ದೆಹಲಿ | ಅಬಕಾರಿ ನೀತಿ ಅನುಷ್ಠಾನದಲ್ಲಿ ಲೋಪ; 11 ಅಧಿಕಾರಿಗಳ ಅಮಾನತು

  • ಅಬಕಾರಿ ನೀತಿ ಸಮಯದಲ್ಲಿ ಅನಿಲ್ ಬೈಜಾಲ್ ಗವರ್ನರ್ ಆಗಿದ್ದರು
  • ತನಿಖೆಗೆ ಶಿಫಾರಸು ಮಾಡಿರುವ ದೆಹಲಿ ಲೆಫ್ಟಿನೆಂಟ್ ಗವರ್ನರ್ 

ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿ ಗಂಭೀರ ಲೋಪ ಎಸಗಿರುವ ಆರೋಪದಡಿ, 11 ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ದೆಹಲಿಯ ಅಂದಿನ ಅಬಕಾರಿ ಆಯುಕ್ತ ಅರವ ಗೋಪಿಕೃಷ್ಣ ಮತ್ತು ಉಪ ಅಬಕಾರಿ ಆಯುಕ್ತ ಆನಂದ್ ಕುಮಾರ್ ತಿವಾರಿ ಸೇರಿದಂತೆ 11 ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮೂರು ತಾತ್ಕಾಲಿಕ ಡ್ಯಾನಿಕ್ಸ್ ಅಧಿಕಾರಿಗಳು ಮತ್ತು ದೆಹಲಿ ಸರ್ಕಾರದ ಅಬಕಾರಿ ಇಲಾಖೆಯ ಆರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಮೂಲಗಳು ತಿಳಿಸಿವೆ.

ಆಯ್ದ ಮಾರಾಟಗಾರರಿಗೆ ಟೆಂಡರ್ ಅಂತಿಮಗೊಳಿಸುವ ಮತ್ತು ಟೆಂಡರ್ ನಂತರದ ಪ್ರಯೋಜನಗಳನ್ನು ವಿಸ್ತರಿಸುವಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಮೂಲಗಳು ತಿಳಿಸಿವೆ. 

ವಿಜಿಲೆನ್ಸ್ ನಿರ್ದೇಶನಾಲಯ (ಡಿಒವಿ) ಸಲ್ಲಿಸಿದ ತನಿಖಾ ವರದಿಯ ಆಧಾರದ ಮೇಲೆ ಸಕ್ಸೇನಾ ಅವರು ಅಧಿಕಾರಿಗಳ ಅಮಾನತು ಕ್ರಮ ಕೈಗೊಂಡಿದ್ದಾರೆ.

2021-22ರ ಅಬಕಾರಿ ನೀತಿಯ ಅನುಷ್ಠಾನದಲ್ಲಿ ನಿಯಮಗಳ ಉಲ್ಲಂಘನೆ ಮತ್ತು ಕಾರ್ಯವಿಧಾನದ ಲೋಪಗಳ ಕುರಿತು ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಶಿಫಾರಸು ಮಾಡಿದೆ.

ಈ ಸುದ್ದಿ ಓದಿದ್ದೀರಾ ? ಪಾತ್ರಾ ಚಾಲ್‌ ಹಗರಣ| ಜಾರಿ ನಿರ್ದೇಶನಾಲಯದಿಂದ ಸಂಜಯ್‌ ರಾವತ್‌ ಪತ್ನಿ ವರ್ಷಾ ವಿಚಾರಣೆ

ಮಾಜಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಅನಧಿಕೃತ ಪ್ರದೇಶಗಳಲ್ಲಿ ಮದ್ಯದ ಅಂಗಡಿಗಳನ್ನು ತೆರೆಯುವ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಸೋಡಿಯಾ, "ಲೆಫ್ಟಿನೆಂಟ್‌ ಗವರ್ನರ್ ಅವರು ನಿಲುವು ಬದಲಿಸಿದ ಕಾರಣ ಸರ್ಕಾರ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದೆ. ಹಾಗಾಗಿ ವಿವರಗಳನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕಳುಹಿಸಿರುವುದಾಗಿ" ತಿಳಿಸಿದ್ದಾರೆ.

"ಹೊಸ ಅಬಕಾರಿ ನೀತಿಯ ಅಡಿಯಲ್ಲಿ, ಅನಧಿಕೃತ ಪ್ರದೇಶಗಳು ಸೇರಿ ದೆಹಲಿಯಾದ್ಯಂತ 849 ಅಂಗಡಿಗಳನ್ನು ತೆರೆಯಬೇಕಾಗಿತ್ತು. ಲೆಫ್ಟಿನೆಂಟ್‌ ಗವರ್ನರ್ ಈ ಪ್ರಸ್ತಾಪವನ್ನು ವಿರೋಧಿಸದೆ ಅನುಮೋದಿಸಿದರು” ಎಂದು ಸಿಸೋಡಿಯಾ ಹೇಳಿದ್ದಾರೆ.

ಆದಾಗ್ಯೂ, ನೀತಿಯ ಅನುಷ್ಠಾನದ ಎರಡು ದಿನಗಳ ಮೊದಲು, ಲೆಫ್ಟಿನೆಂಟ್‌ ಗವರ್ನರ್ ತಮ್ಮ ನಿಲುವು ಬದಲಾಯಿಸಿದ್ದಾರೆ. ಅನಧಿಕೃತ ಪ್ರದೇಶಗಳಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಅಗತ್ಯವಿರುದಾಗಿ ಷರತ್ತು ಪರಿಚಯಿಸಿದ್ದರು” ಎಂದು ಆರೋಪಿಸಿದ್ದಾರೆ.

ಮಾಜಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ನಿಲುವು ಬದಲಿಸಿದ ಕಾರಣ ಸರ್ಕಾರ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದೆ ಎಂದು ಆರೋಪಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಸರ್ಕಾರ ಹೊಸ ಅಬಕಾರಿ ನೀತಿ ಸಿದ್ಧಪಡಿಸಿದಾಗ ಅನಿಲ್ ಬೈಜಾಲ್ ಅವರು ದೆಹಲಿ ಲೆಫ್ಟಿನೆಂಟ್‌ ಗವರ್ನರ್ ಆಗಿದ್ದರು. ಸದ್ಯಕ್ಕೆ ಸರ್ಕಾರ ಅಬಕಾರಿ ನೀತಿಯನ್ನು ಹಿಂಪಡೆದಿದ್ದು, ಸೆಪ್ಟೆಂಬರ್ 1ರಿಂದ ಹಳೆಯ ಅಬಕಾರಿ ನೀತಿ ಅಳವಡಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್