ದಕ್ಷಿಣದಲ್ಲಿ ಮೋದಿ ಮಂತ್ರ, ತೆಲಂಗಾಣ ಕಾರ್ಯಕಾರಿಣಿ ಹಿಂದಿದೆ ಬಿಜೆಪಿ ತಂತ್ರ

2023ರಲ್ಲಿ ತೆಲಂಗಾಣದಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟು ದಕ್ಷಿಣದಲ್ಲಿ ತನ್ನ ಅಧಿಕಾರ ವಿಸ್ತರಿಸಿಕೊಳ್ಳುವ ಕಾರ್ಯತಂತ್ರದ ಭಾಗವಾಗಿ ಬಿಜೆಪಿ ತೆಲಂಗಾಣದ ರಾಜಧಾನಿ ಹೈದರಾಬಾದ್‌ ಅನ್ನು ತನ್ನ ರಾಷ್ಟ್ರೀಯ ಕಾರ್ಯಕಾರಿಣಿಗೆ ಆರಿಸಿಕೊಂಡಿದೆ.
BJP National Executive Meeting

ಐದು ರಾಜ್ಯಗಳ ಚುನಾವಣೆಯಲ್ಲಿ ಹಿಡಿತ ಸಾಧಿಸಿದ ನಂತರ ಬಿಜೆಪಿ ಉತ್ತರದಲ್ಲಿ ತನ್ನದೇ ಅಧಿಪತ್ಯ ಸ್ಥಾಪಿಸಿದಂತಾಗಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಸಹ ಅಧಿಕಾರಕ್ಕಾಗಿ ಹಗಲುಗನಸು ಕಾಣುತ್ತಿದೆ. ಎಎಪಿನಂತಹ ಸಣ್ಣ ಗಾತ್ರದ ಪಕ್ಷಗಳನ್ನು ಹೊರತುಪಡಿಸಿದರೆ ಬಿಜೆಪಿಗೆ ಪ್ರತಿಸ್ಪರ್ಧಿ ಇಲ್ಲದಂತಾಗಿದೆ. 

ಮಹಾರಾಷ್ಟ್ರದಲ್ಲೂ ಮತ್ತೆ ಕಮಲ ಅರಳಿಸಿ ಸಂತಸದಲ್ಲಿರುವ ಬಿಜೆಪಿಯು ಈಗ ತನ್ನ ದೃಷ್ಟಿಯನ್ನು ದಕ್ಷಿಣದತ್ತ ಬೀರಿದೆ. ಕಳೆದ 18 ವರ್ಷಗಳಿಂದ ದಕ್ಷಿಣದ ರಾಜ್ಯಗಳಲ್ಲಿ ಪ್ರಮುಖ ಸಭೆ ನಡೆಸುವುದರಿಂದ ದೂರ ಉಳಿದಿದ್ದ ಬಿಜೆಪಿ, ಈಗ 2004ರ ನಂತರ ಮೊದಲ ಬಾರಿಗೆ ಹೈದರಾಬಾದ್‌ನಲ್ಲಿ ಬಿಜೆಪಿ ಎರಡು ದಿನಗಳ ಕಾಲ  ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸುತ್ತಿದೆ.

2023ರಲ್ಲಿ ಇಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿಯು ತೆಲಂಗಾಣದಲ್ಲಿ ಅಧಿಕಾರ ಹಿಡಿಯುವ ಮೂಲಕ ದಕ್ಷಿಣದಲ್ಲಿ ತನ್ನ ಅಧಿಕಾರದ ಹೆಬ್ಬಾಗಿಲನ್ನಾಗಿ ಮಾಡಿಕೊಳ್ಳಲು ಕಾರ್ಯತಂತ್ರ ರೂಪಿಸಲು ತೆಲಂಗಾಣದ ರಾಜಧಾನಿ ಹೈದರಾಬಾದ್‌ ಅನ್ನು ತನ್ನ ರಾಷ್ಟ್ರೀಯ ಕಾರ್ಯಕಾರಿಣಿ  ನಡೆಸಲು ಆಯ್ಕೆ ಮಾಡಲಾಗಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ. 

ರಾಜ್ಯದಲ್ಲಿ ಚುನಾವಣಾ ವಿರೋಧಿಯಾದ ಟಿಆರ್‌ಎಸ್‌ ಪಕ್ಷವನ್ನು ಎದುರಿಸಲು ಈ ಕಾರ್ಯಕಾರಿಣಿ ಸಭೆಯು ಸಜ್ಜುಗೊಳಿಸುತ್ತದೆ ಎನ್ನಲಾಗಿದೆ. 

ಮೋದಿ ಮೂರನೇ ಭೇಟಿ

ಭಾನುವಾರ ಎರಡನೇ ದಿನದ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಇದು ಮೋದಿ ಅವರ ಮೂರನೇ ಭೇಟಿಯಾಗಿದೆ. ಕಳೆದ ಎರಡು ಬಾರಿ ಭೇಟಿ ನೀಡಿದ್ದಾಗಲೂ ಟಿಆರ್‌ಎಸ್‌ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್ ಅವರು ಪ್ರಧಾನಿ ಸ್ವಾಗತ ಮಾಡಿರಲಿಲ್ಲ. ಇಲ್ಲಿ ಬಿಜೆಪಿ ಟಿಆರ್‌ಎಸ್‌ ವಿರೋಧಿ ಅಲೆ ಎದುರಿಸುತ್ತಿದೆ. ಅದರ ವಿರುದ್ಧ ಕ್ರಿಯಾ ಯೋಜನೆ ರೂಪಿಸುವುದು ಸಭೆಯ ಉದ್ದೇಶ ಎಂದು ಮೂಲಗಳು ಹೇಳಿವೆ. 

ತೆಲಂಗಾಣದಲ್ಲಿ ಅಧಿಕಾರದ ಖಾತೆ ತೆರೆಯಲು ಅಲ್ಲಿ ಬಿಜೆಪಿಯ ಸ್ಥಾನವನ್ನು ಭದ್ರಪಡಿಸಲು ಅದರ ಉತ್ತಮ ಚಟುವಟಿಕೆಗಳು, ಸಂದೇಶಗಳನ್ನು ಜನರಿಗೆ ತಲುಪಿಸುವ ಕಾರ್ಯ ಕೈಗೊಳ್ಳುವುದು ಸಭೆಯ ಪ್ರಮುಖ ಧ್ಯೇಯ ಎನ್ನಲಾಗಿದೆ. ಬಿಜೆಪಿ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವ ತುಂಬುವುದು ಪ್ರಮುಖ ಯೋಜನೆಯಾಗಿದೆ. ಉತ್ತರದ ನಂತರ ದಕ್ಷಿಣದತ್ತ ಚಿತ್ತ ಹರಿಸಿರುವುದು ಬಿಜೆಪಿಯ ಪ್ರಮುಖ ತಂತ್ರ ಎಂದು ರಾಜಕೀಯ ಚಿಂತಕರ ಅನಿಸಿಕೆ. 

ಬಿಜೆಪಿಯ ಒಗ್ಗಟ್ಟು ಪ್ರದರ್ಶನ

ಹೈದರಾಬಾದ್‌ನ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಆರಂಭವಾಗಿರುವ ಎರಡು ದಿನಗಳ ಕಾರ್ಯಕಾರಿಣಿ ಸಮಾವೇಶದಲ್ಲಿ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ, ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿ ನಾಯಕರು, ಬಿಜೆಪಿ ಆಡಳಿತವಿರುವ 18 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು 300ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

ಸಭೆಯ ಬಳಿಕ ಭಾನುವಾರ ಸಂಜೆ ಸಿಕಂದರಾಬಾದ್‌ನ ಪರೇಡ್‌ ಮೈದಾನದಲ್ಲಿ ವಿಜಯ ಸಂಕಲ್ಪ ಸಭೆ ಹೆಸರಿನ ಬೃಹತ್‌ ಸಾರ್ವಜನಿಕ ರ್‍ಯಾಲಿಯನ್ನು ನಡೆಸಲಿದೆ. ಈ ವೇಳೆ ಪ್ರಧಾನಿ ಮೋದಿ ಅವರ ಭಾಷಣಕ್ಕೆ ಸುಮಾರು 10 ಲಕ್ಷ ಮಂದಿ ಸೇರಿಸಲು ತೆಲಂಗಾಣದ ಟಿಬಿಜೆಪಿ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ. ಆಡಳಿತ ಪಕ್ಷದ ವೈಫಲ್ಯವನ್ನು ಮುಂದಿಡುತ್ತ ಬಿಜೆಪಿ ಹೊಸ ಹೊಳಹುಗಳನ್ನು ಪ್ರದರ್ಶಿಸಲು ಬಿಜೆಪಿಯ ಈ ಸಭೆ ವೇದಿಕೆ ಒದಗಿಸುತ್ತದೆ.  

ಲೋಕಸಭೆಗೂ ಕಾರ್ಯತಂತ್ರ

2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿಯೂ ತೆಲಂಗಾಣದಿಂದ ಹೆಚ್ಚು ಬಿಜೆಪಿ ಸಂಸದರನ್ನು ಲೋಕಸಭೆಗೆ ಕರೆತರಲು ಬಿಜೆಪಿ ಯೋಜಿಸುತ್ತಿದೆ. 

ಹೈದರಾಬಾದ್‌ನಲ್ಲಿ ಈಗಾಗಲೇ ಬಂದಿಳಿದಿರುವ ಜೆ ಪಿ ನಡ್ಡಾ ಪಕ್ಷದ ಕಾರ್ಯಕರ್ತರೊಂದಿಗೆ ಸರಣಿ ಸಭೆ ನಡೆಸುತ್ತ ಬಿಜೆಪಿ ಪ್ರಣಾಳಿಕೆಯನ್ನು ಈಗಲೇ ಜನರಿಗೆ ತಲುಪುವಂತೆ ಯೋಜನೆ ರೂಪಿಸುತ್ತಿದ್ದಾರೆ.

ದಕ್ಷಿಣದಲ್ಲಿ ಅಧಿಪತ್ಯಕ್ಕೆ ತಂತ್ರ

ದಕ್ಷಿಣದಲ್ಲಿ ಪಕ್ಷವನ್ನು ಮತ್ತಷ್ಟು ವಿಕಸನಗೊಳಿಸಬೇಕೆಂಬುದು ಬಿಜೆಪಿಯ ಅಂಬೋಣ. ಅದಕ್ಕಾಗಿ ತೆಲಂಗಾಣವೇ ಸೂಕ್ತ ಸ್ಥಳ ಎಂದು ಬಿಜೆಪಿ ಆರಿಸಿಕೊಂಡಿದೆ. ದಕ್ಷಿಣದಲ್ಲಿ ಇದುವರೆಗೆ ಕರ್ನಾಟಕದಲ್ಲಿ ಮಾತ್ರ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ತನ್ನ ಆಡಳಿತ ವ್ಯಾಪ್ತಿಯನ್ನು ವಿಸ್ತರಿಸಲು ತೆಲಂಗಾಣ ರಹದಾರಿ ಒದಗಿಸುತ್ತದೆ ಎಂಬುದು ರಾಜಕೀಯ ಚಿಂತಕರ ಅಭಿಪ್ರಾಯ. 

ದಕ್ಷಿಣ ರಾಜ್ಯಗಳ ಉಪಚುನಾವಣೆಗಳು ಮತ್ತು ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿಯು ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲು ಅದು ಇನ್ನಿಲ್ಲದ ಪ್ರಯತ್ನ ನಡೆಸಿದೆ. 

ಕಾಂಗ್ರೆಸ್‌ ಮಣಿಸಲೂ ಸಿದ್ಧತೆ

ತೆಲಂಗಾಣದಲ್ಲಿ ಟಟಿಆರ್‌ಎಸ್‌ ಮಾತ್ರವಲ್ಲದೆ ಕಾಂಗ್ರೆಸ್‌ ಅನ್ನೂ ಮೂಲೆಗುಂಪು ಮಾಡಬೇಕೆಂದು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ. 

ತೆಲಂಗಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರಭಾವಿ ನಾಯಕರು ಪಕ್ಷದಲ್ಲಿದ್ದಾರೆ. ಇವರನ್ನು ಜಯಿಸುವುದು ಬಿಜೆಪಿಗೆ ಸವಾಲಿನ ಹಾದಿ ಎನಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ನೆಲೆ ಇಲ್ಲದಂತೆ ಮಾಡುವುದು ಬಿಜೆಪಿ ಪ್ರಮುಖ ಗುರಿ ಎನ್ನಲಾಗಿದೆ. ಈ ನಿಟ್ಟಿನಲ್ಲಿ ತೆಲಂಗಾಣದಲ್ಲಿ ಅಧಿಕಾರ ಹಿಡಿಯುವುದು ಬಿಜೆಪಿಗೆ ಮುಖ್ಯವಾಗಿದೆ.

ಚಂದ್ರಶೇಖರ ರಾವ್ ಹೇಳಿಕೆ

ತೆಲಂಗಾಣದಲ್ಲಿ ಬಿಜೆಪಿ ಹಂತ ಹಂತವಾಗಿ ಮೇಲೇರುತ್ತಿದೆ. ಇದು ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಅವರ ಹೇಳಿಕೆಯಲ್ಲೂ ವ್ಯಕ್ತವಾಗಿದೆ. ಉಪಚುನಾವಣೆಯ ಫಲಿತಾಂಶದ ನಂತರ ಚಂದ್ರಶೇಖರ್‌ ರಾವ್, ರಾಜ್ಯದಲ್ಲಿ ಬಿಜೆಪಿ ಬೆಳೆಯುತ್ತಿರುವುದು ಗೋಚರಿಸುತ್ತಿದೆ ಎಂದು ಹೇಳಿರುವುದನ್ನು ಇಲ್ಲಿ ಗಮನಿಸಬಹುದು.

ನಿಮಗೆ ಏನು ಅನ್ನಿಸ್ತು?
0 ವೋಟ್