ಧ್ವಜಾರೋಹಣ ಮಾಡದವರನ್ನು ದೇಶ ನಂಬುವುದಿಲ್ಲ ಎಂದ ಬಿಜೆಪಿ ನಾಯಕ; ವಿಪಕ್ಷಗಳಿಂದ ತೀವ್ರ ವಿರೋಧ

  • ಮಹೇಂದ್ರ ಭಟ್ ಹೇಳಿಕೆ ಹಾಸ್ಯಸ್ಪವಾಗಿದೆ ಎಂದ ಎಎಪಿ
  • ನನ್ನ ಮಾತು ಕಾರ್ಯಕರ್ತರಿಗೆ ಎಂದು ಭಟ್ ಸಮರ್ಥನೆ

ಉತ್ತರಾಖಂಡ ಬಿಜೆಪಿ ಮುಖ್ಯಸ್ಥ ಮಹೇಂದ್ರ ಭಟ್ ಅವರ ಧ್ವಜಾರೋಹಣ ಹೇಳಿಕೆಗೆ ವಿಪಕ್ಷಗಳಿಂದ ಭಾರಿ ಖಂಡನೆ ವ್ಯಕ್ತವಾಗಿದೆ.

“ಸ್ವಾತಂತ್ರ್ಯ ದಿನಾಚರಣೆಯ ದಿನದಂದು ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸದವರನ್ನು ದೇಶ ನಂಬುವುದಿಲ್ಲ” ಎಂದು ಮಹೇಂದ್ರ ಭಟ್ ಅವರು ಹೇಳಿಕೆ ನೀಡಿದ್ದರು. ಇದೀಗ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, “ಬಿಜೆಪಿ ನಾಯಕರ ಹೇಳಿಕೆಯು ಬೇಜವಾಬ್ದಾರಿತನದಿಂದ ಕೂಡಿದೆ ಮತ್ತು ಖಂಡನೀಯ" ಎಂದು ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷಗಳು ಟೀಕಿಸಿವೆ.

ಉತ್ತರಾಖಂಡ ಕಾಂಗ್ರೆಸ್ ಮುಖ್ಯಸ್ಥ ಕರಣ್ ಮಹರಾ, “ಈ ಕೇಸರಿ ವಸ್ತ್ರಧಾರಿ ನಾಯಕರು ಅಂತಹ ದೊಡ್ಡ ದೇಶಭಕ್ತರಾಗಿದ್ದರೆ, ಆರ್‌ಎಸ್‌ಎಸ್ 51 ವರ್ಷಗಳಿಂದ ನಾಗ್ಪುರದ ತನ್ನ ಕೇಂದ್ರ ಕಚೇರಿಯಲ್ಲಿ ಏಕೆ ರಾಷ್ಟ್ರಧ್ವಜವನ್ನು ಹಾರಿಸಲಿಲ್ಲ? ಆಗಸ್ಟ್ ಕ್ರಾಂತಿ ಕಾಂಗ್ರೆಸ್ ಸಿದ್ಧಾಂತದ ವಿಜಯವನ್ನು ಸೂಚಿಸುತ್ತದೆ. ಬಿಜೆಪಿ ತನ್ನ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದ ಮೂಲಕ ಮಹಾನ್ ಕಾರ್ಯಕ್ರಮವನ್ನು ಅತ್ಯಂತ ಕೆಟ್ಟದಾಗಿ ಅನುಕರಣೆ ಮಾಡಿದೆ” ಎಂದು ಕಿಡಿಕಾರಿದ್ದಾರೆ.

ಈ ಸುದ್ದಿ ಓದಿದ್ದೀರಾ? ಉತ್ತರಾಖಂಡ | ಆದಾಯಕ್ಕಿಂತ 522 ಪಟ್ಟು ಹೆಚ್ಚು ಆಸ್ತಿ; ಐಎಎಸ್‌ ಅಧಿಕಾರಿಯ ಬಂಧನ

ತ್ರಿವರ್ಣ ಧ್ವಜವನ್ನು ಎಲ್ಲಿ ಹಾರಿಸುವುದಿಲ್ಲವೋ ಆ ಮನೆಗಳ ಛಾಯಾಗ್ರಹಣ ಮಾಡಲಾಗುತ್ತದೆ ಎಂಬ ಭಟ್ ಅವರ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ಎಎಪಿ ವಕ್ತಾರ ಉಮಾ ಸಿಸೋಡಿಯಾ ಭಟ್ ಅವರ ಹೇಳಿಕೆಗಳು ಹಾಸ್ಯಾಸ್ಪದ ಎಂದು ಕರೆದಿದ್ದಾರೆ.

"ಬಿಜೆಪಿ ತ್ರಿವರ್ಣ ಧ್ವಜವನ್ನು ಅವಮಾನ ಮಾಡಿದಷ್ಟು ಇಲ್ಲಿಯವರೆಗೆ ಯಾರೂ ಅವಮಾನಿಸಿಲ್ಲ" ಎಂದು ಉಮಾ ಸಿಸೋಡಿಯಾ ಹೇಳಿದರು.

ತ್ರಿವರ್ಣ ಧ್ವಜ ಹಾರಿಸದ ಪ್ರತಿ ಮನೆಗಳ ಚಿತ್ರಗಳನ್ನು ಕಳುಹಿಸಬೇಕು ಎನ್ನುವ ಹೇಳಿಕೆಯನ್ನು ಮಹೇಂದ್ರ ಭಟ್ ತಿರಸ್ಕರಿಸಿದ್ದು, "ನನ್ನ ಹೇಳಿಕೆಯು ಪಕ್ಷದ ಕಾರ್ಯಕರ್ತರಿಗೆ ಮಾತ್ರ ಮೀಸಲಾಗಿದೆ, ಏಕೆಂದರೆ ಪ್ರತಿಯೊಬ್ಬರೂ ಪ್ರಧಾನಿಯ ಕರೆಗೆ ಸ್ಪಂದಿಸಬೇಕೆಂದು ನಾನು ಬಯಸುತ್ತೇನೆ" ಎಂದು ಅವರು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್