ಕೊಟ್ಟ ಮಾತಿಗೆ ತಪ್ಪಿದ ಕೇಂದ್ರ ಸರ್ಕಾರ; ಸಂಯುಕ್ತ ಕಿಸಾನ್ ಮೋರ್ಚಾದಿಂದ “ವಿಶ್ವಾಸ ದ್ರೋಹ ದಿನ” ಆಚರಣೆ

ಸಂಯುಕ್ತ ಕಿಸಾನ್ ಮೋರ್ಚಾ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಜುಲೈ 18 ರಿಂದ ಜುಲೈ 31ರವರೆಗಿನ ಅವಧಿಯನ್ನು (ಹುತಾತ್ಮ ಉಧಮ್‌ ಸಿಂಗ್‌ ಹೆಸರಿನಲ್ಲಿ ನಡೆಯುವ ಹುತಾತ್ಮರ ದಿನವನ್ನು) “ವಿಶ್ವಾಸ ದ್ರೋಹ ದಿನ”ವನ್ನಾಗಿ ದೇಶದಾದ್ಯಂತ ಆಚರಿಸಲು ನಿರ್ಧರಿಸಿದೆ. ರೈತರು ದೇಶದಾದ್ಯಂತ 500 ಜಿಲ್ಲೆಗಳಲ್ಲಿ ಮೋದಿ ಸರ್ಕಾರದ ವಿಶ್ವಾಸ ದ್ರೋಹದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
samyukta morcha

ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಚಳವಳಿಯಷ್ಟೇ ಮಹತ್ವಪೂರ್ಣ ಮತ್ತು ಐತಿಹಾಸಿಕ ಎನ್ನಬಹುದಾದ ಇನ್ನೊಂದು ಚಳವಳಿ ಎಂದರೆ 2020-2021 ರೈತ ಚಳವಳಿ. ಬಂಡವಾಳಶಾಹಿಗಳ ಪರ ಮತ್ತು ರೈತ ವಿರೋಧಿ ಕಾನೂನುಗಳ ಮೂಲಕ ದೇಶದ ರೈತರನ್ನು ಮತ್ತೆ ದಾಸ್ಯಕ್ಕೆ ತಳ್ಳಲು ಯತ್ನಿಸಿದ್ದ ಕುರುಡು ಸರ್ಕಾರವೊಂದರ ಪ್ರತಿಷ್ಠೆಯನ್ನು ಬಗ್ಗಿಸಿ, ದೇಶದ ಕೋಟ್ಯಂತರ ರೈತರ ಜೀವನೋಪಾಯ ಮತ್ತು ಮುಖ್ಯವಾಗಿ ಆತ್ಮಗೌರವವನ್ನು ಕಾಪಾಡಿದ ಚಳವಳಿ ಅದು.

ಒಂದು ವರ್ಷಾವಧಿಯ ನಿರಂತರ ರೈತ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ 9, ಡಿಸೆಂಬರ್ 21ರಂದು ಮೂರು ರೈತ ವಿರೋಧಿ ಶಾಸನಗಳನ್ನು ಹಿಂದೆ ಪಡೆಯುವುದರೊಂದಿಗೆ ರೈತರ ಉಳಿದ ಷರತ್ತುಗಳನ್ನೂ ಒಪ್ಪಿಕೊಂಡಿತ್ತು.  ತನ್ಮೂಲಕ ಮೂಲಕ ಸರ್ಕಾರವು ಸಾಮಾಜಿಕ ಮತ್ತು ನೈತಿಕ ಹೋರಾಟಕ್ಕೆ, ರೈತರ ಬದ್ಧತೆಗೆ ಮಣಿದಿತ್ತು.  

ವಿಶ್ವಾಸ ದ್ರೋಹ ಮಾಡಿದ ಕೇಂದ್ರ ಸರ್ಕಾರ

ಇದಾಗಿ ವರ್ಷ ಕಳೆದಿದೆ. ಸರ್ಕಾರ ಅದರ ಬಗ್ಗೆ ಉಸಿರೆತ್ತುತ್ತಿಲ್ಲ! ಕೊಟ್ಟ ಭರವಸೆಗಳಿಗೆ ವರ್ಷ ತುಂಬಿದ ನಿರಾಶೆಯಲ್ಲಿ ಚಳವಳಿಯ ನಾಯಕತ್ವ ವಹಿಸಿದ್ದ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ನಿರಂತರವಾಗಿ ಈ ಭರವಸೆಗಳನ್ನು ಈಡೇರಿಸುವಂತೆ ಬೇಡಿಕೆ ಸಲ್ಲಿಸುತ್ತಲೇ ಬಂದಿದೆ. ಆದರೆ ಚುನಾವಣೆಗಳ ಭರಾಟೆ ಮತ್ತು ಚುನಾಯಿತ ರಾಜ್ಯ ಸರ್ಕಾಗಳನ್ನು ಬುಡಮೇಲು ಮಾಡುವ ಕೃತ್ಯಗಳಲ್ಲಿ ತಲ್ಲೀನವಾಗಿರುವ ಕೇಂದ್ರ ಸರ್ಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಟ್ಟಿದೆ. 

ಈ ನಡುವೆ ಎಸ್‌ಕೆಎಂನಲ್ಲಿ ಸಹ ಕೆಲವು ಅಹಿತಕರ ಬದಲಾವಣೆಗಳು ಮತ್ತು ಆಂತರಿಕ ಭಿನ್ನತೆಗಳು ತಲೆದೋರಿದ್ದವು. ಅದರಲ್ಲೂ ಪಂಜಾಬ್‌ ಚುನಾವಣೆಯ ಸಮಯದಲ್ಲಿ ಅನೇಕ ಪ್ರಾದೇಶಿಕ ರೈತ ಸಂಘಟನೆಗಳನ್ನು ಎಸ್‌ಕೆಎಂ ತನ್ನ ಗುಂಪಿನಿಂದ ಹೊರಹಾಕಿತ್ತು. ಕೆಲವು ನಾಯಕರು ಸ್ವಂತ ಹಿತಾಸಕ್ತಿಯಿಂದ ಮೋರ್ಚಾ ತೊರೆದಿದ್ದರು. 

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಹೊರಹೋಗಿದ್ದ ಅನೇಕರು ಮತ್ತೆ ಮೋರ್ಚಾ ಕೂಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಒಟ್ಟಾಗಿ ಮುನ್ನಡೆಯಲು ಒಗ್ಗೂಡಿದ್ದಾರೆ. ಇದರ ಫಲವಾಗಿ ಗಾಜಿಯಾಬಾದ್‌ನಲ್ಲಿ ಜುಲೈ 3ರಂದು ಎಸ್‌ಕೆಎಂಗೆ ಸೇರಿದ ಎಲ್ಲ ರೈತ ಸಂಘಟನೆಗಳ ಪ್ರತಿನಿಧಿಗಳ ರಾಷ್ಟ್ರೀಯ ಸಭೆಯನ್ನು ಸಂಘಟಿಸಿದ್ದರು. ಇದು ರಾಷ್ಟ್ರೀಯ ರೈತ ಹಿತಾಸಕ್ತಿಗಳ ರಕ್ಷಣೆ, ಪ್ರಜಾತಾಂತ್ರಿಕ ಮೌಲ್ಯಗಳ ಸಂರಕ್ಷಣೆ, ಸರ್ವಾಧಿಕಾರಿ ಧೋರಣೆಯ ವಿರುದ್ಧದ ನಿಲುವು ಮತ್ತು ಅಘೋಷಿತ ತುರ್ತುಸ್ಥಿತಿಯನ್ನು ಎದುರಿಸುವ ದಿಸೆಯಲ್ಲಿ ಮತ್ತೊಂದು ಐತಿಹಾಸಿಕ ಸಮಾವೇಶವಾಗಿದೆ.

ಇಲ್ಲಿನ ಪ್ರಮುಖ ನಿರ್ಧಾರಗಳನ್ನು ಗಮನಿಸಿದರೆ ಎಸ್‌ಕೆಎಂ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಂವಿಧಾನದ ಬಗ್ಗೆ ಹೊಂದಿರುವ ಬದ್ಧತೆಗಳು ಅರಿವಾಗುತ್ತವೆ.

ಈ ಸಭೆ ಇದೇ ಜುಲೈ 31ರಂದು ರೈತರ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶಾದ್ಯಂತ 500 ಜಿಲ್ಲೆಗಳಲ್ಲಿ “ಚಕ್ಕಾ ಜಾಮ್”‌ ಘೋಷಿಸಿದೆ. ಇದು ಅಂದು ಬೆಳಿಗ್ಗೆ 11ರಿಂದ 3ರವರೆಗೆ ಚಾಲ್ತಿಯಲ್ಲಿರುತ್ತದೆ ಮತ್ತು ಎಸ್‌ಕೆಎಂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದೆ.

ಭಾರತದ ಸೈನಿಕ ಮೌಲ್ಯಗಳನ್ನು ಬುಡಮೇಲು ಮಾಡಲು ಹೊರಟಿರುವ “ಅಗ್ನಿಪಥ”ವನ್ನು ಪ್ರತಿರೋಧಿಸಿ ಎಸ್‌ಕೆಎಂ “ಜೈ ಜವಾನ್‌ ಜೈ ಕಿಸಾನ್”‌ ಪರಿಕಲ್ಪನೆಯಲ್ಲಿ ಆಗಸ್ಟ್‌ 7ರಿಂದ 14ರವರೆಗೆ ರಾಷ್ಟ್ರದಾದ್ಯಂತ ಸಮಾವೇಶಗಳನ್ನು ಆಯೋಜಿಸಿದೆ.

ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಖೀಂಪುರ್‌ ಖೇರಿಯಲ್ಲಿ ನಡೆದ ಎಂಟು ಮಂದಿ ರೈತರ ನರಮೇಧದ ನೆನಪನ್ನು ಹಸಿರಾಗಿಡಲು ಆಗಸ್ಟ್ 18-19 ಮತ್ತು 20ರಂದು 75 ಗಂಟೆಗಳ ಕಾಲ ಸಾಮೂಹಿಕ ಧರಣಿ ಸತ್ಯಾಗ್ರಹವನ್ನು ಯೋಜಿಸಲಾಗಿದೆ.

ರೈತರು ಮತ್ತು ಮಾವವ ಹಕ್ಕು ಕಾರ್ಯಕರ್ತರ ವಿರುದ್ಧ ಕೇಂದ್ರ ಸರ್ಕಾರದ ದಮನಕಾರಿ ನಿಲುವನ್ನು ಈ ಸಭೆ ವಿರೋಧಿಸಿದೆ ಮತ್ತು ತೀಸ್ತಾ ಸೆಟ್ಲವಾಡ್ ಹಾಗೂ ಮಹಮದ್‌ ಜುಬೇರ್‌ ಬಂಧನವನ್ನು ಒಕ್ಕೊರಲಿನಿಂದ ಖಂಡಿಸಿದೆ. 

ಎಸ್‌ಕೆಎಂ ತನ್ನ ಐತಿಹಾಸಿಕ ಚಳವಳಿಯನ್ನು ಕೊನೆಗೊಳಿಸಿದ 9ನೇ  ಡಿಸೆಂಬರ್ 21ರಂದು ಕೇಂದ್ರ ಸರ್ಕಾರ ರೈತರ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿತ್ತು.

Image
MODI

ಕೇಂದ್ರ ಸರ್ಕಾರ ಈಡೇರಿಸದ ಬೇಡಿಕೆಗಳು!

1) ಕನಿಷ್ಠ ಬೆಂಬಲ ಬೆಲೆ: ಇದರ ನಿರ್ಧಾರ ಮಾಡಲು ಆಗತ್ಯವಾದ ಸಮಿತಿಯನ್ನು ಈವರೆಗೂ ರಚಿಸಿಲ್ಲ.

2) ಹೋರಾಟದ ಅವಧಿಯಲ್ಲಿ ರೈತರ ವಿರುದ್ಧ ಹೂಡಲಾಗಿದ್ದ ಸುಳ್ಳು ಮೊಕದ್ಧಮೆಗಳನ್ನ ಹಿಂತಗೆದುಕೊಳ್ಳುವುದು; ಈವರೆಗೂ ಮಾಡಿಲ್ಲ.

3) ವಿದ್ಯುತ್‌ ಬಿಲ್ಲನ್ನು ಹಿಂತೆಗೆದುಕೊಳ್ಳುವುದು; ಈವರೆಗೂ ಆಗಿಲ್ಲ. ಅಲ್ಲದೆ, ಮತ್ತೆ ಅದೇ ಬಿಲ್ ಅನ್ನು ಸಂಸತ್ತಿನಲ್ಲಿ ಮಂಡಿಸಲು ಪ್ರಯತ್ನಿಸುತ್ತಿದೆ.

4) ಕನಿಷ್ಠ ಬೆಂಬಲ ಬೆಲೆಗೆ ನೀಡಬೇಕಾಗಿದ್ದ ಶಾಸನಾತ್ಮಕ ಗ್ಯಾರಂಟಿಯನ್ನು ಕೊಡದೆ, ಸಂಪೂರ್ಣ ನಿರ್ಲಕ್ಷಿಸಲಾಗಿದೆ.

ಕೇಂದ್ರ ಸರ್ಕಾರದ ಈ ಎಲ್ಲ ವಿಫಲತೆ ಮತ್ತು ನಿರ್ಲಕ್ಷ್ಯಗಳ ಕಾರಣ ಭಾರತದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಈ ರೈತ ವಿರೋಧಿ ಮತ್ತು ದೇಶ ವಿರೋಧಿ ನಿಲುವುಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಮೋರ್ಚಾ ಸಜ್ಜಾಗಿದೆ. ಇದೊಂದು “ವಿಶ್ವಾಸ ದ್ರೋಹ”ದ ಪ್ರಕರಣವಾಗಿದೆ. ಹಾಗಾಗಿ ರೈತ ಮೋರ್ಚಾ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಜುಲೈ 18 ರಿಂದ ಜುಲೈ 31ವರೆಗಿನ ಅವಧಿಯನ್ನು (ಹುತಾತ್ಮ ಉಧಮ್‌ ಸಿಂಗ್‌ ಹೆಸರಿನಲ್ಲಿ ನಡೆಯುವ ಹುತಾತ್ಮರ ದಿನವನ್ನು) “ವಿಶ್ವಾಸ ದ್ರೋಹ ದಿನ”ವನ್ನಾಗಿ ದೇಶದಾದ್ಯಂತ ಆಚರಿಸಲು ನಿರ್ಧರಿಸಿದೆ.

ಎಸ್‌ಕೆಎಂ: ಎಲ್ಲ ರೀತಿಯ ಅನ್ಯಾಯಗಳ ವಿರುದ್ಧದ ಧ್ವನಿ 

ಎಸ್‌ಕೆಎಂ ದೇಶ ವಿರೋಧಿ, ಯುವಜನತೆ ವಿರೋಧಿ ಹಾಗೂ ರೈತ ವಿರೋಧಿಯಾದ "ಅಗ್ನಿಪಥ” ಯೋಜನೆಯ ವಿರುದ್ಧ ನಿರುದ್ಯೋಗಿ ಯುವಜನತೆ, ನಿವೃತ್ತ ಸೈನಿಕರು ಮತ್ತು ರೈತರನ್ನು ಸಂಘಟಿಸಿ, ಆಗಸ್ಟ್ 7 -14ರವರೆಗಿನ ಸಮಾವೇಶಗಳಿಗೆ ಅವರೆಲ್ಲರನ್ನೂ ಆಹ್ವಾನಿಸಲು ಯೋಜಿಸಿದೆ.

ಇವೆಲ್ಲದರೊಂದಿಗೆ ಕಿಸಾನ್‌ ಮೋರ್ಚಾ ಪ್ರಜಾತಂತ್ರ ಮತ್ತು ಮಾನವೀಯ ಮೌಲ್ಯಗಳಿಗೆ ಬದ್ಧವಾಗಿದ್ದು, ಇವುಗಳ ವಿರುದ್ಧ ನಡೆಯುವ ಎಲ್ಲ ದಮನಕಾರಿ ನೀತಿಗಳನ್ನು ಖಂಡಿಸುವುದಾಗಿ ತೀರ್ಮಾನಿಸಿದೆ. ಅಹಮದಾಬಾದ್‌ನ ರೈತನಾಯಕ ಆಶೀಶ್‌ ಮಿತ್ತಲ್‌ ವಿರುದ್ಧ ಹೂಡಿರುವ ಸುಳ್ಳು ಪ್ರಕರಣ, ಫರಕ್ಕಾದಲ್ಲಿ ಅದಾನಿಯ ಹೈವೋಲ್ಟೇಜ್‌ ಕೇಬಲ್‌ಗಳ ಬಗ್ಗೆ ಪ್ರತಿಭಟಿಸುತ್ತಿದ್ದ ರೈತರ ವಿರುದ್ಧ  ಹೂಡಿರುವ ಸುಳ್ಳು ಮೊಕದ್ಧಮೆಗಳು, ಛತ್ತೀಸ್‌ಘಡ ಮತ್ತು ಬಂಗಾಳದಲ್ಲಿ ಪ್ರತಿಭಟನಾ ನಿರತ ರೈತರ ವಿರುದ್ಧ ಮಾಡಲಾಗಿರುವ ದಮನ ಪ್ರಯತ್ನ, ತೀಸ್ತಾ ಸೆಟ್ಲವಾಡ್, ಆರ್‌ ಬಿ ರವಿಕುಮಾರ್ ಹಾಗೂ ಮಹಮದ್‌ ಜುಬೇರ್‌ ಇವರುಗಳ ಬಂಧನ ಇವೆಲ್ಲವನ್ನೂ ಕಿಸಾನ್‌ ಮೋರ್ಚಾ ಒಕ್ಕೊರಲಿನಿಂದ ವಿರೋಧಿಸಿದೆ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳ ಪರವಾಗಿ ತನ್ನ ಬದ್ಧತೆಯನ್ನು ಘೋಷಿಸಿದೆ.

ಈ ಸಮಾವೇಶದಲ್ಲಿ 15 ರಾಜ್ಯಗಳ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಪಂಜಾಬ್‌ ಚುನಾವಣೆಯ ಸಮಯದಲ್ಲಿ ಹೊರಹಾಕಲಾಗಿದ್ದ 16 ಸಂಘಟನೆಗಳು ಮತ್ತೆ ಮೋರ್ಚಾ ಕೂಡಿಕೊಂಡವು. ಇದೇ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘವನ್ನು ಮೋರ್ಚಾದಿಂದ ಉಚ್ಛಾಟಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ದೇಶದಲ್ಲಿ ರೈತರು, ಜನಸಾಮಾನ್ಯರು, ಸಂವಿಧಾನ, ಪ್ರಜಾತಾಂತ್ರಿಕ ಮೌಲ್ಯಗಳನ್ನು ಗೌರವಿಸುವ ಮತ್ತು ಇವುಗಳ ವಿರುದ್ಧ ನಡೆಯುವ ಯಾವುದೇ ದಮನವನ್ನು ವಿರೋಧಿಸುವ ಯಾವುದೇ ರೈತ ಸಂಘಟನೆಗಳಿಗೆ ಮೋರ್ಚಾದ ಬಾಗಿಲು ಸದಾ ತೆರೆದಿರುತ್ತದೆ ಎಂಬ ಅಂಶವನ್ನು ದೇಶದ ಜನತೆಯ ಗಮನಕ್ಕೆ ತರಲಾಯಿತು.

ನಿಮಗೆ ಏನು ಅನ್ನಿಸ್ತು?
0 ವೋಟ್