ಗುಜರಾತ್ ಚುನಾವಣೆ | ಮೋದಿಯವರೇ, ರಾಜ್ಯದ ದುರಾಡಳಿತದ ಬಗ್ಗೆ ಮಾತಾಡಿ ಎಂದ ಮಲ್ಲಿಕಾರ್ಜುನ ಖರ್ಗೆ

streering commeetee by kharge
  • ಗುಜರಾತಿನ ಜನ ಪ್ರಶ್ನೆ ಕೇಳುತ್ತಾರೆ ಉತ್ತರಿಸಿ ಎಂದ ಖರ್ಗೆ
  • ವಿಪಕ್ಷದ ವಿರುದ್ಧ ಹರಿಹಾಯ್ದಿದ್ದ ಪ್ರಧಾನಿ ನರೇಂದ್ರ ಮೋದಿ

ಗುಜರಾತ್ ವಿಧಾನಸಭಾ ಚುನಾವಣಾ ಮತದಾನದ ದಿನ ಸಮೀಪಿಸುತ್ತಿರುವಂತೆ ಚುನಾವಣಾ ಅಖಾಡ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ನಡುವೆ ಪರಸ್ಪರ ಕೆಸರೆರೆಚಾಟ ಜೋರಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುತ್ತಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರಿಗೆ ತಿರುಗೇಟು ನೀಡಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗುಜರಾತಿನ ದುರಾಡಳಿತ ಕುರಿತು ಮಾತನಾಡಿ ಎಂದಿದ್ದಾರೆ.

"ರಾಷ್ಟ್ರಪತಿ ಚುನಾವಣೆಯಲ್ಲಿ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸದ ಕಾಂಗ್ರೆಸ್‌ ಪಕ್ಷವನ್ನು ಮೂಲೆಗುಂಪು ಮಾಡಬೇಕು" ಎಂದು ಪ್ರದಾನಿ ಮೋದಿ ಬುಧವಾರ ಹೇಳಿದ್ದಾರೆ.

"ಗುಜರಾತಿನಲ್ಲಿ ವೋಟ್ ಬ್ಯಾಂಕ್ ರಾಜಕಾರಣ, ಸ್ವಜನಪಕ್ಷಪಾತ, ಮತೀಯತೆ ಹಾಗೂ ಸಮಾಜವಿರೋಧಿಗಳಿಗೆ ಕಾಂಗ್ರೆಸ್‌ ಬೆಂಬಲ ನೀಡುತ್ತಿದೆ" ಎಂದು ಆರೋಪಿಸಿ ಪ್ರಧಾನಿ ಮೋದಿ ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿಗೆ ತಿರುಗೇಟು ನೀಡಿರುವ ಮಲ್ಲಿಕಾರ್ಜುನ ಖರ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿ, "ನರೇಂದ್ರ ಮೋದಿಯವರೇ, ಕಾಂಗ್ರೆಸ್ ಅನ್ನು ಶಪಿಸುವ ಬದಲು ಗುಜರಾತಿನ ದುರಾಡಳಿತ ಬಗ್ಗೆ ಮಾತನಾಡಿ" ಎಂದಿದ್ದಾರೆ.

"ಗುಜರಾತಿನ ಮಕ್ಕಳ ಭವಿಷ್ಯ ಏಕೆ ಹಾಳಾಗಿದೆ? ಮಕ್ಕಳಲ್ಲಿ ಅಪೌಷ್ಟಿಕತೆ, ಕಡಿಮೆ ತೂಕದ ಹೊಂದಿರುವ 30 ರಾಜ್ಯಗಳ ಪೈಕಿ ಗುಜರಾತ್ 29ನೇ ಸ್ಥಾನದಲ್ಲಿ ಏಕಿದೆ? ಶಿಶು ಮರಣ ದರದಲ್ಲಿ 19ನೇ ಸ್ಥಾನದಲ್ಲಿದೆ ಏಕೆ?" ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.

"ಕಳೆದ 27 ವರ್ಷಗಳಿಂದ ಆಡಳಿತ ಮಾಡಿದ್ದೀರಿ ಅಲ್ಲವೇ? ಏನೇನು ಮಾಡಿದ್ದೀರಿ ಎನ್ನುವುದರ ಕುರಿತು ಗುಜರಾತ್ ಪ್ರಶ್ನೆ ಕೇಳುತ್ತದೆ ಉತ್ತರಿಸಿ" ಎಂದು ಹೇಳಿದ್ದಾರೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿ.1 ಮತ್ತು 5ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿವೆ. ಡಿ.8ರಂದು ಮತ ಎಣಿಕೆ ನಡೆಯಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180