ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಮೂಲಕ ಬಿಹಾರ ದೇಶಕ್ಕೆ ದಿಕ್ಕು ತೋರಿಸಿದೆ: ತೇಜಸ್ವಿ ಯಾದವ್

  • ನಾಲ್ಕು ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಕಾಂಗ್ರೆಸ್‌ 
  • ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ತೇಜಸ್ವಿ ಯಾದವ್

ಬಿಹಾರದಲ್ಲಿ ಅಧಿಕಾರ ಬದಲಾವಣೆಯ ನಂತರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿದ್ದು, "ಬಿಹಾರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಮೂಲಕ ದೇಶಕ್ಕೆ ದಿಕ್ಕು ತೋರಿಸಿದ್ದೇವೆ" ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿ ಮತ್ತು ಇತರ ಎಡಪಕ್ಷಗಳ ನಾಯಕರನ್ನು ಭೇಟಿಯಾದ ತೇಜಸ್ವಿ ಯಾದವ್ ಅವರು ಹೊಸ ಸರ್ಕಾರದ ಕುರಿತು ಸಂತಸ ಹಂಚಿಕೊಂಡಿದ್ದಾರೆ. ಕಾಂಗ್ರೆಸ್‌ ಮೂಲಗಳ ಪ್ರಕಾರ ಮಹಾಘಟಬಂಧನದ ಮಿತ್ರಪಕ್ಷಗಳ ನಡುವೆ ಸಚಿವ ಸ್ಥಾನದ ಚೌಕಸಿ ನಡೆದಿದೆ. ಕಾಂಗ್ರೆಸ್‌ ನಾಲ್ವರು ಸಚಿವರ ಸ್ಥಾನಗಳನ್ನು ಪಡೆಯಲು ಪ್ರಯತ್ನಿಸಿದರೆ, ಆರ್‌ಜೆಡಿ ಇಬ್ಬರಿಗಿಂತ ಹೆಚ್ಚಿನ ಸ್ಥಾನ ಕೊಡಲು ಹಿಂದೇಟು ಹಾಕುತ್ತಿದೆ. 

ಕಳೆದ ವರ್ಷ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ಎಐಸಿಸಿ ಉಸ್ತುವಾರಿ ಭಕ್ತ ಚರಣ್‌ ದಾಸ್‌ ಅವರನ್ನು ದೂಷಿಸಿದ್ದರು. ಆದರೆ ಇದೀಗ ಇಬ್ಬರು ಪರಸ್ಪರ ಭೇಟಿಯಾಗಿ ಸಚಿವ ಸಂಪುಟದ ಕುರಿತು ಚರ್ಚಿಸಿದ್ದಾರೆ.

ಇದೇ ವೇಳೆ ತೇಜಸ್ವಿ ಯಾದವ್ ಅವರು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಸಿಪಿಐ ಸಹವರ್ತಿ ಡಿ ರಾಜಾ ಅವರನ್ನು ಭೇಟಿಯಾಗಿದ್ದಾರೆ.

“ಬಿಹಾರ ವಿಧಾನಸಭೆಯಲ್ಲಿ, ಬಿಜೆಪಿ ಹೊರತುಪಡಿಸಿ ನಾವೆಲ್ಲರೂ ಒಗ್ಗೂಡಿದ್ದೇವೆ. ದೇಶದಲ್ಲಿ ಈಗ ಕಾಣಿಸುತ್ತಿರುವ ಸ್ಥಿತಿಯೇ ಇದಕ್ಕೆ ಕಾರಣ. ಬೆಲೆಯೇರಿಕೆ, ನಿರುದ್ಯೋಗ ಹಾಗೂ ಕೋಮು ಉದ್ವಿಗ್ನತೆಯಿಂದ ಜನರು ಬೇಸತ್ತಿದ್ದಾರೆ. ದೇಶವನ್ನು ಆಳಲು ಬಯಸುವವರು ಹಿಂದು ಮತ್ತು ಮುಸ್ಲಿಮರನ್ನು ಪರಸ್ಪರ ಎತ್ತಿ ಕಟ್ಟುತ್ತಿದ್ದಾರೆ. ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ನಮ್ಮ ಗಂಗಾ- ಜಮುನಾ ಸಂಸ್ಕೃತಿಯ ಬಿಹಾರವು ಮತ್ತೊಮ್ಮೆ ದೇಶಕ್ಕೆ ಹೊಸ ದಿಕ್ಕನ್ನು ತೋರಿಸಿದೆ,” ಎಂದು ಅವರು ತೇಜಸ್ವಿ ಯಾದವ್ ಹೇಳಿದ್ದಾರೆ.

ಸೋನಿಯಾ ಗಾಂಧಿ, ಯೆಚೂರಿ, ರಾಜಾ ಹಾಗೂ ದೀಪಂಕರ್ (ಭಟ್ಟಾಚಾರ್ಯ) ಅವರಿಗೆ ತೇಜಸ್ವಿ ತೇಜಸ್ವಿ  ಕೃತಜ್ಞತೆ ಸಲ್ಲಿಸಿದರು.

ಈ ಸುದ್ದಿ ಓದಿದ್ದೀರಾ? ಸುದ್ದಿ ವಿವರ | ಮೈತ್ರಿ ಮುರಿಯುವ ಮೂಲಕ ಬಿಹಾರ ಬಿಕ್ಕಟ್ಟು ಮುಕ್ತಾಯ; ಹೊಸ ಸರ್ಕಾರ ರಚನೆಗೆ ಸಿದ್ಧತೆ

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆಡಳಿತ ಪಕ್ಷವು ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುತ್ತಿದೆ ಎಂದು ಟೀಕಿಸಿದರು. “ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಏನಾಯಿತು? ಜಾರ್ಖಂಡ್‌ನಲ್ಲಿ ಏನಾಗುತ್ತಿದೆ. ಎಲ್ಲಾ ನಾಟಕಗಳನ್ನು ನಾವು ನೋಡಿದ್ದೇವೆ. ಹೆದರುವವರನ್ನು ಹೆದರಿಸಿ, ಮಾರುವವರನ್ನು ಖರೀದಿಸಿ ಎನ್ನುವ ಮಾತಿದೆ. ಇದನ್ನೇ ಬಿಜೆಪಿ ಪಾಲಿಸುತ್ತಿದೆ. ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಯಂತೆಯೇ ನಮ್ಮ ಸಾಂವಿಧಾನಿಕ ಸಂಸ್ಥೆಗಳು ಒಂದೊಂದಾಗಿ ನಾಶವಾಗುತ್ತಿವೆ. ಪೊಲೀಸ್ ಠಾಣೆಗಳಂತೂ ಹದಗೆಟ್ಟಿವೆ. ಅವರು ಹೆದರಿಸಲು ಕೆಲಸ ಮಾಡುತ್ತಿದ್ದಾರೆ. ಆದರೆ ನಾವು, ಬಿಹಾರದವರು ಭಯಪಡುವವರಲ್ಲ. ಬಿಹಾರಿ ಮಾರಾಟಕ್ಕಿಲ್ಲ, ಬಾಳಿಕೆ ಬರುತ್ತದೆ. ನಮ್ಮ ಸ್ವಾಭಿಮಾನದ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ'' ಎಂದು ಕಿಡಿಕಾರಿದರು.

ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಹೊರಟಿದೆ ಎಂದು ತೇಜಸ್ವಿ ಆರೋಪಿಸಿದ್ದಾರೆ. “ಬಹುತೇಕ ಪ್ರಾದೇಶಿಕ ಪಕ್ಷಗಳು ಹಿಂದುಳಿದ ವರ್ಗದವರ ಮತ್ತು ದಲಿತರ ನೇತೃತ್ವದಲ್ಲಿ ಇವೆ. ಹಿಂದುಳಿದ ಸಮುದಾಯದಿಂದ ಬಂದ ನಿತೀಶ್ ಕುಮಾರ್ ಅವರನ್ನು ಮುಗಿಸಲು ಬಿಜೆಪಿಯವರು ಬಯಸಿದ್ದರು. ನೀವು ರಾಮ್ ವಿಲಾಸ್‌ಜಿ ಅವರ ಪಕ್ಷವನ್ನು ಎರಡು ಹೋಳು ಮಾಡಿದ್ದೀರಿ. ಅವರ ರಾಜಕೀಯ ಜೀವನ ಮುಗಿಸಲು ಬಯಸುತ್ತೀರಿ. ಪ್ರಾದೇಶಿಕ ಪಕ್ಷಗಳು ಕೊನೆಗೊಂಡರೆ ವಿರೋಧ ಪಕ್ಷವೇ ಇರುವುದಿಲ್ಲ. ವಿರೋಧ ಪಕ್ಷವಿಲ್ಲದಿದ್ದರೆ, ಪ್ರಜಾಪ್ರಭುತ್ವ ಇರುವುದಿಲ್ಲ. ಮತ್ತು ಪ್ರಜಾಪ್ರಭುತ್ವ ಇಲ್ಲದಿದ್ದರೆ, ದೇಶದ ಮೇಲೆ ಸರ್ವಾಧಿಕಾರ ಸಾಧಿಸಬಹುದು. ಯಾವುದೇ ಪ್ರಶ್ನೆಗಳಿಲ್ಲದೆ ಸರ್ವಾಧಿಕಾರದಲ್ಲಿ ಆಳಬಹುದು, ಮುಂದೆ ರಾಜಾಡಳಿತದಂತೆ ಇರುತ್ತದೆ” ಎಂದು ಅವರು ಟೀಕಿಸಿದ್ದಾರೆ.

ನಿತೀಶ್ ಕುಮಾರ್ ಮೈತ್ರಿ ಬದಲಾಯಿಸುವ ಪರಿಪಾಠ ಹೊಂದಿರಬಹುದು. ಆದರೆ ಅವರು ಸಮಾಜವಾದಿ ಸಿದ್ಧಾಂತಕ್ಕೆ ಸೇರಿದವರು ಎಂದು ತೇಜಸ್ವಿ ಅಭಿಪ್ರಾಯಪಟ್ಟರು. "ಈ ಸಮಾಜವಾದಿ ಪರಂಪರೆ ನಮ್ಮ ಪೂರ್ವಜರು ನಮಗೆ ನೀಡಿದ ಉಡುಗೊರೆ. ಯಾರೂ ಅದನ್ನು ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ನಾವು ಪರಸ್ಪರ ಕಿತ್ತಾಡಿಕೊಂಡಿರಬಹುದು. ಆದರೆ ರಾಷ್ಟ್ರೀಯ ಹಿತಾಸಕ್ತಿಯ ವಿಷಯ ಬಂದಾಗ ಎಲ್ಲರನ್ನೂ ಒಗ್ಗೂಡಿಸುವುದು ನಮ್ಮ ಜವಾಬ್ದಾರಿ" ಎಂದು ಅವರು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್