ಮಹಾ ಬಿಕ್ಕಟ್ಟು | ಬಂಡಾಯ ಶಾಸಕ ತಾನಾಜಿ ಸಾವಂತ್ ಕಚೇರಿ ಧ್ವಂಸ

  • ಬಂಡಾಯ ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದ ಸಂಜಯ್ ಮೋರೆ
  • ಮಂಗೇಶ್‌ ಕುಡಾಳ್ಕರ್‌ ಮತ್ತು ದಿಲೀಪ್ ಲಾಂಡೆ ನಂತರ ಸಾವಂತ್ ಸರದಿ

ಪುಣೆಯಲ್ಲಿರುವ ಬಂಡಾಯ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು  ಶಿವಸೇನೆ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಗುವಾಹಟಿಯಲ್ಲಿ ಏಕನಾಥ್ ಶಿಂಧೆ ಅವರೊಂದಿಗೆ ಇರುವ ಬಂಡಾಯ ಶಾಸಕ ತಾನಾಜಿ ಸಾವಂತ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಶಿವಸೇನಾ ಕಾರ್ಯಕರ್ತರು ಕಿಟಕಿಯ ಗಾಜುಗಳನ್ನು ಒಡೆಯುತ್ತಿರುವ ದೃಶ್ಯಗಳು ಎಎನ್‌ಐ ವರದಿ ಮಾಡಿರುವ ವಿಡಿಯೋದಲ್ಲಿ ಸೆರೆಯಾಗಿವೆ. 

“ನಮ್ಮ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ತೊಂದರೆ ನೀಡಿದ ಎಲ್ಲಾ ದೇಶದ್ರೋಹಿಗಳು ಮತ್ತು ಬಂಡಾಯ ಶಾಸಕರು ಈ ರೀತಿಯ ಪರಿಣಾಮ ಎದುರಿಸುತ್ತಾರೆ. ಅವರ ಕಚೇರಿಯ ಮೇಲೂ ದಾಳಿ ನಡೆಸುತ್ತೇವೆ. ಯಾರನ್ನೂ ಬಿಡುವುದಿಲ್ಲ” ಎಂದು ಶಿವಸೇನೆಯ ಪುಣೆ ನಗರ ಮುಖ್ಯಸ್ಥ ಸಂಜಯ್ ಮೋರೆ ಎಎನ್‌ಐಗೆ ತಿಳಿಸಿದ್ದಾರೆ.

ಶಿವಸೇನೆಯ ಬಂಡಾಯ ಶಾಸಕರ ಕಚೇರಿಗಳ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. ಶಿವಸೇನೆಯ ಕಾರ್ಯಕರ್ತರು ಕುರ್ಲಾ ಪ್ರದೇಶದಲ್ಲಿ ಮಂಗೇಶ್‌ ಕುಡಾಳ್ಕರ್‌ ಅವರ ಕೆಲವು ಸಂಗ್ರಹಗಳನ್ನು ಶುಕ್ರವಾರ ನಾಶಮಾಡಿದ್ದರು. ಮತ್ತೊಂದು ಕಡೆ ಶಾಸಕ ದಿಲೀಪ್ ಲಾಂಡೆ ಅವರ ಪೋಸ್ಟರ್‌ಗೆ ಮಸಿ ಬಳಿದಿದ್ದರು.

ಈ ಸುದ್ದಿ ಓದಿದ್ದೀರಾ ? ಆಪರೇಷನ್ ಕಮಲ ಅಭಾದಿತ: ಶಿವಸೇನೆ ಹುಲಿಯನ್ನು ಬೋನಿಗೆ ಕಡೆವಿದ ಬಿಜೆಪಿ

ತಾನಾಜಿ ಸಾವಂತ್ ಅವರ ಕಚೇರಿ ಧ್ವಂಸಗೊಳಿಸಿರುವ ಘಟನೆಯನ್ನು "ಸೇಡಿನ ಪ್ರತಿಕ್ರಿಯೆ" ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರು ಕಾರ್ಯಕರ್ತರಿಗೆ ಅಂತಹ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.

ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ 38 ಶಾಸಕರು ಮೊಕ್ಕಾಂ ಹೂಡಿದ ನಂತರ ಮಹಾ ವಿಕಾಸ್ ಅಘಾಡಿ ಸರ್ಕಾರವು ಸಂಖ್ಯಾಬಲದೊಂದಿಗೆ ಹೋರಾಡುತ್ತಿದೆ. ಶಿವಸೇನಾ ಕಾರ್ಯಕರ್ತರು  ಬೀದಿಗಿಳಿದ ವರದಿಗಳ ನಡುವೆ ಮಹಾರಾಷ್ಟ್ರ ಪೊಲೀಸರು ಎಚ್ಚರಿಕೆ ವಹಿಸುತ್ತಿದ್ದಾರೆ. 

“ಬಂಡಾಯ ಬಣದ 16 ಶಾಸಕರಿಗೆ ಪಕ್ಷವು ನೋಟಿಸ್ ಜಾರಿ ಮಾಡಲಿದ್ದು, ಸೋಮವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಳಲಾಗಿದೆ” ಎಂದು ಶಿವಸೇನಾ ಸಂಸದ ಅರವಿಂದ್ ಸಾವಂತ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್