ವಿಶೇ‍ಷ ಅಧಿವೇಶನ ರದ್ದು | ಆಪರೇಷನ್‌ ಕಮಲ ಆರೋಪಕ್ಕೆ ಸಾಕ್ಷಿ ನೀಡಿ ಎಂದು ಬಿಜೆಪಿ ಪ್ರತಿಭಟನೆ

  • ಪಂಜಾಬ್ ಬಿಜೆಪಿ ಮುಖ್ಯಸ್ಥರ ಬಂಧನ
  • ಸೆ.27ಕ್ಕೆ ಮತ್ತೆ ಅಧಿವೇಶನ ಕರೆದ ಮಾನ್

ಆಪರೇಷನ್ ಕಮಲ ಆರೋಪ ಮಾಡಿರುವ ಆಮ್ ಆದ್ಮಿ ಪಕ್ಷ ತನ್ನ ಆರೋಪಕ್ಕೆ ಸಾಕ್ಷಿ ನೀಡುವಂತೆ ಆಗ್ರಹಿಸಿ ಭಾರತೀಯ ಜನತಾ ಪಕ್ಷ ಚಂಡೀಗಢದಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದೆ. ಪೊಲೀಸರು ಬಿಜೆಪಿ ನಾಯಕರನ್ನು ಬಂಧಿಸಿದ್ದಾರೆ.

ಆಪ್ ಪ್ರಧಾನ ಕಚೇರಿಯ ಹೊರಗೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ದಾಟಲು ಬಿಜೆಪಿ ಕಾರ್ಯಕರ್ತರು ಪ್ರಯತ್ನಿಸಿದ್ದಾರೆ. ಅವರ ಮೇಲೆ ಜಲ ಫಿರಂಗಿಗಳನ್ನು ಬಳಸಿ ಆ ಯತ್ನವನ್ನು ವಿಫಲಗೊಳಿಸಲು ಪೊಲೀಸರು ಯಶಸ್ವಿಯಾದರು. ಪ್ರತಿಭಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಅಶ್ವನಿ ಶರ್ಮಾ ಮತ್ತು ಸುನೀಲ್ ಜಾಖರ್ ಸೇರಿದಂತೆ ಬಿಜೆಪಿಯ ಅನೇಕ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ತಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿ ಆಪರೇಷನ್‌ ಕಮಲ ನಡೆಸಿದೆ ಎಂದು ಆಪ್‌ ಆರೋಪಿಸಿತ್ತು. ಆ ಆರೋಪ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪ್ರತಿಭಟನೆಗೆ ಕರೆ ನೀಡಿದ್ದರು. ಪರಿಣಾಮ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಪಂಜಾಬ್‌ನ ಬಿಜೆಪಿ ನಿಯೋಗವು ಕಳೆದ ವಾರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ, ಆಪ್‌ ಸುಳ್ಳು ಆರೋಪದ ವಿರುದ್ಧ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಕೋರಿತ್ತು. "ಅರವಿಂದ್ ಕೇಜ್ರಿವಾಲ್ ಆಧಾರರಹಿತ ಮತ್ತು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕಿಡಿಗೇಡಿತನ ಮಾಡುತ್ತಿದ್ದಾರೆ" ಎಂದು ಹೇಳಿತ್ತು. ಇದೀಗ ಸಾಕ್ಷಿ ನೀಡುವಂತೆ ಪ್ರತಿಭಟನೆ ನಡೆಸುತ್ತಿದೆ.

ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ | ಕಮಲ್ ನಾಥ್ ಸ್ಪರ್ಧೆ? ಹಿಗ್ಗುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ!

ಸೆ.27ರಂದು ವಿಶೇ‍ಷ ಅಧಿವೇಶನ

ರಾಜ್ಯ ವಿಧಾನಸಭೆಯ ವಿಶೇ‍ಷ ಅಧಿವೇಶನ ರದ್ದಾಗಿರುವ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸೆ.27ರಂದು ಮತ್ತೆ ಅಧಿವೇಶನ ಕರೆಯಲಾಗುವುದು ಎಂದು ಘೋಷಿಸಿದ್ದಾರೆ.

ಸಚಿವ ಸಂಪುಟ ಸಭೆಯ ಬಳಿಕ ಭಗವಂತ್ ಮಾನ್ ತಮ್ಮ ನಿರ್ಧಾರವನ್ನು ಹೊರ ಹಾಕಿದ್ದಾರೆ. ಸರ್ವಾನುಮತದಿಂದ ಅಧಿವೇಶನ ಕರೆಯುವುದಾಗಿ ಹೇಳಿದ್ದಾರೆ.

ವಿಶೇ‍ಷ ಅಧಿವೇಶನ ಆದೇಶ ಹಿಂತೆಗೆದುಕೊಳ್ಳುವ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಭಗವಂತ್ ಮಾನ್ ತಿಳಿಸಿದ್ದಾರೆ.

ಪಂಜಾಬ್‌ನ ಆಪ್ ಸರ್ಕಾರವನ್ನು ಮುಜುಗರಕ್ಕೀಡು ಮಾಡಿರುವ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ವಿಶ್ವಾಸ ನಿರ್ಣಯಕ್ಕೆ ಕರೆಯಲಾಗಿದ್ದ ಗುರುವಾರದ ಅಧಿವೇಶನದ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ. ಸದನದ ನಿಯಮಗಳು ಕೇವಲ ವಿಶ್ವಾಸ ಮತಯಾಚನೆಗೆ ಅಧಿವೇಶನ ಕರೆಯಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ರಾಜ್ಯಪಾಲ ನಿರ್ಧಾರವನ್ನು ಸ್ವಾಗತಿಸಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್