
- ದೇಶದ ಜನತೆಗೆ 75ನೇ ಸ್ವಾತಂತ್ರೋತ್ಸವದ ಶುಭಾಶಯ ಕೋರಿದ ಸೋನಿಯಾ
- ಪ್ರತಿಭಾವಂತರು ದೇಶವನ್ನು ಪ್ರಗತಿ ಹಾದಿಯಲ್ಲಿ ಮುನ್ನಡೆಸಿದ್ದಾರೆ: ಮೆಚ್ಚುಗೆ
"ಕಳೆದ 75 ವರ್ಷಗಳಲ್ಲಿ ನಾವು ಸಾಕಷ್ಟು ಸಾಧಿಸಿದ್ದೇವೆ. ಆದರೆ, ಇಂದಿನ ಆತ್ಮರತಿ (ನಾರ್ಸಿಸಿಸ್ಟಿಕ್) ಮನಸ್ಥಿತಿಯ ಸರ್ಕಾರವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮಹಾನ್ ತ್ಯಾಗ ಮತ್ತು ದೇಶದ ಸಾಧನೆಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ" ಎಂದು ಬಿಜೆಪಿ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿ ಕಾರಿದ್ದಾರೆ.
75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕದ ಬಿಜೆಪಿ ಸರ್ಕಾರ ಸ್ವಾತಂತ್ರ್ಯೋತ್ಸವದ ಜಾಹೀರಾತಿನಿಂದ ನೆಹರೂ ಭಾವಚಿತ್ರ ಕೈಬಿಟ್ಟಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ರಾಜಕೀಯ ಲಾಭಕ್ಕಾಗಿ ಐತಿಹಾಸಿಕ ಸತ್ಯಗಳನ್ನು ತಿರುಚುವ, ತಪ್ಪು ಚಿತ್ರಣವನ್ನು ನೀಡುವ ಧೋರಣೆಯನ್ನು ಕಾಂಗ್ರೆಸ್ ಒಪ್ಪಿಕೊಳ್ಳುವುದಿಲ್ಲ. ಸುಳ್ಳಿನ ಆಧಾರದ ಮೇಲೆ ಗಾಂಧಿ, ನೆಹರು, ಪಟೇಲ್, ಆಜಾದ್ ಅವರನ್ನು ಅವಮಾನಿಸಲು ಅವಕಾಶ ನೀಡುವುದಿಲ್ಲ" ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
स्वतंत्रता दिवस पर कांग्रेस अध्यक्ष श्रीमती सोनिया गांधी का संदेश।#IndiaAt75 pic.twitter.com/PduEihxQGv
— Congress (@INCIndia) August 15, 2022
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ದೇಶದ ಜನತೆಗೆ ಶುಭಕೋರಿರುವ ಸೋನಿಯಾ ಗಾಂಧಿ, “ಭಾರತದ ದೂರದೃಷ್ಟಿಯ ನಾಯಕರು ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣಾ ವ್ಯವಸ್ಥೆಯ ಅಡಿಪಾಯವನ್ನು ಹಾಕಿದರು. ಆ ನಾಯಕರು ದೇಶಕ್ಕೆ ಪ್ರಬಲವಾದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಒದಗಿಸಿದ್ದಾರೆ. ಕಳೆದ 75 ರ್ಷಗಳಲ್ಲಿ ಪ್ರತಿಭಾವಂತ ಭಾರತೀಯರು ವಿಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೇಶವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿದ್ದಾರೆ” ಎಂದು ಹೇಳಿದರು.
“ಭಾರತ ದೇಶವು ತನ್ನ ಬಹುಸಂಸ್ಕೃತಿ, ವೈವಿಧ್ಯಮಯ ಆಚಾರ, ಭಾಷೆಗಳ ಮೂಲಕ ವೈಭವಯುತ ರಾಷ್ಟ್ರವಾಗಿ ತನ್ನ ಹೆಗ್ಗುರುತನ್ನು ಭದ್ರಪಡಿಸಿಕೊಂಡಿದೆ” ಎಂದು ಹೇಳಿದ್ದಾರೆ.