ಬಿಹಾರ | ಒಂದೆಡೆ ಸಚಿವ ಸಂಪುಟ ವಿಸ್ತರಣೆ, ಮತ್ತೊಂದೆಡೆ ಬಿಜೆಪಿ ಹೈಕಮಾಂಡ್ ಸಭೆ

  • ಕಾಂಗ್ರೆಸ್‌ನ ಮೂವರು ಶಾಸಕರಿಗೆ ಸಚಿವ ಸ್ಥಾನ
  • ಮೈತ್ರಿ ಮುರಿದ ಬಳಿಕ ಬಿಜೆಪಿಯ ಮೊದಲ ಸಭೆ

ಬಿಹಾರ ಮಹಾಘಟಬಂಧನ ಸರ್ಕಾರ ಮಂಗಳವಾರ ಸಚಿವ ಸಂಪುಟ ವಿಸ್ತರಿಸಲು ಸಜ್ಜಾಗಿದೆ. ಮತ್ತೊಂದೆಡೆ ಬಿಜೆಪಿ ಹೈಕಮಾಂಡ್ ರಾಜ್ಯ ಮುಖಂಡರ ಸಭೆ ಕರೆದಿದೆ.

ಜನತಾ ದಳ (ಯುನೈಟೆಡ್‌) ನಾಯಕ ನಿತೀಶ್‌ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬರೋಬ್ಬರಿ ವಾರದ ಬಳಿಕ(ಆಗಸ್ಟ್‌ 16) ಸಚಿವ ಸಂಪುಟ ವಿಸ್ತರಿಸಲಿದ್ದಾರೆ.

ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಕಾಂಗ್ರೆಸ್‌ ಉಸ್ತುವಾರಿ ಭಕ್ತ ಚರಣ್‌ ದಾಸ್‌ ಅವರು ಸೋಮವಾರ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ತಡರಾತ್ರಿ ಮಹಾಘಟಬಂಧನ ಸಂಭಾವ್ಯ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಸಲ್ಲಿಸಿದೆ.

ತೇಜಸ್ವಿ ಯಾದವ್ ಮತ್ತು ಚರಣ್ ದಾಸ್ ಸಂಭಾವ್ಯ ಪಟ್ಟಿಯೊಂದಿಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ತೆರಳಿದ್ದು, ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ನಾಯಕರೊಬ್ಬರು ವಿಧಾನಸಭೆಯ ನೂತನ ಸಭಾಪತಿ ಆಗಲಿದ್ದಾರೆ ಎಂದು ವರದಿಯಾಗಿದೆ.

ಆರ್‌ಜೆಡಿಯಿಂದ 17, ಜೆಡಿಯುನಿಂದ 12, ಕಾಂಗ್ರೆಸ್‌ನಿಂದ ಮೂವರು, ಎಚ್‌ಎಎಂ ಮತ್ತು ಎಡಪಕ್ಷಗಳಿಂದ ತಲಾ ಒಬ್ಬರು ಶಾಸಕರು ಸಚಿವ ಸಂಪುಟದಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಮಂಗಳವಾರ ಕಾಂಗ್ರೆಸ್‌ನಿಂದ ಇಬ್ಬರು ಸಚಿವರು ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ.

“ಕಾಂಗ್ರೆಸ್ ಇಬ್ಬರು ಶಾಸಕರು ಆಗಸ್ಟ್ 16ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಮತ್ತೊಬ್ಬ ಶಾಸಕ ಸೇರಲಿದ್ದಾರೆ” ಎಂದು ಚರಣ್ ದಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಾವರ್ಕರ್ ದ್ವಿರಾಷ್ಟ್ರದ ಸಿದ್ಧಾಂತ ಹುಟ್ಟುಹಾಕಿದರು, ಜಿನ್ನಾ ಪರಿಪೂರ್ಣಗೊಳಿಸಿದರು| ಬಿಜೆಪಿ ವಿಡಿಯೊಗೆ ಜೈರಾಮ್ ತಿರುಗೇಟು

ಬಿಜೆಪಿ ಹೈಕಮಾಂಡ್‌ ಸಭೆ

ಜೆಡಿಯು ಎನ್‌ಡಿಎಯೊಂದಿಗೆ ಮೈತ್ರಿ ಮುರಿದುಕೊಂಡ ಬೆನ್ನಲ್ಲೆ ಬಿಜೆಪಿ ಹೈಕಮಾಂಡ್, ಬಿಹಾರ ರಾಜ್ಯ ನಾಯಕರ ಸಭೆ ಕರೆದಿದೆ.

2024ರ ಲೋಕಸಭೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಮತ್ತು ಸಂಘಟನೆಯಲ್ಲಿ ಕೆಲವು ಬದಲಾವಣೆಗಳ ಚರ್ಚೆಯು ಬರಬಹುದು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌ ಸಂತೋಷ್ ಕೂಡ ಉಪಸ್ಥಿತರಿರುತ್ತಾರೆ. ಕೇಂದ್ರ ಸಚಿವರಾದ ಅಶ್ವಿನಿ ಚೌಬೆ, ಗಿರಿರಾಜ್ ಸಿಂಗ್, ನಿತ್ಯಾನಂದ ರೈ ಹಾಗೂ ಪಕ್ಷದ ಹಿರಿಯ ನಾಯಕ ರವಿಶಂಕರ್ ಪ್ರಸಾದ್, ಸುಶೀಲ್ ಮೋದಿ ಹಾಗೂ ಸ್ಥಳೀಯ ಬಿಜೆಪಿ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. 

ಬಿಜೆಪಿ ಬಿಹಾರ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್, ಮಾಜಿ ಉಪ ಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್, ರೇಣು ದೇವಿ ಹಾಗೂ ಮಾಜಿ ಸಚಿವ ಶಾನವಾಜ್ ಹುಸೇನ್ ಕೂಡ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿವೆ.

ಬಿಹಾರದಲ್ಲಿ ಮೈತ್ರಿ ಮುರಿದು ಸರ್ಕಾರ ಉರುಳಿದ ಬಳಿಕ ಬಿಜೆಪಿ ನಡೆಸುತ್ತಿರುವ ಮೊದಲ ಸಭೆ ಇದಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್