
- ಬಿಜೆಪಿ ನಾಯಕ ಜೆ ಪಿ ನಡ್ಡಾ ಅವರಿಗೆ, ಜಯರಾಮ್ ರಮೇಶ್ ಪತ್ರ
- ಕೂಡಲೇ ಕ್ಷಮೆ ಕೇಳದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವ ಎಚ್ಚರಿಕೆ
ಕೇರಳದಲ್ಲಿ ರಾಹುಲ್ ಗಾಂಧಿ ಮಾತನಾಡಿರುವ ವಿಡಿಯೋಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್ ಸೇರಿದಂತೆ ಬಿಜೆಪಿ ನಾಯಕರು ಹಂಚಿಕೊಂಡಿದ್ದಾರೆ. ಈ ಬಗ್ಗೆ ಕೂಡಲೇ ಕ್ಷಮೆ ಕೇಳದಿದ್ದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಲಾಗಿದೆ” ಎಂದು ಆರೋಪಿಸಿದೆ. ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಬಿಜೆಪಿ ನಾಯಕ ಜೆ ಪಿ ನಡ್ಡಾ ಅವರಿಗೆ ಪತ್ರವನ್ನೂ ಬರೆದಿದ್ದಾರೆ.
“ಶುಕ್ರವಾರ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾದ ವರದಿಯನ್ನು ಹಲವು ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ಹಂಚಿಕೊಂಡಿದ್ದಾರೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಮೂಲ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ವಯನಾಡಿನ ತಮ್ಮ ಕಚೇರಿ ಮೇಲೆ ಎಸ್ಎಫ್ಐ ಹಿಂಸಾಚಾರದ ಕುರಿತು ಮಾತನಾಡಿದ್ದಾರೆ. ಆದರೆ, ಅದನ್ನು ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಅವರ ಹತ್ಯೆಗೆ ಸಂಬಂಧಿಸಿದಂತೆ ಮಾತನಾಡಿರುವುದು ಎಂಬಂತೆ ಉದ್ದೇಶಪೂರ್ವಕವಾಗಿ ತಿರುಚಲಾಗಿದೆ” ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
"ಸಂಸದ ರಾಜ್ಯವರ್ಧನ್ ರಾಥೋಡ್, ಸಂಸದ ಸುಬ್ರತ್ ಪಾಠಕ್, ಶಾಸಕ ಕಮಲೇಶ್ ಸೈನಿ ಮತ್ತು ಬಿಜೆಪಿಯ ಹಲವರು, ಪೂರ್ವಾಪರ ಪರಿಶೀಲಿಸದೆ ಉದ್ದೇಶಪೂರ್ವಕವಾಗಿ ತಿರುಚಿದ ವಿಡಿಯೊವನ್ನೇ ಶೇರ್ ಮಾಡಿದ್ದಾರೆ” ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
“ರಾಥೋಡ್ ಕಾಂಗ್ರೆಸ್ ಪಕ್ಷವನ್ನು ಧೂಷಿಸುವ ಉದ್ದೇಶದಿಂದ ಮತ್ತು ಕೋಮುವಾದವನ್ನು ಮತ್ತಷ್ಟು ಪ್ರಚೋದಿಸಲು ಈ ರೀತಿ ತಂತ್ರ ಹೆಣೆದಿದ್ದಾರೆ ಎಂಬುವುದರಲ್ಲಿ ಸಂದೇಹವೇ ಇಲ್ಲ” ಎಂದು ಜೈರಾಮ್ ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮನರೇಗಾ ವಿರುದ್ಧ ಮೋದಿ ಮಾತು ಕೇಳಿ ಆಘಾತವಾಗಿತ್ತು: ರಾಹುಲ್ ಗಾಂಧಿ
“ಬಿಜೆಪಿ ಕಾರ್ಯಕರ್ತರು ಅಪ್ಲೋಡ್ ಮಾಡಿ ಮತ್ತು ಶೇರ್ ಮಾಡಿರುವ ಸುಳ್ಳು ವರದಿಯನ್ನು ಈಗ ಡಿಲೀಟ್ ಮಾಡಿರಬಹುದು. ಆದರೆ ಈಗಾಗಲೇ ಉಂಟಾಗಿರುವ ಹಾನಿಯನ್ನು ಸರಿಪಡಿಸಲಾಗದು” ಎಂದು ಅವರು ಕಿಡಿ ಕಾರಿದ್ದಾರೆ.
“ತಿರುಚಿದ ವರದಿ ಪ್ರಸಾರ ಮಾಡಿದ ಖಾಸಗಿ ಸುದ್ದಿ ವಾಹಿನಿ ವಿರುದ್ಧ ದೂರು ನೀಡಿದ್ದೇವೆ. ನೀವು ಮತ್ತು ನಿಮ್ಮ ಪಕ್ಷದ ಕಾರ್ಯಕರ್ತರು ಇಂತಹ ಸುಳ್ಳು ಸುದ್ದಿಗಳನ್ನು ಶೇರ್ ಮಾಡುವುದನ್ನು ಬಿಡುತ್ತೀರಿ ಎಂದು ನಾವು ಭಾವಿಸಿದ್ದೇವೆ. ಜತೆಗೆ ನಿರ್ಲಕ್ಷ್ಯದಿಂದ ವರ್ತಿಸಿದ ನಿಮ್ಮ ಕಾರ್ಯಕರ್ತರ ಪರವಾಗಿ ನೀವು ಕ್ಷಮೆ ಕೇಳುತ್ತೀರಾ ಎಂಬ ನಿರೀಕ್ಷೆ ಇದೆ” ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
Shri @Jairam_Ramesh, GS Communications AICC has written to the BJP President, Shri @JPNadda strongly condemning doctored social media posts by BJP party leaders and demanding an apology failing which appropriate legal action shall be initiated. pic.twitter.com/nlSiWTl4IB
— Congress (@INCIndia) July 2, 2022
“ಕೂಡಲೇ ಕ್ಷಮೆ ಕೇಳದಿದ್ದರೆ, ಸಾಮಾಜಿಕ ಜಾಲತಾಣಗಳನ್ನು ಈ ರೀತಿ ನಿರ್ಲಜ್ಜವಾಗಿ, ಬೇಜವಾಬ್ದಾರಿಯಿಂದ ಮತ್ತು ಪ್ರಚೋದನಕಾರಿ ರೀತಿಯಲ್ಲಿ ಬಳಸುವುದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, “ದೇಶವನ್ನು ದ್ವೇಷದ ಬೆಂಕಿಗೆ ತಳ್ಳಿ ಅದರಿಂದ ತನ್ನ ಕೈಗಳನ್ನು ಬೆಚ್ಚಗಾಗಿಸಿಕೊಳ್ಳುವ ಬಿಜೆಪಿ ಮತ್ತು ಆರ್ಎಸ್ಎಸ್ನ ಇತಿಹಾಸ ಇಡೀ ಭಾರತಕ್ಕೆ ತಿಳಿದಿದೆ. ದೇಶದ್ರೋಹಿಗಳು ದೇಶವನ್ನು ಒಡೆಯಲು ಎಷ್ಟೇ ಪ್ರಯತ್ನಿಸಿದರೂ, ಭಾರತವನ್ನು ಒಗ್ಗೂಡಿಸಲು ಕಾಂಗ್ರೆಸ್ ಹೆಚ್ಚಿನ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ" ಎಂದು ಕಿಡಿಕಾರಿದ್ದಾರೆ.