ಭಾರತದಲ್ಲಿ ಪ್ರಜಾಪ್ರಭುತ್ವ ಅಸುನೀಗಿದೆ, ಸರ್ವಾಧಿಕಾರ ಚಾಲ್ತಿಯಲ್ಲಿದೆ: ರಾಹುಲ್ ಗಾಂಧಿ

  • ದೇಶದಲ್ಲಿ ಕೇವಲ ನಾಲ್ಕು ಜನರ ಸರ್ವಾಧಿಕಾರ ಆಡಳಿತವಿದೆ
  • ಸರ್ವಾಧಿಕಾರ ವಿರೋಧಿಸುವವರನ್ನು ಜೈಲಿಗೆ ಹಾಕಲಾಗುತ್ತಿದೆ

"ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿ ಇಲ್ಲ; ಅಸುನೀಗಿದೆ. ಎಲ್ಲಾ ಸಂಸ್ಥೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಯಂತ್ರಣದಲ್ಲಿದ್ದು, ಸರ್ವಾಧಿಕಾರ ಚಾಲ್ತಿಯಲ್ಲಿದೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

"ಪ್ರಜಾಪ್ರಭುತ್ವ ಈಗ ಭಾರತದಲ್ಲಿ ನೆನಪು ಮಾತ್ರ. ಇನ್ನೇನೂ ಉಳಿದಿಲ್ಲ. ಇದರ ಪರಿಣಾಮಗಳನ್ನು ನಾವು ಎದುರಿಸಬೇಕಾಗುತ್ತದೆ. ಭವಿಷ್ಯದಲ್ಲಿ ಇದರ ವಿನಾಶಕ ಪರಿಣಾಮಗಳನ್ನು ನಾವು ಎದುರಿಸಬೇಕಾಗಿ ಬರಬಹುದು. ಏಕೆಂದರೆ ರಾಷ್ಟ್ರದ ಜನತೆ ಬಹಳ ಸಮಯ ಮೌನವಾಗಿ ಕುಳಿತುಕೊಳ್ಳಲಾರರು" ಎಂದು ಅವರು ಎಚ್ಚರಿಸಿದ್ದಾರೆ.

ನಿರುದ್ಯೋಗ ಮತ್ತು ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರತಿಭಟನೆಗೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

"ನಾವು ಜನಪರ ವಿಷಯಗಳನ್ನು ಮುಂದಿಟ್ಟು ಸರ್ಕಾರವನ್ನು ಪ್ರಶ್ನಿಸುತ್ತಿದ್ದೇವೆ. ಬೆಲೆಯೇರಿಕೆ, ನಿರುದ್ಯೋಗ, ಸಮಾಜದಲ್ಲಿ ಆಗುತ್ತಿರುವ ಹಿಂಸೆಯಂತಹ ಜನಪರ ವಿಚಾರಗಳನ್ನು ಎತ್ತಬಾರದು ಎಂದು ಸರ್ಕಾರ ತಾಕೀತು ಮಾಡುತ್ತಿದೆ. ಸರ್ಕಾರದ ಒಟ್ಟು ಉದ್ದೇಶವು ನಾಲ್ಕೈದು ವ್ಯಕ್ತಿಗಳ ಹಿತಾಸಕ್ತಿಯನ್ನು ಮುಂದಿಟ್ಟು ಆಡಳಿತ ನಡೆಸುವುದು. ಎರಡು ಮೂರು ದೊಡ್ಡ ಉದ್ಯಮಿಗಳ ಹಿತಾಸಕ್ತಿ ರಕ್ಷಿಸಲು ಸರ್ಕಾರ ಕೆಲಸ ಮಾಡುತ್ತಿದೆ" ಎಂದು ಅವರು ಆರೋಪಿಸಿದರು. 

“70 ವರ್ಷಗಳಲ್ಲಿ ಸದೃಢವಾಗಿ ಕಟ್ಟಿದ ದೇಶವನ್ನು ಎಂಟು ವರ್ಷಗಳಲ್ಲಿ ನಾಶ ಮಾಡಲಾಗಿದೆ. ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ. ಬದಲಿಗೆ ಕೇವಲ ನಾಲ್ಕು ಜನರ ಸರ್ವಾಧಿಕಾರ ಆಡಳಿತವಿದೆ. ಜನಪರ ವಿಚಾರಗಳನ್ನು ಸಂಸತ್ತಿನಲ್ಲಿ ಪ್ರಶ್ನಿಸಲು ನಾವು ಬಯಸಿದ್ದೇವೆ. ಆದರೆ ನಮಗೆ ಮಾತನಾಡುವ ಅವಕಾಶ ನೀಡುತ್ತಿಲ್ಲ. ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಕೊಡುತ್ತಿಲ್ಲ. ನಮ್ಮನ್ನು ಬಂಧಿಸಲಾಗುತ್ತಿದೆ. ಇಂದು ಇಂದಿನ ಭಾರತದ ಸ್ಥಿತಿ” ಎಂದು ಕಿಡಿಕಾರಿದರು.

"ನಾವು ಪ್ರಜಾಪ್ರಭುತ್ವದ ಸಾವಿಗೆ ಸಾಕ್ಷಿಯಾಗಿದ್ದೇವೆ. ಸುಮಾರು ಒಂದು ಶತಮಾನದ ಹಿಂದೆ ಇಟ್ಟಿಗೆ, ಇಟ್ಟಿಗೆ ಜೋಡಿಸಿದಂತೆ ಭಾರತವನ್ನು ನಿರ್ಮಿಸಲಾಗಿದೆ. ಅದು ನಮ್ಮ ಕಣ್ಣುಗಳ ಮುಂದೆ ನಾಶವಾಗುತ್ತಿದೆ. ಸರ್ವಾಧಿಕಾರವನ್ನು ವಿರೋಧಿಸುವವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ, ಥಳಿಸಲಾಗುತ್ತಿದೆ" ಎಂದು ಕಿಡಿಕಾರಿದರು.

“ಸಂಸತ್ತಿನ ಒಳಗೆ ಮತ್ತು ಹೊರಗೆ ಹಣದುಬ್ಬರದ ಬಗ್ಗೆ ಮಾತನಾಡಲು ವಿರೋಧ ಪಕ್ಷದ ನಾಯಕರಿಗೆ ಅವಕಾಶ ನೀಡುತ್ತಿಲ್ಲ. ಪ್ರತಿಪಕ್ಷಗಳ ನಾಯಕರನ್ನು ಬಂಧಿಸಲಾಗುತ್ತಿದೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಮುಂಗಾರು ಅಧಿವೇಶನ | ಸರ್ವಾಧಿಕಾರ ಸಹಿಸುವುದಿಲ್ಲ ಎಂದ ಕಾಂಗ್ರೆಸ್‌

ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ತಳಹದಿ ದೃಢವಾಗಿದೆ ಎಂದು ಹೇಳಿರುವ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಭಾರತದ ಈಗಿನ ಆರ್ಥಿಕ ದುಸ್ಥಿತಿ ಅರ್ಥವೇ ಆಗಿಲ್ಲ ಎಂದು ರಾಹುಲ್ ಟೀಕಿಸಿದ್ದಾರೆ. "ನಿರ್ಮಲಾ ಸೀತಾರಾಮನ್ ಅವರು ವಾದಿಸುತ್ತಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳ ತಳಹದಿ ಬೇರೆಯೇ ಇದೆ. ಅರ್ಥವ್ಯವಸ್ಥೆಯಲ್ಲಿ ಏನಾಗುತ್ತಿದೆ ಎನ್ನುವ ಅರಿವು ಅವರಿಗಿದೆ ಎಂದು ನನಗೆ ಅನಿಸುತ್ತಿಲ್ಲ. ಈ ಬಗ್ಗೆ ಅವರ ಅರಿವು ಶೂನ್ಯ. ಅವರು ಸರ್ಕಾರದ ಮುಖವಾಣಿಯಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಅರ್ಥ ವ್ಯವಸ್ಥೆ ಬಗ್ಗೆ ಒಂಚೂರೂ ಮಾಹಿತಿ ಅವರಿಗಿಲ್ಲ" ಎಂದು ರಾಹುಲ್ ಟೀಕಿಸಿದ್ದಾರೆ.

"ಹಣಕಾಸು ಸಚಿವರಿಗೆ ಅರ್ಥವ್ಯವಸ್ಥೆಯ ಬಗ್ಗೆ ಅರಿವಿದ್ದಿದ್ದರೆ ಈಗಿನ ಸ್ಥಿತಿ ಬರುತ್ತಿರಲಿಲ್ಲ. ಭಾರತದ ಸಂಪೂರ್ಣ ಉದ್ಯೋಗ ಸೃಷ್ಟಿ ವ್ಯವಸ್ಥೆ ನಾಶವಾಗಿದೆ. ಸಣ್ಣ ಮತ್ತು ಮದ್ಯಮ ಉದ್ಯಮಗಳು ನೆಲಸಮವಾಗಿವೆ. ಜಿಎಸ್‌ಟಿ ದೊಡ್ಡ ದುರಂತವಾಗಿ ನಮ್ಮ ಮುಂದಿದೆ. ಯಾವುದೇ ರಾಜ್ಯವನ್ನು ಪ್ರಶ್ನಿಸಿ ನೋಡಿ, ಅಲ್ಲಿನ ವಿವರ ನಿಮಗೆ ತಿಳಿಯಬಹುದು. ಬೆಲೆಯೇರಿಕೆ ಎಲ್ಲ ಕ್ಷೇತ್ರವನ್ನೂ ಹಣ್ಣುಗಾಯಿ ಮಾಡಿದರೂ ಹಣಕಾಸು ಸಚಿವರು ಯಾವುದೇ ಸಮಸ್ಯೆಯಿಲ್ಲ ಎಂದು ಸಮಾಧಾನಿಸುತ್ತಿದ್ದಾರೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಭಾರತದಲ್ಲಿ ನಿರುದ್ಯೋಗವು ನಿರಂತರವಾಗಿ ಹೆಚ್ಚುತ್ತಿದೆ. ಆದರೆ ವಾಸ್ತವವನ್ನು ಒಪ್ಪಿಕೊಳ್ಳದ ಬಿಜೆಪಿ ಸರ್ಕಾರ, ಕಟುಸತ್ಯಗಳನ್ನು ಸುಳ್ಳು ಎಂದು ವಾದಿಸುತ್ತಿದೆ. ಅಂತೆಯೇ, ಹಣದುಬ್ಬರವು ನಿರಂತರವಾಗಿ ಏರುತ್ತಿದೆ. ಆದರೆ ಹಣಕಾಸು ಸಚಿವರು ಆ ಸತ್ಯವನ್ನು ಒಪ್ಪಿಕೊಳ್ಳುತ್ತಿಲ್ಲ” ಎಂದು ಹೇಳಿದರು.

"ಬೆಲೆಯೇರಿಕೆಯ ವಾಸ್ತವ ಬೇರೆಯೇ ಇದೆ. ಆದರೆ ಜನರ ನಡುವೆ ಸಂಪೂರ್ಣ ಭಿನ್ನ ಸುಳ್ಳು ಗ್ರಹಿಕೆಯನ್ನು ಹರಡಲಾಗುತ್ತಿದೆ. ಉದಾಹರಣೆಗೆ, ಭಾರತದಲ್ಲಿ ಸರ್ಕಾರ ಮುಂದಿಡುತ್ತಿರುವ ಚಿತ್ರಣಕ್ಕಿಂತ, ನೆಲಮಟ್ಟದಲ್ಲಿ ಸ್ಟಾರ್ಟಪ್‌ನ ಸತ್ಯಾಂಶ ಬೇರೆಯೇ ಇದೆ. ಹಾಗೆಯೇ ಕೋವಿಡ್ ಬಗ್ಗೆಯೂ ಸುಳ್ಳು ಚಿತ್ರಣವನ್ನು ಸರ್ಕಾರ ಜನರ ಮುಂದಿಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯು 2021ರ ಅಂತ್ಯದವರೆಗೆ ಕೋವಿಡ್ 19ನಿಂದ ಭಾರತದಲ್ಲಿ 47 ಲಕ್ಷ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿದೆ. ಆದರೆ ಕೇಂದ್ರ ಸರ್ಕಾರ ವಿಶ್ವಸಂಸ್ಥೆಯ ವರದಿಯನ್ನು ತಳ್ಳಿಹಾಕಿದೆ" ಎಂದು ಸರ್ಕಾರವನ್ನು ಟೀಕಿಸಿದರು.

"ಗುಜರಾತ್‌ ಮತ್ತು ಗಂಗಾ ನದಿಯ ದಡದಲ್ಲಿ ರಾಶಿ ಶವಗಳು ಸಿಕ್ಕರೂ ಸರ್ಕಾರ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ” ಎಂದು ಆರೋಪಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್