ಅಕ್ರಮ ಹಣ ಸಾಗಿಸಲು ಪೊಲೀಸರನ್ನು ಬಳಸಿಕೊಂಡಿದೆ ಬಿಜೆಪಿ: ಅಶೋಕ್ ಗೆಹ್ಲೋಟ್ ಆರೋಪ

ASHOK GEHLOT
  • ಮುಖ್ಯಮಂತ್ರಿ ತಬ್ಬಿಬ್ಬುಗೊಂಡಿದ್ದಾರೆ ಎಂದ ಪೂನಿಯಾ
  • 'ಬಿಜೆಪಿಯದು ಷಡ್ಯಂತ್ರ, ಅಂತಿಮ ಗೆಲುವು ಕಾಂಗ್ರೆಸ್ಸಿನದೇ'

ಭಾರತೀಯ ಜನತಾ ಪಕ್ಷ ಅಕ್ರಮ ಹಣ ಸಾಗಿಸಲು ಅರೆ ಸೇನಾಪಡೆ ಮತ್ತು ಪೊಲೀಸ್ ಪಡೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಆರೋಪಿಸಿದ್ದಾರೆ. ಆದರೆ ರಾಜ್ಯ ಬಿಜೆಪಿ ಆರೋಪವನ್ನು ತಳ್ಳಿಹಾಕಿದೆ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಹೀದ್ ಸ್ಮಾರಕದಲ್ಲಿ ಮಾತನಾಡಿದ ಅಶೋಕ್ ಗೆಹ್ಲೋಟ್ “ಬಿಜೆಪಿಯವರು ಅವರ ಆಡಳಿತದಲ್ಲಿ ಅರೆಸೇನೆ ಮತ್ತು ಪೊಲೀಸ್ ಪಡೆಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಅವರು ಹಿಂಬಾಗಿಲಿನ ಮೂಲಕ ಬಿಜೆಪಿ ಕಚೇರಿಗಳಿಗೆ ಟ್ರಕ್‌ಗಳಲ್ಲಿ ಹಣವಿರುವ ಪೆಟ್ಟಿಗೆಗಳನ್ನು ಸಾಗಿಸುತ್ತಾರೆ” ಎಂದು ಆರೋಪಿಸಿದ್ದಾರೆ.

“ಈ ವಾಹನಗಳು ಪೊಲೀಸರಿಗೆ ಸೇರಿರುವುದರಿಂದ ಯಾರೂ ತಡೆಯುವುದಿಲ್ಲ. ಜನರು ತಮ್ಮ ರಕ್ಷಣೆಗಾಗಿ ಬಂದಿರುವುದಾಗಿ ಭಾವಿಸುತ್ತಾರೆ” ಎಂದು ಆರೋಪಿಸಿದರು. 

“ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರೂ ನೋಟುಗಳನ್ನು ಅಮಾನ್ಯಗೊಳಿಸಿದ್ದಾರೆ. ಅವರು ತಮ್ಮ ಅಕ್ರಮ ಹಣ ಸುಲಭವಾಗಿ ಸಾಗಿಸುವ ಉದ್ದೇಶದಿಂದ 2000 ರೂಪಾಯಿ ನೋಟುಗಳನ್ನು ಚಲಾವಣೆಗೆ ತಂದಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

“ದೇಶದಲ್ಲಿ ದೊಡ್ಡ ‍ಷಡ್ಯಂತ್ರವೇ ನಡೆಯುತ್ತಿದೆ. ಆದರೆ ಕಾಂಗ್ರೆಸ್‌ ಕಾರ್ಯಕರ್ತರು ಅದಕ್ಕೆ ಭಯಪಡುವ ಅಗತ್ಯವಿಲ್ಲ. ಅಂತಿಮ ಗೆಲುವು ಕಾಂಗ್ರೆಸ್‌ ಮತ್ತು ಅದರ ಕಾರ್ಯಕರ್ತರದ್ದಾಗುತ್ತದೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ| ಪ್ರತಿಭಟನಾನಿರತ ಭೀಮ್ ಆರ್ಮಿ ಕಾರ್ಯಕರ್ತರ ಮೇಲೆ ಪೋಲಿಸ್ ಲಾಠಿ ಚಾರ್ಜ್

ಆರೋಪ ತಳ್ಳಿಹಾಕಿದ ರಾಜ್ಯ ಬಿಜೆಪಿ

ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪುನಿಯಾ ಅವರು ಅಶೋಕ್ ಗೆಹ್ಲೋಟ್ ಅವರ ಆರೋಪವನ್ನು ತಳ್ಳಿಹಾಕಿದ್ದು, “ಮುಖ್ಯಮಂತ್ರಿಯೊಬ್ಬರು ಬೇಜವಾಬ್ದಾರಿ, ತರ್ಕಹೀನ ಹಾಗೂ ಆಧಾರರಹಿತ ಮಾತುಗಳನ್ನು ಆಡುತ್ತಿರುವುದು ಅವರ ಗ್ರಹಿಕೆ ತೋರಿಸುತ್ತದೆ” ಎಂದರು.

ಅಭದ್ರತೆಯಿಂದ ಮುಖ್ಯಮಂತ್ರಿ ಕುರ್ಚಿಯ ಬಗ್ಗೆ ತಬ್ಬಿಬ್ಬುಗೊಂಡಿದ್ದು, ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆ ಒದಗಿಸುವ ಅರೆಸೇನಾ ಪಡೆಗಳನ್ನು ಅವಮಾನಿಸಿದ್ದಾರೆ. ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಅವರ ಹೇಳಿಕೆ ಅಮಾನವೀಯವಾದದ್ದು ಎಂದು ಪೂನಿಯಾ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್