
- ಕೋಲ್ಕತ್ತದ ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
- ಸಾಬಿತ್ರಿ ವಿರುದ್ಧ ದೂರು ದಾಖಲಿಸಿದ ಬಿಜೆಪಿ ನಾಯಕ ಅಗ್ನಿಮಿತ್ರ ಪಾಲ್
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅವಮಾನಿಸಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕಿ ಸಾಬಿತ್ರಿ ಮಿತ್ರಾ ವಿರುದ್ಧ ಬಿಜೆಪಿ ಮಂಗಳವಾರ (ನ.29) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಬಿಜೆಪಿಯ ಹಿರಿಯ ನಾಯಕ ಅಗ್ನಿಮಿತ್ರ ಪಾಲ್ ಮತ್ತು ಬಿಜೆಪಿಯ ಆರು ಮಹಿಳಾ ಶಾಸಕರು ಕೋಲ್ಕತ್ತದ ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಸಾಬಿತ್ರಿ ಮಿತ್ರಾ ವಿರುದ್ಧ ದೂರು ನೀಡಿದ್ದಾರೆ.
ಶಾಸಕಿ ಸಾಬಿತ್ರಿ ಮಿತ್ರಾ ಅವರು ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಯೋಧನ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ದುಶ್ಯಾಸನನಿಗೆ ಹೋಲಿಕೆ ಮಾಡಿದ್ದರು. ಮಿತ್ರಾ ಅವರು ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಧಾನಸಭೆ ಅಧಿವೇಶನದಲ್ಲಿಯೂ ಬಿಜೆಪಿ ನಾಯಕ ಅಗ್ನಿಮಿತ್ರ ಪಾಲ್ ಮತ್ತು ಇತರ ಬಿಜೆಪಿ ಶಾಸಕರು ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಆದರೆ, ಸ್ಪೀಕರ್ ಬಿಮನ್ ಬಂಡೋಪಾಧ್ಯಾಯ, 'ಈ ವಿಷಯ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ' ಎಂದು ಚರ್ಚೆಗೆ ನಿರಾಕರಿಸಿದ್ದರು. ನಂತರ ಬಿಜೆಪಿಯ ಎಲ್ಲ ಶಾಸಕರು ಪ್ರತಿಭಟನೆ ನಡೆಸಿ ಸದನದಿಂದ ಹೊರ ನಡೆದಿದ್ದರು.
ಈ ಸುದ್ದಿ ಓದಿದ್ದೀರಾ? 2024ಕ್ಕೆ ಏರ್ ಇಂಡಿಯಾ ಮತ್ತು ವಿಸ್ತಾರ ವಿಲೀನ; ಟಾಟಾ, ಸಿಂಗಾಪುರ ಏರ್ಲೈನ್ಸ್ ನಿರ್ಧಾರ
“ಈ ದೇಶದ ಯಾವುದೇ ನಾಗರಿಕರು ಪ್ರಧಾನಿ, ಗೃಹ ಸಚಿವ ಅಥವಾ ಯಾರೊಬ್ಬರ ವಿರುದ್ಧ ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು. ಪೊಲೀಸರು ನಮ್ಮ ಭಾವನೆಗಳನ್ನು ಅರಿತುಕೊಂಡು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆಂದು ನಾವು ಭಾವಿಸುತ್ತೇವೆ” ಎಂದು ಅಗ್ನಿಮಿತ್ರ ಪಾಲ್ ಹೇಳಿದ್ದಾರೆ.
ಶಾಸಕಿ ಸಾಬಿತ್ರಿ ಮಿತ್ರಾ ಅವರು ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.