ಗೆಹ್ಲೋಟ್‌- ಅದಾನಿ ಭೇಟಿ | ನಾನು ಹೂಡಿಕೆ ವಿರೋಧಿಯಲ್ಲ, ಒಬ್ಬರಿಗೆ ಆದ್ಯತೆ ಸಲ್ಲದು; ಬಿಜೆಪಿಗೆ ರಾಹುಲ್‌ ತಿರುಗೇಟು

Rahul Gandhi
  • ವೈರಲ್‌ ಆಗಿದ್ದ ಜೈಪುರದ ಹೂಡಿಕೆ ಸಮಾವೇಶದಲ್ಲಿ ಅದಾನಿ- ಗೆಹ್ಲೋಟ್ ಜೊತೆಗಿರುವ ಫೋಟೋ
  • ರಾಜಸ್ಥಾನದಲ್ಲಿ ₹65,000 ಕೋಟಿ ಬೃಹತ್ ಹೂಡಿಕೆ ಮಾಡುವುದಾಗಿ ಉದ್ಯಮಿ ಅದಾನಿ ಘೋಷಣೆ

ರಾಜಸ್ಥಾನದಲ್ಲಿ ಹೂಡಿಕೆ ಸಮಾವೇಶವೊಂದರಲ್ಲಿ ಉದ್ಯಮಿ ಗೌತಮ್‌ ಅದಾನಿ ರಾಜ್ಯಕ್ಕೆ ಸಾವಿರಾರು ಕೋಟಿ ಬಂಡವಾಳ ಭರವಸೆ ನೀಡಿರುವುದರ ಬಗ್ಗೆ ಬಿಜೆಪಿ ಮಾಡಿರುವ ಟೀಕೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶನಿವಾರ (ಅ. 8) ತಿರುಗೇಟು ನೀಡಿದ್ದಾರೆ. 

"ರಾಜ್ಯಕ್ಕೆ ಹಿತಕಾರಿಯಾದ ಬಂಡವಾಳ ಪ್ರಸ್ತಾವನೆಯನ್ನು ಯಾರು ನಿರಾಕರಿಸುತ್ತಾರೆ? ನಿಯಮಬದ್ಧವಾದ ಇಂತಹ ಪ್ರಸ್ತಾವನೆಯನ್ನು ನಾನು ಬೆಂಬಲಿಸುತ್ತೇನೆ" ಎಂದು ರಾಹುಲ್‌ ಹೇಳಿದ್ದಾರೆ. 

Eedina App

ಜೈಪುರದ ಹೂಡಿಕೆ ಸಮಾವೇಶದಲ್ಲಿ ಅದಾನಿ ಮತ್ತು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಬಿಜೆಪಿ ಆಪ್ತ ಅದಾನಿ ಜೊತೆ ಕಾಂಗ್ರೆಸ್‌ ನಾಯಕ ಗೆಹ್ಲೋಟ್‌ ಅವರ ಭೇಟಿ ಬಿಜೆಪಿ ನಾಯಕರ ಟೀಕೆಗೆ ಗುರಿಯಾಗಿತ್ತು. 

ಭಾರತ ಜೋಡೋ ಯಾತ್ರೆಯು ಶನಿವಾರ ತುಮಕೂರು ತಲುಪಿದ್ದು, ಯಾತ್ರೆಯ ನಡುವೆ ಸುದ್ದಿಗೋಷ್ಠಿಯಲ್ಲಿ ರಾಹುಲ್ ಈ ಭೇಟಿಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

AV Eye Hospital ad

“ಅದಾನಿ ಅವರು ರಾಜಸ್ಥಾನಕ್ಕೆ ₹60,000 ಕೋಟಿಗಳ ಹೂಡಿಕೆ ಪ್ರಸ್ತಾವನೆ ನೀಡಿದ್ದರು. ಅಂತಹ ಪ್ರಸ್ತಾಪವನ್ನು ಯಾವುದೇ ಮುಖ್ಯಮಂತ್ರಿ ನಿರಾಕರಿಸುವುದಿಲ್ಲ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಅವರು ಅದಾನಿ ಅವರಿಗೆ ಯಾವುದೇ ಆದ್ಯತೆ ನೀಡಿಲ್ಲ. ಅಥವಾ ಅವರ ವ್ಯವಹಾರಕ್ಕೆ ನೆರವಾಗಲು ತಮ್ಮ ರಾಜಕೀಯ ಶಕ್ತಿಯನ್ನು ಬಳಸಿಕೊಂಡಿಲ್ಲ” ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ರಾಹುಲ್ ಮಾತನಾಡಿದ ಈ ವಿಡಿಯೋ ಈಗ ವೈರಲ್‌ ಆಗಿದೆ.

“ಬಿಜೆಪಿ ಸರ್ಕಾರ 2- 3 ಉದ್ಯಮಿಗಳಿಗಷ್ಟೇ ವ್ಯವಹಾರ ನಡೆಸಲು ಅವಕಾಶದ ಆದ್ಯತೆ ನೀಡುತ್ತದೆ. ನಾನು ಅದನ್ನು ವಿರೋಧಿಸುತ್ತೇನೆ. ರಾಜಸ್ಥಾನ ಸರ್ಕಾರವು ತಪ್ಪಾದ ರೀತಿಯಲ್ಲಿ ಅದಾನಿ ಅವರಿಗೆ ವ್ಯವಹಾರ ನೀಡಿದ್ದರೆ ಅದನ್ನೂ ನಾನು ವಿರೋಧಿಸುತ್ತಿದ್ದೆ. ಆದರೆ ನಿಯಮ ಪ್ರಕಾರ ರಾಜ್ಯದ ಒಳಿತಿಗೆ ಹೂಡಿಕೆ ಪ್ರಸ್ತಾಪವಾಗಿದ್ದರೆ, ಅದರಲ್ಲಿ ಯಾವುದೇ ತೊಂದರೆಯಿಲ್ಲ” ಎಂದು ರಾಹುಲ್ ಹೇಳಿದ್ದಾರೆ.  

“ಭಾರತದ ಪ್ರತಿಯೊಂದು ವ್ಯವಹಾರದಲ್ಲೂ ಇಬ್ಬರಿಂದ ಮೂವರು ಏಕಸ್ವಾಮ್ಯ ಸಾಧಿಸಲು ಬಿಜೆಪಿ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಅಂಶವನ್ನು ನಾನು ವಿರೋಧಿಸುತ್ತೇನೆ. ಬಂಡವಾಳದ ಕೇಂದ್ರೀಕರಣವನ್ನೂ ನಾನು ಆಕ್ಷೇಪಿಸುತ್ತೇನೆ. ಆದರೆ, ವ್ಯಾಪಾರ ಅಥವಾ ಸಹಕಾರದ ವಿರೋಧಿಯಲ್ಲ" ಎಂದು ಅವರು ಹೇಳಿದ್ದಾರೆ. 

ಹೂಡಿಕೆ ಸಮಾವೇಶದಲ್ಲಿ ಉದ್ಯಮಿ ಗೌತಮ್ ಅದಾನಿ ಅವರನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ‘ಭಾಯ್’ ಎಂದು ಸಂಬೋಧಿಸಿದ್ದರು. ಇದರ ಬಗ್ಗೆ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿತ್ತು.  

ಹೂಡಿಕೆ ಸಮಾವೇಶದಲ್ಲಿ ಮುಂದಿನ ಐದರಿಂದ ಏಳು ವರ್ಷಗಳಲ್ಲಿ ರಾಜಸ್ಥಾನದಲ್ಲಿ ₹65,000 ಕೋಟಿ ಬೃಹತ್ ಹೂಡಿಕೆ ಮಾಡುವುದಾಗಿ ಅದಾನಿ ಘೋಷಿಸಿದ್ದರು. ಇದರಲ್ಲಿ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಣ, 10,000 ಎಂಡಬ್ಲ್ಯು ಸೌರ ವಿದ್ಯುತ್ ಸೌಲಭ್ಯ, ಸಿಮೆಂಟ್ ಘಟಕದ ವಿಸ್ತರಣೆ ಮುಂತಾದ ಯೋಜನೆಗಳು ಸೇರಿವೆ.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಬನಿಯಾ ಜಾತಿ ಕುರಿತು ಸಚಿವ ದಿನೇಶ್ ಖಟಿಕ್ ಹೇಳಿಕೆ; ಕ್ಷಮೆಗೆ ವೈಶ್ಯ ಸಮುದಾಯ ಪಟ್ಟು

ಸಂಸತ್ತಿನಲ್ಲಿ ಅದಾನಿ ವಿರುದ್ಧ ರಾಹುಲ್ ಭಾಷಣ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದ ರಾಜಸ್ಥಾನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ, ಒಂದೆಡೆ ಕೇಂದ್ರ ಸರ್ಕಾರವು ಅದಾನಿ ಹಾಗೂ ಅಂಬಾನಿ ಪರವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಮತ್ತೊಂದೆಡೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಉದ್ಯಮಿಯ ಪರವಾಗಿದ್ದಾರೆ ಎಂದು ಹೇಳಿದ್ದರು. 

"ನಿನ್ನೆಯ ತನಕ ವಿರೋಧಿಗಳಾಗಿದ್ದವರೂ ಹಣದ ಹರಿವಿನ ಆಸೆಗಾಗಿ ಇಂದು ಜೊತೆಯಲ್ಲಿದ್ದಾರೆ. ಅವರು ತಮ್ಮ ನಿಲುವನ್ನು ಬದಲಿಸಿದ್ದಾರೆ” ಎಂದು ಬಿಜೆಪಿ ನಾಯಕ ಟೀಕಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app