ಉದಯಪುರ ಹತ್ಯೆ | ಸಮರ್ಥನೆಯ ಮಾಹಿತಿ ತೆಗೆದುಹಾಕುವಂತೆ ಸಾಮಾಜಿಕ ಜಾಲತಾಣಗಳಿಗೆ ಆದೇಶಿಸಿದ ಕೇಂದ್ರ ಸರ್ಕಾರ

Ashwini Vaishnav Image
  • ಉದಯಪುರಕ್ಕೆ ಸಂಬಂಧಿಸಿದ ವಿಡಿಯೋ ತೆಗೆದುಹಾಕುವಂತೆ ಸೂಚಿಸಿದ ಕೇಂದ್ರ ಸರ್ಕಾರ
  • ಸಾರ್ವಜನಿಕ ಶಾಂತಿ ಪುನಃಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದ ಸಚಿವಾಲಯ

ಕಳೆದ ಹಲವು ದಿನಗಳಿಂದ ಉದಯಪುರದಲ್ಲಿ ನಡೆದ ಹತ್ಯೆ ಸಮರ್ಥಿಸಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ತೆಗೆದು ಹಾಕುವಂತೆ ಮತ್ತು ಇದಕ್ಕೆ ಪ್ರೋತ್ಸಾಹಿಸುವ ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಗಳಿಗೆ ಆದೇಶ ಹೊರಡಿಸಿದೆ.

"ಸಾರ್ವಜನಿಕ ಸುವ್ಯವಸ್ಥೆಗೆ ಪ್ರಚೋದನೆ ಮತ್ತು ಅಡ್ಡಿ ತಡೆಗಟ್ಟಲು ಮತ್ತು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆ ಪುನಃಸ್ಥಾಪಿಸಲು ಈ ನಿರ್ಧಾರ ತಗೆದುಕೊಳ್ಳಲಾಗಿದೆ" ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. 

ಕೇಂದ್ರ ಹೊರಡಿಸಿದ ಸೂಚನೆಯಲ್ಲಿ, ಉದಯಪುರಕ್ಕೆ ಸಂಬಂಧಿಸಿ ಪಠ್ಯ ಸಂದೇಶ, ಆಡಿಯೋ, ವಿಡಿಯೋ, ಫೋಟೋ ಅಥವಾ ಯಾವುದೇ ರೂಪದಲ್ಲಿ ಇರುವ ಎಲ್ಲ ಸಮರ್ಥನಾ ಮಾಹಿತಿ ತಗೆದು ಹಾಕಬೇಕು. ಅಷ್ಟೇ ಅಲ್ಲದೆ, ಈ ಹತ್ಯೆಗೆ ಬೆಂಬಲಿಸಿದ ಎಲ್ಲ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಬೇಕು" ಎಂದು ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಆದೇಶಿಸಲಾಗಿದೆ.

ಪ್ರವಾದಿಯ ಬಗ್ಗೆ ಬಿಜೆಪಿಯ ನೂಪುರ್ ಶರ್ಮಾ ಮಾಡಿದ ಹೇಳಿಕೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಉದಯಪುರದಲ್ಲಿ ಟೈಲರ್ ಆಗಿದ್ದ ಕನ್ಹಯ್ಯಾ ಲಾಲ್ ಅವರನ್ನು ಮೊಹಮ್ಮದ್ ರಿಯಾಜ್ ಮತ್ತು ಘೌಸ್ ಮೊಹಮ್ಮದ್ ಎಂಬ ಇಬ್ಬರು ವ್ಯಕ್ತಿಗಳು ಕೊಲೆಗೈದಿದ್ದಾರೆ. ಇದರ ಜೊತೆಗೆ ಇಬ್ಬರು ಕೊಲೆಯ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಶರ್ಮಾಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇದು ಆಗಿ ಕೆಲವು ದಿನಗಳ ನಂತರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಲ್ಲಾ ದಾಖಲೆಗಳನ್ನು ತೆಗೆದುಹಾಕುವಂತೆ ಜಾಲತಾಣಗಳಿಗೆ ಸೂಚನೆ ಹೊರಡಿಸಿದೆ.

"ನಾವು ಘಟನೆಯನ್ನು 'ನಿಯಮದ ಉಲ್ಲಂಘನೆ' ಎಂದು ಪರಿಗಣಿಸಿದ್ದೇವೆ. ನಮ್ಮ ಸಮುದಾಯ ಮಾನದಂಡಗಳ ಪ್ರಕಾರ ಘಟನೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದರೂ ತೆಗೆದುಹಾಕುತ್ತೇವೆ ಹಾಗೂ ಇಂತಹ ವಿಷಯಗಳನ್ನು ನಾವು ಬೆಂಬಲಿಸುವುದಿಲ್ಲ” ಎಂದು ಮೆಟಾ ಸಂಸ್ಥೆ ತಿಳಿಸಿದೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್‌' ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೂ ಮತ್ತು ಟ್ವಿಟರ್ ಸಂಸ್ಥೆ ಸಚಿವಾಲಯ ಕಳುಹಿಸಿದ ಸಂದೇಶಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಶೀಘ್ರದಲ್ಲಿ ಅವರ ಬೆಂಬಲ ಕೂಡ ಸಿಗಲಿದೆ ಎಂದು ಸಚಿವಾಲಯ ಹೇಳಿದೆ.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ಪ್ರಧಾನಿಗೆ ಸೈಬರ್ ಮಂಥನದ ವಿವರ

ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ತಮ್ಮ ವೇದಿಕೆಗಳಲ್ಲಿ ಹೋಸ್ಟ್ ಮಾಡಲಾದ ತೃತೀಯ ಪಕ್ಷಗಳ ಮಾಹಿತಿ ಪ್ರಸಾರವಾದರೆ 'ಮಧ್ಯವರ್ತಿಗಳು' ಎಂದು ವರ್ಗೀಕರಿಸುವ ಮೂಲಕ ಕಾನೂನು ಕ್ರಮದಿಂದ ವಿನಾಯಿತಿ ದೊರೆಯುತ್ತದೆ. ಆದರೆ ಈ ಕಾನೂನಾತ್ಮಕ ವಿನಾಯಿತಿ ಷರತ್ತುಬದ್ಧವಾಗಿದೆ ಮತ್ತು ಕಂಪನಿಗಳು ಸರ್ಕಾರ ಸೂಚಿಸಿದ ನಿರ್ದಿಷ್ಟ ವಿಷಯಗಳನ್ನು ತೆಗೆದು ಹಾಕುವ ಬದ್ಧತೆ ಹೊಂದಿರುತ್ತವೆ ಎಂದು ಮಾಹಿತಿ ತಂತ್ರಜ್ಞಾನ ಕಾಯಿದೆ, 2000ರ ಸೆಕ್ಷನ್ 69(ಎ) ಅಡಿಯಲ್ಲಿ ಜವಾಬ್ದಾರಿ ಹೊಂದಿದೆ.

“ಇದು ಸಚಿವಾಲಯವು ನೀಡಿರುವ ಏಕಪಕ್ಷೀಯ ಸಲಹೆ. ಏಕೆಂದರೆ ಹತ್ಯೆಗೆ ಸಂಬಂಧಿಸಿದ ವಿಷಯವು ಅತ್ಯಂತ ಭೀಭತ್ಸ ಮತ್ತು ಪ್ರಚೋದನಕಾರಿ. ಕೊಲೆಯನ್ನು ವೈಭವೀಕರಿಸುವ ಅಥವಾ ಸಮರ್ಥಿಸುವುದನ್ನು ಪ್ರೋತ್ಸಾಹಿಸಲಾಗದು. ಇದರಿಂದಾಗಿ ಸೆಕ್ಷನ್ 69(A) ಅಡಿಯಲ್ಲಿ ತೆಗೆದು ಹಾಕಲು ಆದೇಶ ನೀಡಲಾಗಿದೆ" ಎಂದು ಸಚಿವಾಲಯ ವರದಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್