ಕೊಯಮತ್ತೂರು ಸ್ಫೋಟ | ಆತ್ಮಹತ್ಯಾ ದಾಳಿ ಮಾಡಿಕೊಂಡ ಜಮೇಶಾಗೆ ಉಗ್ರರ ಸಂಪರ್ಕ; ಪೊಲೀಸರ ಆರೋಪ

ಧರ್ಮ, ಸಮುದಾಯಗಳ ಹೆಸರಿನಲ್ಲಿ ವಿಧ್ವಂಸಕ ಕೃತ್ಯ ಎಸಗುವ ಮೂಲಭೂತವಾದಿ ಭಯೋತ್ಪಾದಕರ ಗುಂಪಿಗೆ ಮೃತ ಜಮೇಶಾ ಸೇರಿದ್ದನೆಂಬುದು ಪೊಲೀಸರು ಆರೋಪಿಸಿದ್ದಾರೆ. 
Coimbatore car blast

ಕಳೆದ ವಾರ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರು ಬಾಂಬ್‌ ಸ್ಫೋಟದಲ್ಲಿ ಆತ್ಮಹತ್ಯಾ ದಾಳಿಯಲ್ಲಿ ಸ್ವತಃ ಬಾಂಬ್‌ ಸಿಡಿಸಿ ಮೃತಪಟ್ಟ ಜಮೇಶಾ ಮುಬೀನ್‌ ಮನೆ ಪರಿಶೀಲಿಸಿದಾಗ ಉಗ್ರ ಕೃತ್ಯಗಳ ಪಿತೂರಿಯ ಪುರಾವೆಗಳು ದೊರೆತಿವೆ ಎಂದು ಪೊಲೀಸರು ಹೇಳಿದ್ದಾರೆ.

ಧರ್ಮ, ಸಮುದಾಯಗಳ ಹೆಸರಿನಲ್ಲಿ ವಿಧ್ವಂಸಕ ಕೃತ್ಯ ಎಸಗುವ ಮೂಲಭೂತವಾದಿ ಭಯೋತ್ಪಾದಕರ ಗುಂಪಿಗೆ ಮೃತ ಜಮೇಶಾ ಸೇರಿದ್ದನೆಂಬುದು ಪೊಲೀಸರು ಆರೋಪಿಸಿದ್ದಾರೆ. ಇತರ ಧರ್ಮಗಳ ದೇವರ ಹೆಸರುಗಳು, ಪೌರತ್ವ (ತಿದ್ದುಪಡಿ) ಕಾಯ್ದೆ, ಕರ್ನಾಟಕದಲ್ಲಿ ಹಿಜಾಬ್ ವಿವಾದ ಹಾಗೂ ಮುಸ್ಲಿಮರನ್ನು ‘ಎರಡನೇ ದರ್ಜೆಯ ನಾಗರಿಕರು’ ಎಂದು ಕೈಬರಹದ ಮೂಲಕ ತಮಿಳು ಭಾಷೆಯಲ್ಲಿ ಬರೆದ ಟಿಪ್ಪಣಿ ಸಾಲುಗಳು ಇರುವ ನಾಲ್ಕು ಡೈರಿಗಳು ಜಮೇಶಾ ನಿವಾಸವನ್ನು ಪರಿಶೀಲನೆ ನಡೆಸುವಾಗ ಪೊಲೀಸರಿಗೆ ದೊರೆತಿವೆ. ಇವುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಕೃತ್ಯದ ಹಿಂದಿನ ಪೂರ್ವಾ ಪರ ಸಂಗತಿಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.  

ಕಳೆದ ವಾರ ಕೊಯಮತ್ತೂರಿನ ದೇವಸ್ಥಾನವೊಂದರ ಬಳಿ ಎರಡು ಗ್ಯಾಸ್ ಸಿಲಿಂಡರ್ ತುಂಬಿದ್ದ ಕಾರು ಸ್ಫೋಟಗೊಂಡು 29 ವರ್ಷದ ಇಂಜಿನಿಯರಿಂಗ್ ಪದವೀಧರ ಜಮೇಶಾ ಮುಬೀನ್ ಮೃತಪಟ್ಟಿದ್ದಾರೆ. ಇದೊಂದು ಆತ್ಮಹತ್ಯಾ ದಾಳಿ ಎಂದು ಪೊಲೀಸರು ಹೇಳಿದ್ದಾರೆ. 

ಜಮೇಶಾ ಮುಬೀನ್‌ ನಿವಾಸದಿಂದ ಪೊಲೀಸರು ಹಸಿರು ಚೌಕಟ್ಟಿನ ಮೇಲೆ ಚಿತ್ರಿಸಿದ ಐಎಸ್‌ಐಎಸ್‌ ಚಿಹ್ನೆಯ ಸ್ಲೇಟ್‌ ವಶಪಡಿಸಿಕೊಂಡಿದ್ದು, ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಒದಗಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದಲ್ಲಿ ಪೊಲೀಸರು ಜಮೇಶಾ ಸಹಚರರಾದ ಮುಹಮ್ಮದ್ ಅಜರುದ್ದೀನ್ ಮತ್ತು ಕೆ ಅಫ್ಸರ್ ಖಾನ್ ಸೇರಿದಂತೆ ಆರು ಮಂದಿಯನ್ನು  ಬಂಧಿಸಿದ್ದಾರೆ. ಗುರುವಾರ (ಅ. 27) ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ಕೇಂದ್ರವು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಿದೆ. ಶುಕ್ರವಾರ (ಅ.28) ಎಫ್‌ಐಆರ್ ದಾಖಲಿಸಿದೆ.

ಹಿರಿಯ ತನಿಖಾಧಿಕಾರಿಗಳನ್ನು ಒಳಗೊಂಡ ತಮಿಳುನಾಡು ಪೊಲೀಸರು ಅಧಿಕೃತವಾಗಿ ಎನ್‌ಐಎಗೆ ಪ್ರಕರಣ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿದ್ದಾರೆ. ಅವರಿಗೆ ತನಿಖೆಯ ಕೆಲವು ಪ್ರಮುಖ ಅಂಶಗಳನ್ನು ತಿಳಿಸಲಾಗುವುದು ಎಂದು ಪೊಲೀಸರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ತನಿಖೆಯ ವೇಳೆ ಕೊಯಮತ್ತೂರಿನ ಉಕ್ಕಡಂನಲ್ಲಿರುವ ಜಮೇಶಾ ನಿವಾಸದಲ್ಲಿ ಪತ್ತೆಯಾಗಿರುವ ಡೈರಿಗಳು, ಪುಸ್ತಕಗಳು ಸಾಹಿತ್ಯದ ಭಾಗವಾಗಿದೆ ಎಂದು ಹೇಳಲಾಗಿದೆ. ಪರಿಶೀಲನೆಗೆ ಪೊಲೀಸರು ಇವುಗಳನ್ನು ವಶಪಡಿಸಿಕೊಂಡಿದ್ದಾರೆ. 

“ಜಮೇಶಾ ಮುಬೀನ್ ಅವರ ನಿವಾಸದಲ್ಲಿ ಪತ್ತೆಯಾದ ಡೈರಿಗಳ ಸಾಲುಗಳು ಹೆಚ್ಚಾಗಿ ಇತರ ಧರ್ಮಗಳ ಬಗ್ಗೆ, ವಿಶೇಷವಾಗಿ ಹಿಂದೂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮದ ಬಗ್ಗೆ ಅವರ ಅಭಿಪ್ರಾಯ ತಿಳಿಸಿದೆ. ಜಮೇಶಾ ಅವರು ಆ ಧರ್ಮಗಳ ದೇವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಅವುಗಳನ್ನು ರೇಖಾಚಿತ್ರದ ಮೂಲಕ ಚಿತ್ರಿಸಿದ್ದಾರೆ. ಸಿಎಎ, ಹಿಜಾಬ್ ಸಾಲು, ಆಹಾರದ ಮೇಲಿನ ನಿರ್ಬಂಧಗಳು ಮತ್ತು ಗೋಮಾಂಸಕ್ಕೆ ಸಂಬಂಧಿಸಿದ ಹತ್ಯೆಗಳಂತಹ ಘಟನೆಗಳನ್ನು ಡೈರಿಯಲ್ಲಿ ಭಾರತೀಯ ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಗಳೆಂದು ಉಲ್ಲೇಖಿಸಲಾಗಿದೆ. ಮುಸ್ಲಿಮರು ಭಾರತದಲ್ಲಿ ಎರಡನೇ ದರ್ಜೆಯ ನಾಗರಿಕರಾಗುತ್ತಿದ್ದಾರೆ. ಈ ಸಮಸ್ಯೆಗಳನ್ನು ಹೇಗೆ ನಿವಾರಿಸಬಹುದು ಎಂಬ ಅಂಶಗಳನ್ನು ಡೈರಿಯಲ್ಲಿ ತಮಿಳಿನಲ್ಲಿ ಬರೆದುಕೊಂಡಿದ್ದಾನೆ” ಎಂದು ಪೊಲೀಸರು ಹೇಳಿದ್ದಾರೆ.  

“ಪ್ರಕರಣದಲ್ಲಿ ಬಂಧಿತರಾದ ಆರು ಜನರಲ್ಲಿ ಜಮೇಶಾ ಮುಬೀನ್ ಅವರ ಸಹಚರರಾದ ಅಜರುದ್ದೀನ್ ಮತ್ತು ಅಫ್ಸರ್ ಅವರು ವಿಚಾರಣೆಯ ಸಮಯದಲ್ಲಿ ಮುಸ್ಲಿಮರು ಎದುರಿಸುತ್ತಿರುವ ದಬ್ಬಾಳಿಕೆಯ ಬಗ್ಗೆ ಆಗಾಗ್ಗೆ ಜಮೇಶಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು ಎಂದು ತಿಳಿಸಿದ್ದಾರೆ” ಎಂದು ಕೊಯಮತ್ತೂರಿನ ನಗರ ಪೊಲೀಸ್ ಆಯುಕ್ತ ವಿ ಬಾಲಕೃಷ್ಣನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ಜಮೇಶಾ ನಿವಾಸದಲ್ಲಿ ಕಂಡುಬರುವ ಹೆಚ್ಚಿನ ಪುಸ್ತಕಗಳು ಮತ್ತು ಡೈರಿಗಳಲ್ಲಿನ ಟಿಪ್ಪಣಿಗಳು ಬಾಂಬ್ ತಯಾರಿಕೆ, ಜಿಹಾದ್ ಮತ್ತು ಇತರ ಧರ್ಮಗಳ ಬಗ್ಗೆ ಅವರ ಸ್ಪಷ್ಟವಾದ ಅಸಮಧಾನ ಹೊರಹಾಕುತ್ತದೆ. ಜಮೇಶಾ ಅವರು ಭಾರತೀಯ ಮುಸ್ಲಿಮರು ಹೇಗೆ ದಬ್ಬಾಳಿಕೆಗೆ ಒಳಗಾಗುತ್ತಾರೆ ಎಂಬುದರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು ಎಂದು ಬಂಧಿತ ಆರೋಪಿಗಳು ತಿಳಿಸಿದ್ದಾರೆ” ಎಂದು ಬಾಲಕೃಷ್ಣನ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಿಮಾಚಲ ಪ್ರದೇಶ ಚುನಾವಣೆ | ರಾಜ್ಯದಲ್ಲಿ ಆಪ್‌ ಸರ್ಕಾರ ರಚನೆ ಇಲ್ಲವೇ ಪ್ರತಿಪಕ್ಷ ಸ್ಥಾನ: ಸುರ್ಜೀತ್‌ ಸಿಂಗ್‌ ಠಾಕೂರ್

“ಜಮೇಶಾ ಮುಬೀನ್ ಒಬ್ಬ ಮೂಲಭೂತವಾದಿ ಭಯೋತ್ಪಾದಕನಾಗಿದ್ದ ಎಂದು ತನಿಖೆಯಿಂದ ಬಹಿರಂಗವಾಗಿದೆ. ಆದರೆ ಆತ ಯಾವುದೇ ಅತ್ಯಾಧುನಿಕ ಬಾಂಬ್ ತಯಾರಿಕೆ ಕೌಶಲ್ಯಗಳನ್ನು ಹೊಂದಿರಲಿಲ್ಲ. ಶನಿವಾರ ರಾತ್ರಿ (ಅ. 22) 11.25ರ ಸುಮಾರಿಗೆ ಗ್ಯಾಸ್ ಸಿಲಿಂಡರ್ ಮತ್ತು ಇತರ ವಸ್ತುಗಳನ್ನು ತನ್ನ ಕಾರಿಗೆ ತುಂಬಿಕೊಂಡು ಜಮೇಶಾ ಮುಬೀನ್ ಹತ್ತಿರದ ರಸ್ತೆಯಲ್ಲಿ ನಿಲ್ಲಿಸಿದ್ದ. ಬಳಿಕ ಸ್ಫೋಟಕ್ಕೆ ಸಜ್ಜಾಗಿ ಅಲ್ಲಿಂದ ತೆರಳಿ ಹತ್ತಿರದ ಪೊಲೀಸ್ ಠಾಣೆ ಬಳಿ ದೇವಸ್ಥಾನದ ಹೊರಗೆ ಸ್ವಯಂ ಸ್ಫೋಟಿಸಿಕೊಂಡಿದ್ದಾನೆ ಎಂದು ಬಂಧಿತ ಅಜರುದ್ದೀನ್ ಮತ್ತು ಅಫ್ಸರ್ ವಿಚಾರಣೆಯಲ್ಲಿ ತಿಳಿಸಿದ್ದಾರೆ. ಆದರೆ ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ” ಎಂದು ಬಾಲಕೃಷ್ಣನ್‌ ಹೇಳಿದರು.   

ನಿಮಗೆ ಏನು ಅನ್ನಿಸ್ತು?
0 ವೋಟ್
eedina app