ಬಿಜೆಪಿ ಕಾರ್ಯಕಾರಿಣಿ ಸಭೆ | ತೆಲಂಗಾಣದಲ್ಲಿ ಪಕ್ಷ ವಿಸ್ತರಣೆಗೆ ಹರ್‌ ಘರ್ ತಿರಂಗಾ ಅಭಿಯಾನದ ಕಾರ್ಯಕ್ರಮ

Narendra Modi
  • ಪ್ರಮುಖ ವಿರೋಧ ಪಕ್ಷಗಳೂ ದ್ರೌಪದಿ ಮುರ್ಮು ಅವರಿಗೆ ಬೆಂಬಲ
  • ಸಂಜೆ ಮೋದಿ ನೇತೃತ್ವದಲ್ಲಿ ಹೈದರಾಬಾದ್‌ನಲ್ಲಿ ಬೃಹತ್‌ ಮೆರವಣಿಗೆ

ತೆಲಂಗಾಣ ರಾಜ್ಯದಲ್ಲಿರುವ ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌) ದುರ್ಬಲಗೊಳಿಸಲು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯತಂತ್ರ ರೂಪಿಸಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇನ್ನೊಂದೆಡೆ ಟಿಆರ್‌ಎಸ್‌ನ ಮುಖಂಡ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್‌ ಅವರು ಬಿಜೆಪಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ಶನಿವಾರ ಪ್ರಧಾನಿ ಮೋದಿ ಅವರ ಸ್ವಾಗತದಿಂದ ದೂರ ಉಳಿದಿದ್ದಾರೆ. ಬದಲಿಗೆ ನಗರಕ್ಕೆ ಬಂದ ರಾಷ್ಟ್ರಪತಿ ಚುನಾವಣೆಯ ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರಿಗೆ ಭವ್ಯ ಸ್ವಾಗತ ಕೋರಿದ್ದಾರೆ. 

ಬಿಜೆಪಿ ತೆಲಂಗಾಣದಲ್ಲಿ ಹರ್‌ ಘರ್ ತಿರಂಗಾ ಅಭಿಯಾನದ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತಷ್ಟು ಸಶಸ್ತಗೊಳಿಸಲು ಈ ಕ್ರಮ ಎನ್ನಲಾಗಿದೆ. ಕಾರ್ಯಕಾರಿಣಿ ಮುಗಿದ ನಂತರ ಹೈದರಾಬಾದ್‌ನ ಪರೇಡ್‌ ಮೈದಾನದಲ್ಲಿ ಸಂಜೆ 7 ಗಂಟೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ದೊಡ್ಡ ಮೆರವಣಿಗೆ ಆಯೋಜಿಸಲಾಗಿದೆ.

ಅಗ್ನಿಪಥ ಯೋಜನೆ ಹೊಗಳಿದ ಬಿಜೆಪಿ

ಶನಿವಾರ ಆರಂಭವಾದ ಮೊದಲ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ನೂತನವಾಗಿ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ಪ್ರಶಂಸಿಸಿದ್ದಾರೆ. ಯೋಜನೆಯಿಂದ ಲಕ್ಷಾಂತರ ಜನರ ಯುವಕರಿಗೆ ಉದ್ಯೋಗ ದೊರೆಯುತ್ತದೆ. ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಇದು ವೇದಿಕೆಯಾಗಲಿದೆ ಎಂದು ಅಗ್ನಿಪಥ ಯೋಜನೆ ವಿರುದ್ಧದ ಟೀಕೆಗಳನ್ನು ತಿರಸ್ಕರಿಸಿದರು. 

ಕರ್ನಾಟಕದ ನಂತರ ತೆಲಂಗಾಣದಲ್ಲಿ ಪಕ್ಷ ಭದ್ರಗೊಳಿಸಲು ಬಿಜೆಪಿ ಈ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಸಲಿದೆ ಎನ್ನಲಾಗಿದೆ. ಅಮಿತ್‌ ಶಾ, ಜೆ ಪಿ ನಡ್ಡಾ ಸೇರಿದಂತೆ ಬಿಜೆಪಿಯ ಪ್ರಮುಖ ಕೇಂದ್ರ ನಾಯಕರು, ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಮುಖಂಡರು, ತೆಲಂಗಾಣದ ಬಿಜೆಪಿಯ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 

ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮರ್ಮು ಪ್ರಚಾರ

ದ್ರೌಪದಿ ಮುರ್ಮು ಅವರ ಪರ ಪ್ರಚಾರವೂ ಕಾರ್ಯಕಾರಿಣಿ ಸಭೆಯ ಪ್ರಚಾರದ ಒಂದು ಭಾಗ ಎನ್ನಲಾಗಿದೆ. ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮರ್ಮು ಅವರ ಹೆಸರನ್ನು ಆಯ್ಕೆ ಮಾಡಿರುವುದು ಒಂದು ಐತಿಹಾಸಿಕ ನಿರ್ಧಾರ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. 

18 ವರ್ಷಗಳ ನಂತರ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಎರಡನೇ ದಿನವಾದ ಭಾನುವಾರ (ಜುಲೈ 3) ಪ್ರಧಾನಿ ಮೋದಿ ಭಾಗವಹಿಸಿದ್ದು, ಗೃಹ ಸಚಿವ ಅಮಿತ್‌ ಶಾ ರಾಜಕೀಯ ನಿರ್ಣಯ ಮಂಡಿಸುವುದಕ್ಕೂ ಮುನ್ನ ಈ ಹೇಳಿಕೆ ನೀಡಿದ್ದಾರೆ. 

ಪ್ರಧಾನಿ ಮೋದಿ ಅವರು ಮುರ್ಮು ಅವರು ಜೀವನದಲ್ಲಿ ಎದುರಿಸಿದ ಸಂಕಷ್ಟಗಳ ಕುರಿತು ಮಾತನಾಡಿದ್ದಾರೆ. ಜೀವನದಲ್ಲಿ ಸಂಘರ್ಷಗಳನ್ನು ಎದುರಿಸುತ್ತ ತಾವು ಅಂದುಕೊಂಡಿದ್ದನ್ನು ಹೇಗೆ ಸಾಧಿಸಿದರು ಎಂದು ವಿವರಿಸಿದ್ದಾರೆ. 

ಮುಂದಿನ ದಿನಗಳಲ್ಲಿ ಮುರ್ಮು ಅವರು ಚುನಾಯಿತರಾದರೆ ಭಾರತವು ಪರಿಶಿಷ್ಟ ಜಾತಿಯ ಮೊದಲ ಮಹಿಳಾ ರಾಷ್ಟ್ರಪತಿ ಪಡೆದಂತಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಮುರ್ಮು ಅವರು ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಜೂನ್‌ 24ರಂದು ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಮುಖಂಡರು ಮತ್ತು ಎನ್‌ಡಿಎ ಮೈತ್ರಿ ಕೂಟದ ನಾಯಕರು ಮುರ್ಮು ಅವರನ್ನು ಬೆಂಬಲಿಸಿದ್ದಾರೆ. ನಾಮಪತ್ರ ಸಲ್ಲಿಸಿದಾಗಿನಿಂದ ಬಿಜೆಪಿಯು ವಿರೋಧ ಪಕ್ಷಗಳೇ ಮುರ್ಮು ಅವರನ್ನು ಬೆಂಬಲಿಸಿವೆ. ಬಿಎಸ್‌ಪಿ ಮತ್ತು ಬಿಜು ಜನತಾ ದಳ (ಬಿಜೆಡಿ) ಕೂಡ ಮುರ್ಮು ಅವರಿಗೆ ತಮ್ಮ ಬೆಂಬಲ ನೀಡಿದ್ದಾರೆ ಎಂದು ಅವರು ಕಾರ್ಯಕಾರಿಣಿ ಸಭೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಹುಲ್ ಗಾಂಧಿ ಹೇಳಿಕೆ ತಿರುಚಿದ ಪ್ರರಕಣ: ಝೀ ಟಿವಿ ನಿರೂಪಕ, ಬಿಜೆಪಿ ಸಂಸದರ ವಿರುದ್ಧ ಎಫ್‌ಐಆರ್


ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು 21 ರಂದು ಅದರ ಫಲಿತಾಂಶ ಹೊರಬೀಳಲಿದೆ. ಪ್ರಸ್ತುತ ರಾಷ್ಟ್ರಪತಿಯಾಗಿರುವ ರಾಮನಾಥ್‌ ಕೋವಿಂದ್‌ ಅವರ ಅಧಿಕಾರವಧಿ ಜುಲೈ 24ರಂದು ಕೊನೆಗೊಳ್ಳಲಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್