ಎಲ್ಲ ರಾಜ್ಯಗಳಲ್ಲೂ ದಲಿತ ದೌರ್ಜನ್ಯ ಪ್ರಕರಣ ನಡೆಯುತ್ತಿವೆ; ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

  • ದಲಿತ ಬಾಲಕ ಇಂದ್ರ ಮೇಘವಾಲ್ ಘಟನೆ ಸಂಬಂಧ ಪ್ರತಿಕ್ರಿಯೆ
  • ತಪ್ಪಿತಸ್ಥ ಶಿಕ್ಷಕನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ 

“ಜಾಲೋರ್ ಜಿಲ್ಲೆಯಲ್ಲಿ ದಲಿತ ಬಾಲಕನ ಹತ್ಯೆ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಘಟನೆಯಲ್ಲಿ ತಪ್ಪಿತಸ್ಥ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಜರುಗಿಸಿ ಬಂಧಿಸಲಾಗಿದೆ” ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ರಾಜಸ್ಥಾನದ ಜಾಲೋರ್‌ನಲ್ಲಿ ಒಂಬತ್ತು ವರ್ಷದ ದಲಿತ ಬಾಲಕ ಮಡಿಕೆ ಮುಟ್ಟಿ ನೀರು ಕುಡಿದ ಕಾರಣಕ್ಕೆ ಶಿಕ್ಷಕನಿಂದ ಹಲ್ಲೆಗೆ ಒಳಗಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸೋಮವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

“ಪ್ರತಿಯೊಂದು ರಾಜ್ಯದಲ್ಲಿಯೂ ಇಂಥ ಘಟನೆಗಳು ನಡೆಯುತ್ತಿವೆ. ನೀವು ಟಿವಿ ನೋಡುತ್ತಿದ್ದರೆ ಅಥವಾ ಪತ್ರಿಕೆಗಳನ್ನು ಓದುತ್ತಿದ್ದರೆ ಈ ಘಟನೆಗಳು ಎಲ್ಲೆಡೆ ನಡೆಯುತ್ತವೆ ಎಂದು ನಿಮಗೆ ತಿಳಿದಿರುತ್ತದೆ” ಎಂದು ಅವರು ಹೇಳಿದ್ದಾರೆ.

“ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದುಕೊಂಡು ಅದನ್ನೇ ವಿವಾದ ಮಾಡುತ್ತಿದ್ದಾರೆ. ಆದರೆ, ನಮ್ಮ ಸರ್ಕಾರ ಕ್ರಮ ಕೈಗೊಂಡು ಶಿಕ್ಷಕನನ್ನು ಬಂಧಿಸಿದೆ. ಇನ್ನೇನು ಮಾಡಬಹುದು? ಈ ಘಟನೆಯನ್ನು ಇಡೀ ರಾಜ್ಯ ಮತ್ತು ದೇಶ ಗಮನಿಸುತ್ತಿದೆ” ಎಂದು ಅವರು ತಿಳಿಸಿದ್ದಾರೆ.

5 ಲಕ್ಷ ಪರಿಹಾರ ಘೋಷಣೆ  

“ದಲಿತ ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಆದಷ್ಟು ಬೇಗ ಬಾಲಕನ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು” ಎಂದು ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
“ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮಿಸುವ ಹೊತ್ತಿನಲ್ಲಿ ನಡೆದ ದಲಿತ ಬಾಲಕನ ಹತ್ಯೆ, ನಾವು ಯಾವ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ಚಿಂತಿಸುವಂತೆ ಮಾಡಿದೆ” ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, “ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ರಾಜ್ಯದಲ್ಲಿ ಕಳೆದ ಮೂರೂವರೆ ವರ್ಷದಿಂದ ಒಂದರ ಮೇಲೊಂದು ನಡೆಯುತ್ತಲೇ ಇವೆ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಶಕ್ತಿಯುತವಾಗಿಲ್ಲ ಎಂದಾದರೆ ಮಾತ್ರ ಇಂಥ ಘಟನೆಗಳು ನಡೆಯುತ್ತವೆ. ಆರೋಪಿಗೆ ತಕ್ಷಣದಲ್ಲಿ ಶಿಕ್ಷೆಯಾಗಬೇಕು” ಎಂದು ಅವರು ಆಗ್ರಹಿಸಿದ್ದಾರೆ.

“ಖಾಸಗಿ ಶಾಲೆಯ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಲೆಯ ಮಾನ್ಯತೆಯನ್ನು ರದ್ದು ಮಾಡಬೇಕು” ಎಂದು ಬಿಜೆಪಿ ವಕ್ತಾರ ಮತ್ತು ಶಾಸಕ ರಾಮ್ಲಾಲ್ ಶರ್ಮಾ ಆಗ್ರಹಿಸಿದ್ದಾರೆ.

ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದು ಸೂಕ್ತ; ಮಾಯಾವತಿ 

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ, “ರಾಜಸ್ಥಾನದಲ್ಲಿ ಇಂಥ ಜಾತೀಯತೆಯ ಘಟನೆಗಳು ಪ್ರತಿದಿನ ಎನ್ನುವಂತೆ ನಡೆಯುತ್ತಿವೆ. ದಲಿತರ ಘನತೆ ಮತ್ತು ಜೀವವನ್ನು ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸೋತಿದೆ. ಜತೆಗೆ ದಲಿತರ, ಆದಿವಾಸಿಗಳ ರಕ್ಷಣೆಯನ್ನು ಸರ್ಕಾರ ನಿರ್ಲಕ್ಷಿಸಿದೆ. ಆದ್ದರಿಂದ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದು ಸೂಕ್ತ” ಎಂದು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ| ಕುಡಿಯುವ ನೀರಿನ ಕೊಡ ಮುಟ್ಟಿದ್ದಕ್ಕೆ ಶಿಕ್ಷಕನಿಂದ ಹಲ್ಲೆ; ದಲಿತ ವಿದ್ಯಾರ್ಥಿ ಸಾವು

ಘಟನೆ ಹಿನ್ನೆಲೆ
ಜುಲೈ 20 ರಂದು ಜಾಲೋರ್ ಜಿಲ್ಲೆಯ ಸುರಾನಾ ಗ್ರಾಮದ ಖಾಸಗಿ ಶಾಲೆಯ ವಿದ್ಯಾರ್ಥಿ ಇಂದ್ರ ಮೇಘವಾಲ್ ಎಂಬ ದಲಿತ ಬಾಲಕ ಮಡಿಕೆಯನ್ನು ಮುಟ್ಟಿ ನೀರು ಕುಡಿದ ಕಾರಣಕ್ಕೆ ಅದೇ ಶಾಲೆಯ ಶಿಕ್ಷಕ ಚೈಲ್ ಸಿಂಗ್ ಬಾಲಕನನ್ನು ಮಾರಣಾಂತಿಕವಾಗಿ ಥಳಿಸಿದ್ದ, ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. 

ಆರೋಪಿ ಶಿಕ್ಷಕ ಚೈಲ್ ಸಿಂಗ್ (40) ಎಂಬಾತನನ್ನು ಬಂಧಿಸಲಾಗಿದ್ದು, ಕೊಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ. ರಾಜಸ್ಥಾನ ರಾಜ್ಯ ಶಿಕ್ಷಣ ಇಲಾಖೆಯು ಈ ಘಟನೆ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್