜೋಡೋ 

ಭಾರತ್ ಜೋಡೋ ಯಾತ್ರೆ ಬುಧವಾರ ಹಿಂದಿ ಭಾಷಿಕ ರಾಜ್ಯಗಳ ಹೃದಯ ಭಾಗ ಎನಿಸಿರುವ ಮಧ್ಯಪ್ರದೇಶಕ್ಕೆ ಕಾಲಿರಿಸಿದೆ. ಕಾಂಗ್ರೆಸ್ಸಿನ ಮಹತ್ವಾಕಾಂಕ್ಷಿ ಪಾದಯಾತ್ರೆಯ 78ನೇ ದಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ತಮ್ಮ ಕುಟುಂಬದೊಂದಿಗೆ ಭಾಗವಹಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಪಾದಯಾತ್ರೆಯು ಎರಡನೇ ದಿನ ನಡೆಯುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೆ. 7ರಂದು ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದರು. ಮೊದಲ ಬಾರಿಗೆ ಪ್ರಿಯಾಂಕ ಗಾಂಧಿ ವಾದ್ರಾ ಅವರು ತಮ್ಮ ಪತಿ ರಾಬರ್ಟ್‌ ವಾದ್ರಾ ಮತ್ತು ಮಗ ರೆಹಾನ್‌ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕುತ್ತಿದ್ದಾರೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಯಾತ್ರೆಯಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ಇದೀಗ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕ ಗಾಂಧಿ ವಾದ್ರಾ ಪಾಲ್ಗೊಳ್ಳುವ ಮೂಲಕ ಯಾತ್ರೆಗೆ ಸಾಥ್‌ ನೀಡಿದ್ದಾರೆ.

ರಾಜಸ್ಥಾನ ಚರ್ಚೆ ನಡುವೆ ಸಚಿನ್ ಪೈಲಟ್ ಭಾಗಿ

ಗುರುವಾರ ಬೆಳಿಗ್ಗೆ ಮಧ್ಯಪ್ರದೇಶದ ಬೋರ್ಗಾಂವ್ ಗ್ರಾಮದಿಂದ ಪುನರಾರಂಭಗೊಂಡ ಯಾತ್ರೆಯಲ್ಲಿ ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಕೂಡ ಭಾಗವಹಿಸಿದ್ದಾರೆ. ರಾಜಸ್ಥಾನ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರವಾಗುತ್ತಿದ್ದಂತೆ, ಇತ್ತ ಸಚಿನ್ ಪೈಲಟ್‌ ಯಾತ್ರೆ ಸೇರಿಕೊಂಡಿದ್ದಾರೆ.

ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ: ರಾಹುಲ್ ಗಾಂಧಿ

ಬುಧವಾರ ಬುರ್ಹಾನ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ತಾವು ಪ್ರತಿದಿನ ಸುಮಾರು ಎಂಟು ಗಂಟೆಗಳ ಕಾಲ ನಡೆಯುತ್ತಿರುವುದಾಗಿ ಮತ್ತು ಜನರ ‘ಮನ್ ಕಿ ಬಾತ್’ ಕೇಳಲು ಪ್ರತಿದಿನ ಸರಾಸರಿ 25 ಕಿಲೋಮೀಟರ್ ಕ್ರಮಿಸುತ್ತಿರುವುದಾಗಿ ಹೇಳಿದ್ದಾರೆ.

"ಯಾತ್ರೆಯ ನಡುವೆ ನಾವು ಜನರೊಂದಿಗೆ ಸಂವಹನ ನಡೆಸುತ್ತೇವೆ. ಸುಮಾರು ಎಂಟು ಗಂಟೆಗಳ ಕಾಲ ಜನರ 'ಮನ್ ಕಿ ಬಾತ್' ಅನ್ನು ಕೇಳುತ್ತೇವೆ. ಸುಮಾರು 15 ನಿಮಿಷಗಳ ಕಾಲ ಮಾತನಾಡುತ್ತೇವೆ. ಪ್ರಧಾನಿಯವರ 'ಮನ್ ಕಿ ಬಾತ್' ನಂತೆ ಅಲ್ಲ, ನಾವು ರೈತರು, ಮಹಿಳೆಯರು, ಕಾರ್ಮಿಕರು ಹಾಗೂ ಸಣ್ಣ ಪ್ರಮಾಣದ ವ್ಯಾಪಾರಿಗಳು ಯುವಕರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಕೇಳುತ್ತೇವೆ" ಎಂದು ಹೇಳಿದರು.

"ಕನ್ಯಾಕುಮಾರಿಯಿಂದ ನಾವು ಈ ಪ್ರಯಾಣವನ್ನು ಆರಂಭಿಸಿದ್ದೇವೆ. ಯಾತ್ರೆ ಪ್ರಾರಂಭವಾದಗ ವಿರೋಧ ಪಕ್ಷದ ನಾಯಕರು ಭಾರತ 3,300 ಕಿಲೋಮೀಟರ್ ಉದ್ದವಿದೆ, ಬರೀ ಪಾದಯಾತ್ರೆಯಲ್ಲಿ ಕ್ರಮಿಸಲು ಸಾಧ್ಯವಿಲ್ಲ ಎಂದು ಕುಹಕವಾಡಿದ್ದರು. ಆದರೆ ನಾವೀಗ ಮಧ್ಯಪ್ರದೇಶಕ್ಕೆ ಕಾಲಿರಿಸಿದ್ದೇವೆ. ಮಧ್ಯಪ್ರದೇಶದಲ್ಲಿ ಸುಮಾರು 370 ಕಿ.ಮೀ ಕ್ರಮಿಸುತ್ತೇವೆ. ಈ ಯಾತ್ರೆ ಶ್ರೀನಗರ ತಲುಪಿ ಅಲ್ಲಿ ತ್ರಿವರ್ಣ ಧ್ವಜ ಹಾರಿಸಲಿದೆ. ಅದನ್ನು ತಡಿಯಲು ಯಾರಿಂದಲೂ ಸಾಧ್ಯವಿಲ್ಲ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app