
- ಎರಡೂ ಬಣಗಳ 10- 20 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು
- ಬಂಡಾಯ ಶಾಸಕರಿಗೆ ಚುನಾವಣೆ ಎದುರಿಸುವಂತೆ ಸವಾಲೊಡ್ಡಿದ ಆದಿತ್ಯ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಸೇರ್ಪಡೆಗೊಂಡಿರುವ ಬಂಡಾಯ ಶಾಸಕರಿಗೆ ರಾಜೀನಾಮೆ ನೀಡಿ ಚುನಾವಣೆ ಎದುರಿಸುವಂತೆ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಸವಾಲು ಹಾಕಿದ್ದಾರೆ.
ಭಾನುವಾರ (ಸೆ. 11) ಮುಂಬೈಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವರ್ಲಿ ಶಾಸಕ ಆದಿತ್ಯ ಠಾಕ್ರೆ, “ನಾವು ನಿಮಗೆ ಎಲ್ಲವನ್ನೂ ನೀಡಿದಾಗ ನೀವು ನಮ್ಮ ಬೆನ್ನಿಗೇಕೆ ಚೂರಿ ಹಾಕಿದ್ದೀರಿ? ಈಗ ನೀವು ಪ್ರಜಾಪ್ರಭುತ್ವದಲ್ಲಿ ನಡೆಯುವ ಚುನಾವಣೆ ಎದುರಿಸಲು ಏಕೆ ರಾಜೀನಾಮೆ ನೀಡಿಲ್ಲ" ಎಂದು ಪ್ರಶ್ನಿಸಿದರು.
ಭಾನುವಾರ ಮುಂಜಾನೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಕಾರ್ಯಕರ್ತರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣದ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಶಿವಸೇನೆಯ ಬಂಡಾಯ ಶಾಸಕ ಸದಾ ಸರ್ವಾಂಕರ್ ಅವರು ಒಂದು ಸುತ್ತಿನ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಪೊಲೀಸರು ಸದಾ ಸರ್ವಾಂಕರ್, ಅವರ ಪುತ್ರ ಮತ್ತು ಇತರ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾಹಿಮ್ ಕ್ಷೇತ್ರವನ್ನು ಪ್ರತಿನಿಧಿಸುವ ಸರ್ವಾಂಕರ್ ಅವರು ಗುಂಡಿನ ದಾಳಿಯನ್ನು ನಿರಾಕರಿಸಿದ್ದಾರೆ. ಇದು ಪ್ರತಿಸ್ಪರ್ಧಿಗಳು ತನ್ನ ವಿರುದ್ಧ ಮಾಡಿರುವ ತಂತ್ರ ಎಂದು ದೂರಿದ್ದಾರೆ. ಪೊಲೀಸರು ವಿಚಾರಣೆಗೆ ಕರೆದರೆ ಸಹಕರಿಸುವುದಾಗಿಯೂ ಹೇಳಿದ್ದಾರೆ.
ಉದ್ಧವ್ ಠಾಕ್ರೆ ಬಣದ ಐವರು ಶಿವಸೇನಾ ಕಾರ್ಯಕರ್ತರನ್ನೂ ಪೊಲೀಸರು ಬಂಧಿಸಿದ್ದು, ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಶನಿವಾರ (ಸೆ. 10) ಮಧ್ಯರಾತ್ರಿಯ ನಂತರ ಕೇಂದ್ರ ಮುಂಬೈನ ಪ್ರಭಾದೇವಿ ಪ್ರದೇಶದಲ್ಲಿ ಇಬ್ಬರು ನಾಯಕರ ಬಣದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಸ್ವಲ್ಪ ಸಮಯದ ನಂತರ ದಾದರ್ ಪೊಲೀಸ್ ಠಾಣೆಯ ಹೊರಗೆ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ. ಅಲ್ಲಿ ಸರ್ವಾಂಕರ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದರು ಎಂದು ಪೊಲೀಸರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೇರಳದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ; ಶಶಿ ತರೂರ್ ಯಾತ್ರೆಯಲ್ಲಿ ಭಾಗಿ
ಶಿವಸೇನೆಯ ಎರಡು ಬಣದ ಕಾರ್ಯಕರ್ತರು ಪರಸ್ಪರರ ನಡುವೆ ದೂರು ದಾಖಲಿಸಿಕೊಂಡಿದ್ದರು. ಇದರ ಆಧಾರದಲ್ಲಿ ಪೊಲೀಸರು ಎರಡೂ ಬಣಗಳ 10-20 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೊಸ ಪ್ರಭಾದೇವಿ ಪ್ರದೇಶದಲ್ಲಿ ಶನಿವಾರ ಬೆಳಗಿನ ಜಾವ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಸೇನೆಯ ಕಾರ್ಯಾಧ್ಯಕ್ಷ ಸಂತೋಷ್ ತಲವನೆ ಅವರ ಮೇಲೆ ಮಹೇಶ್ ಸಾವಂತ್ ಮತ್ತು ಇತರ 30 ಮಂದಿ ಹಲ್ಲೆ ನಡೆಸಿದ್ದರು.
ತಲವಾನೆ ಶಿಂಧೆ ಪಾಳೆಯದ ಭಾಗವಾಗಿದ್ದರೆ, ಸಾವಂತ್ ಠಾಕ್ರೆ ನೇತೃತ್ವದ ಶಿವಸೇನೆಗೆ ಸೇರಿದವರಾಗಿದ್ದಾರೆ.