ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ

  • ದೆಹಲಿ ಗಲಭೆಯ ಮಾಸ್ಟರ್ ಮೈಂಡ್‌ ಆರೋಪದಲ್ಲಿ ಇಮಾಮ್ ಹಾಗೂ ಖಾಲಿದ್ ಬಂಧನ
  • ಗಲಭೆಯಲ್ಲಿ ಸುಮಾರು 700 ಮಂದಿ ಗಾಯಗೊಂಡಿದ್ದು, 53 ಜನರು ಮೃತಪಟ್ಟಿದ್ದರು

ದೆಹಲಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧನದಲ್ಲಿರುವ ಜೆಎನ್‌ಯು ಹಳೆ ವಿದ್ಯಾರ್ಥಿ ಉಮರ್ ಖಾಲಿದ್ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ನ್ಯಾಯಾಲಯವು ಮೇ 6ಕ್ಕೆ ಮುಂದೂಡಿದೆ.

ದೇಶದ್ರೋಹ ಹಾಗೂ ಗಲಭೆ ಪ್ರಕರಣದಲ್ಲಿ ಬಂಧಿತರಾದ ಶ್ರಜೀಲ್ ಇಮಾಮ್‌ ಪ್ರಕರಣದ ಬಗ್ಗೆ ಪೊಲೀಸರ ನಿಲುವನ್ನು ನ್ಯಾಯಾಲಯ ಆಲಿಸಿದೆ.

2020ರ ದೆಹಲಿ ಗಲಭೆಯ ಮಾಸ್ಟರ್ ಮೈಂಡ್ ಎಂಬ ಆರೋಪದಲ್ಲಿ ಇಮಾಮ್, ಉಮರ್ ಮತ್ತಿತರರನ್ನು ಕಾನೂನುಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿತ್ತು. ಗಲಭೆಯಲ್ಲಿ ಸುಮಾರು 700 ಮಂದಿ ಗಾಯಗೊಂಡಿದ್ದು, 53 ಜನರು ಮೃತಪಟ್ಟಿದ್ದರು.

ಪೌರತ್ವ ಕಾಯಿದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ನಡೆದ ಪ್ರತಿಭಟನೆಯಲ್ಲಿ ದೆಹಲಿಯಲ್ಲಿ ಹಿಂಸಾಚಾರ ನಡೆದಿತ್ತು. ವಿಚಾರಣಾ ನ್ಯಾಯಾಲಯವು ಮಾರ್ಚ್ 24 ಹಾಗೂ ಏಪ್ರಿಲ್ 11ರಂದು ಕ್ರಮವಾಗಿ ಉಮರ್ ಹಾಗೂ ಇಮಾಮ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು

AV Eye Hospital ad

“ಜಾಮೀನು ಅರ್ಜಿ ಕೇವಲ ಸೆಕ್ಷನ್ 124ಎ ಗೆ ಸೀಮಿತವಾಗಿರದೆ, ಯುಎಪಿಎ ನಿಬಂಧನೆಗಳನ್ನು ಒಳಗೊಂಡಿದೆ” ಎಂದು ಉಮರ್ ಪರ ವಕೀಲ ತ್ರಿದೀಪ್ ಪೈಸ್ ಹೇಳಿದರು.

ದೆಹಲಿಯ ಗಲಭೆಯ ಪ್ರಕರಣದ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿದ ದೆಹಲಿ ನ್ಯಾಯಾಲಯ, ಇಬ್ಬರು ಒಂದೇ ಆರೋಪದ ಕೆಳಗಡೆ ಬರುವುದರಿಂದ ವಿಚಾರಣೆಯನ್ನು ಒಂದೇ ದಿನ ನಡೆಸುವುದು ಉತ್ತಮ ಎಂದು ಹೇಳಿದೆ.

ದೇಶದ್ರೋಹದ ವಿಚಾರಣೆ ನಂತರ ಇಮಾಮ್ ಪರ ವಕೀಲ ತನ್ವೀರ್ ಅಹಮ್ಮದ್ ಮೀರ್, ಈ ವಿಚಾರಣೆ ವೇಳೆ ಜಾಮೀನು ಅರ್ಜಿಗಾಗಿ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದರು.

ಕಳೆದ ವಾರ ಜಾಮೀನು ಅರ್ಜಿ ವಿಚಾರಣೆಯಲ್ಲಿ ಪೊಲೀಸರಿಗೂ ವಾದ ಮಂಡಿಸುವ ಅವಕಾಶವನ್ನು ನ್ಯಾಯಾಲಯ ನೀಡಿತ್ತು. ಉಮರ್ ವಿರುದ್ಧ ಸಾಕ್ಷ್ಯವಾಗಿರುವ ಭಾಷಣವು ಅತ್ಯಂತ ಅಸಹ್ಯಕರವಾಗಿದ್ದು, ಆಕ್ಷೇಪಾರ್ಹ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನು ಓದಿದ್ದೀರಾ? ವಿವಾದಾತ್ಮಕ ಹೇಳಿಕೆ ನೀಡಿದ ಜಾರ್ಖಂಡ್ ಸಚಿವ ಹಸನ್ ರಾಜೀನಾಮೆಗೆ ಬಿಜೆಪಿ ಒತ್ತಾಯ

ಭಾಷಣದಲ್ಲಿ ಉಮರ್ ಖಾಲಿದ್ ಭಾರತದ ಪ್ರಧಾನಿಯನ್ನು ‘ಜುಮ್ಲಾ’ ಎಂದು ಕರೆದಿರುವುದನ್ನೇ ಉಲ್ಲೇಖಿಸಿ, "ಟೀಕಿಸಲು ಒಂದು ಮಿತಿ ಇದೆ ಎನ್ನುವುದನ್ನು ಮರೆಯಬಾರದು" ಎಂದು ದೆಹಲಿ ಪೋಲೀಸರ ಪರ ವಿಶೇಷ ಸರ್ಕಾರಿ ವಕೀಲರಾದ ಅಮಿತ್ ಪ್ರಸಾದ್ ವಾದಿಸಿದ್ದರು.

ಡಿಸೆಂಬರ್ 2019ರಂದು ‘ಜಾಮಿಯಾ ಮಿಲಿಯಾ ಇಸ್ಲಾಮಿಯಾ’ ವಿಶ್ವವಿದ್ಯಾನಿಲಯದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಇಮಾಮ್ ಮೇಲಿದೆ.

ಯಾವುದೇ ಸ್ವೀಕಾರಾರ್ಹ ಸಾಕ್ಷಿಗಳಿಲ್ಲದೆ ಗಲಭೆಯ ‘ಸಂಚು’ ಮಾಡಿದ್ದೇನೆ ಎಂದು ತಪ್ಪಾಗಿ ಆರೋಪಿಸಲಾಗಿದೆ. ಅಂತಿಮ ವರ್ಷದ ಪಿಎಚ್‌ಡಿ ಓದುತ್ತಿರುವ ತನ್ನ ಮೇಲೆ ದೆಹಲಿ ಗಲಭೆಗಿಂತ ಮೊದಲು ಇತರ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿರಲಿಲ್ಲ. ಗಲಭೆಗೆ ಸಂಬಂಧಿಸಿದ ಸಂಪೂರ್ಣ ತನಿಖೆಯು ದೋಷಪೂರ್ಣ, ಗಲಭೆ ಮತ್ತು ತಮ್ಮ ಭಾಷಣಕ್ಕೆ ಸಂಬಂಧವಿಲ್ಲ. ಅದನ್ನು ಗುರುತಿಸುವಲ್ಲಿ ವಿಚಾರಣಾ ನ್ಯಾಯಾಲಯ ಎಡವಿದೆ ಎಂದು ಇಮಾನ್ ವಾದಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app