ಗುಜರಾತ್ ಚುನಾವಣೆ | ಜನಸಂಖ್ಯೆಗೂ ಮೀರಿದ ರಾಜಕೀಯ ಪ್ರಾಬಲ್ಯ ಪಾಟಿದಾರ್ ಸಮುದಾಯದ್ದು!

ಪಾಟಿದಾರ್‌ ಸಮುದಾಯ ಗುಜರಾತಿನಲ್ಲಿ ಪ್ರಾಬಲ್ಯ ಹೊಂದಿದೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಎಎಪಿ ಸೇರಿದಂತೆ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಸಮುದಾಯದ ನಾಯಕರನ್ನೇ ಪ್ರಮುಖವಾಗಿ ಕಣಕ್ಕಿಳಿಸಿದ್ದು, ಪಟೇಲರು ಯಾರ ಕೈ ಹಿಡಿಯಲಿದ್ದಾರೆ ಎನ್ನುವು ರಾಜಕೀಯ ಕುತೂಹಲ ಕೆರಳಿಸಿದೆ.
Patidar Community gujarat election

ಕಳೆದ 27 ವರ್ಷಗಳಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರದ ಚುಕ್ಕಾಣಿ ಹಿಡಿದಿರುವ ಗುಜರಾತಿನಲ್ಲಿ ಈ ಬಾರಿ ಅಧಿಕಾರದ ಕುರ್ಚಿಗಾಗಿ ಭಾರೀ ಪೈಪೋಟಿ ನಡೆದಿದೆ. ಆಡಳಿತರೂಢ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳೂ ರಾಜ್ಯದ ನಿರ್ಣಾಯಕ ಪಾಟಿದಾರ್ ಸಮುದಾಯದ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಇನ್ನಿಲ್ಲದ ಯತ್ನ ನಡೆಸಿವೆ.

ಪಾಟಿದಾರ್‌ ಸಮುದಾಯದ ಪ್ರಾಬಲ್ಯವೇಕೆ?

ಪಾಟಿದಾರರು ರಾಜ್ಯದಲ್ಲಿ ಭೂಮಾಲೀಕರ ದೊಡ್ಡ ಸಮುದಾಯವಾಗಿದೆ. ಇದೊಂದು ಕೃಷಿಕ ಜಾತಿ, ಲೆಯುವಾಸ್ ಮತ್ತು ಕಡ್ವಾಸ್ ಎಂಬ ಪ್ರಮುಖ ಜಾತಿಗಳು ಸೇರಿದಂತೆ ಇದು ಹಲವು ಉಪಜಾತಿಗಳನ್ನು ಒಳಗೊಂಡಿದೆ. 1950ರ ಸೌರಾಷ್ಟ್ರ ಭೂ ಸುಧಾರಣಾ ಕಾಯಿದೆ ಜಾರಿಯ ಬಳಿಕ 1952ರಿಂದ ಸಮುದಾಯವು ಹೆಚ್ಚಿನ ಲಾಭ ಪಡೆದುಕೊಂಡಿತ್ತು.

ಸೌರಾಷ್ಟ್ರ ಪ್ರದೇಶದಲ್ಲಿ ನೆಲಗಡಲೆ ಮತ್ತು ಹತ್ತಿಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಆರಂಭಿಸಿದ ಪಟೇಲರು ಕ್ರಮೇಣ ಆರ್ಥಿಕವಾಗಿ ಸಬಲರಾದರು. ಹಿತ್ತಾಳೆ, ಪಿಂಗಾಣಿ, ವಜ್ರ, ಆಟೋ ಎಂಜಿನಿಯರಿಂಗ್ ಮತ್ತು 'ಫಾರ್ಮಾಸ್ಯುಟಿಕಲ್ಸ್‌'ನಲ್ಲಿ ಹೂಡಿಕೆ ಮಾಡಿ ನಿಧಾನವಾಗಿ ಗುಜರಾತ್‌ನ ಇತರ ಭಾಗಗಳಿಗೆ ತಮ್ಮ ಪ್ರಾಬಲ್ಯ ವಿಸ್ತರಿಸಿದ್ದಾರೆ. ಭೂಮಿ ಖರೀದಿಸಿದರು. ಸೌರಾಷ್ಟ್ರ ಪಟೇಲರ ಲಾಬಿ ಕ್ರಮೇಣ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿತು.

ಪಾಟಿದಾರರು ಸಂಘಟಿತ ಮತ್ತು ಶ್ರೀಮಂತ ಸಮುದಾಯವಾಗಿದೆ. ಆದ್ದರಿಂದ, ಅವರ ಪ್ರಭಾವವು ಅವರ ಸಂಖ್ಯೆಗೆ ಅಸಮಾನವಾಗಿದೆ. ಅವರು ಹಲವಾರು ವ್ಯವಹಾರಗಳು, ವ್ಯಾಪಾರಗಳು ಮತ್ತು ಸಹಕಾರಿ ಸಂಸ್ಥೆಗಳನ್ನು ಸಹ ನಿಯಂತ್ರಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಗುಜರಾತ್ ಚುನಾವಣೆ | 560 ಅಭ್ಯರ್ಥಿಗಳಲ್ಲಿ ಕೇವಲ 40 ಮಹಿಳಾ ಅಭ್ಯರ್ಥಿಗಳು

ಸಮುದಾಯದ ಜನಸಂಖ್ಯೆ ಶೇ.12 ರಷ್ಟು  

ಪಾಟಿದಾರ್‌ ಸಮುದಾಯವು ಭೂಮಿ ಹೊಂದಿರುವ ಕೃಷಿಕ ಸಮುದಾಯವಾಗಿದೆ. ಈ ಸಮುದಾಯದ ಗುಜರಾತಿನ ಒಟ್ಟು ಜನಸಂಖ್ಯೆಯಲ್ಲಿ ಶೇ.12ರಷ್ಟಿದ್ದಾರೆ ಮಾತ್ರವಲ್ಲದೆ. ಆದರೆ, ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ.

2017ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಾಟಿದಾರ್ ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಹಿಡಿತ ಸಾಧಿಸಿತ್ತು. ಪಾಟಿದಾರ್ ಪ್ರಾಬಲ್ಯದ 40 ಸ್ಥಾನಗಳ ಪೈಕಿ ಬಿಜೆಪಿ 24 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದರೆ, ಕಾಂಗ್ರೆಸ್ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು.

1990ರ ದಶಕದಲ್ಲಿ ಬಿಜೆಪಿಯ ಕಟ್ಟಾ ಬೆಂಬಲಿಗರು

1990ರ ದಶಕಗಳಿಂದ ಮೂರು ದಶಕಗಳಿಗೂ ಹೆಚ್ಚು ಕಾಲ ಪಾಟಿದಾರರು ಬಿಜೆಪಿಯ ಪ್ರಬಲ ಬೆಂಬಲಿಗರಾಗಿದ್ದಾರೆ. ಆ ಮೊದಲು ಎಂಭತ್ತರ ದಶಕದ ಮಧ್ಯದಲ್ಲಿ, ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಂ ಮತ ಬ್ಯಾಂಕ್‌ ಮೇಲೆ ಕಣ್ಣಿಟ್ಟ ಪಾಟಿದಾರರು ಇತರೆ ಪಕ್ಷಗಳಿಗೆ ಬೆಂಬಲಿಸಲು ಆರಂಭಿದ್ದರು.

ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ವಿರೋಧಿಸಲು ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ 2007ರಲ್ಲಿ ಸರ್ದಾರ್ ಪಟೇಲ್ ಉತ್ಕರ್ಷ್ ಸಮಿತಿ ರಚಿಸಿದಾಗಿನಿಂದ ಸಮುದಾಯ ಬಿಜೆಪಿ ವಿರುದ್ಧ ನಿರಂತರ ಅಸಮಾಧಾನ ಹೊಂದಿದೆ.

ಈವರೆಗೆ ಸಮುದಾಯದ ಐವರು ಮುಖ್ಯಮಂತ್ರಿಗಳು

ಗುಜರಾತ್‌ ಈವರೆಗೆ ಕಂಡಿರುವ ಒಟ್ಟು 17 ಮುಖ್ಯಮಂತ್ರಿಗಳ ಪೈಕಿ ಐವರು ಪಾಟಿದಾರ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪಾಟಿದಾರರು ಪಟೇಲ್‌ ಎಂಬ ಉಪನಾಮ ಇಟ್ಟುಕೊಂಡಿದ್ದಾರೆ. ಆನಂದಿಬೆನ್ ಪಟೇಲ್, ಕೇಶುಭಾಯ್ ಪಟೇಲ್, ಚಿಮನ್‌ಭಾಯ್ ಪಟೇಲ್ ಮತ್ತು ಬಾಬುಭಾಯ್ ಪಟೇಲ್ ಗುಜರಾತ್‌ನ ಐವರು ಪಾಟಿದಾರ್‌ ಮುಖ್ಯಮಂತ್ರಿಗಳು.

ಆನಂದಿಬೆನ್ ಪಟೇಲ್ ಅವರು ಪಾಟಿದಾರರು ಎನ್ನುವ ಕಾರಣಕ್ಕೆ ಗುಜರಾತಿನ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದರು.

ಈ ಸುದ್ದಿ ಓದಿದ್ದೀರಾ?: ಗುಜರಾತ್ ಚುನಾವಣೆ | ಅಂತಿಮ ಅಸ್ತ್ರವಾಗಿ ಮತ್ತೆ ಹಿಂದುತ್ವಕ್ಕೆ ಮೊರೆ ಹೋದ ಅಮಿತ್ ಶಾ

ಸೌರಾಷ್ಟ್ರದಲ್ಲಿ ಕಾಂಗ್ರೆಸ್‌ನ ಪ್ರಬಲ ಹಿಡಿತ

ಸೌರಾಷ್ಟ್ರದಲ್ಲಿ ಪಾಟಿದಾರ್‌ ಪ್ರಾಬಲ್ಯವಿದೆ. ಈ ಭಾಗದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದರೆ, ಅಹಮದಾಬಾದ್ ಮತ್ತು ಗಾಂಧಿನಗರದ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. 2012ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳನ್ನು ವಶಪಡಿಸಿಕೊಂಡಿದ್ದರೆ, ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಪಡೆದುಕೊಂಡಿತ್ತು.

2017ರ ಚುನಾವಣೆಯಲ್ಲಿ ಪಾಟಿದಾರ್ ಯುವ ನಾಯಕ ಹಾರ್ದಿಕ್ ಪಟೇಲ್‌ ನೇತೃತ್ವದಲ್ಲಿ ಸಮುದಾಯದ ಬೃಹತ್‌ ಮೀಸಲಾತಿ ಚಳವಳಿ ನಡೆದಿತ್ತು. ಇದು ಕಾಂಗ್ರೆಸ್ಸಿಗೆ ಲಾಭ ತಂದು ಕೊಟ್ಟಿತ್ತು ಎಂಬುದು ಗಮನಾರ್ಹ. ಹಾರ್ದಿಕ್ ಪಟೇಲ್‌ ಕಾಂಗ್ರೆಸ್ ಸೇರಿದ್ದರು. 2022ರ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ ಸೇರ್ಪಡೆಯಾಗಿ, ಇದೀಗ ವಿರಾಮ್‌ಗಾಂ ಕ್ಷೇತ್ರದ ಕೇಸರಿ ಪಡೆಯ ಅಭ್ಯರ್ಥಿಯಾಗಿದ್ದಾರೆ.

ಬಹುಪಾಲು ಅಭ್ಯರ್ಥಿಗಳು ಪಾಟಿದಾರರೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ 44 ಪಾಟಿದಾರ್ ಶಾಸಕರು ಆಯ್ಕೆಯಾಗಿದ್ದರು. ಆದರೆ ಈ ಬಾರಿ ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ ಪಾಟಿದಾರ್ ಅಭ್ಯರ್ಥಿಗಳನ್ನು ಭಾರೀ ಸಂಖ್ಯೆಯಲ್ಲಿ ಕಣಕ್ಕಿಳಿಸಿವೆ.

182 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 45 ಪಾಟಿದಾರ್‌ರನ್ನು, ಕಾಂಗ್ರೆಸ್ 42, ಎಎಪಿ ಹೊಸದಾಗಿ ಸೇರ್ಪಡೆಗೊಂಡ 46 ಪಾಟಿದಾರ್‌ ನಾಯಕರಿಗೆ ಟಿಕೆಟ್ ನೀಡಿದೆ.

ಪಿಎಎಎಸ್ ಹೋರಾಟಗಾರರನ್ನೇ ಕಣಕ್ಕಿಳಿಸಿದ ಎಎಪಿ

ಗುಜರಾತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಅಚ್ಚರಿ ಮೂಡಿಸುವ ಸಲುವಾಗಿ ಆಮ್ ಆದ್ಮಿ ಪಾರ್ಟಿ, ಪಾಟಿದಾರ್ ಮತಗಳ ಮೇಲೆ ಕಣ್ಣಿಟ್ಟಿದೆ. ಬಿಜೆಪಿ ವಿರುದ್ಧ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್)ಗೆ ಸಂಬಂಧಿಸಿದ ನಾಯಕರನ್ನೇ ಕಣಕ್ಕಿಳಿಸಿದೆ.

ಬಿಜೆಪಿಯ ಭದ್ರಕೋಟೆಗಳಾದ ಕಟರ್ಗಾಮ್, ವರಚಾ, ಕಾಮ್ರೇಜ್ ಮತ್ತು ಓಲ್ಪಾಡ್ ವಿಧಾನಸಭಾ ಕ್ಷೇತ್ರಗಳಿಗೆ ಆಮ್ ಆದ್ಮಿ ಪಿಎಎಎಸ್‌ನ ಮಾಜಿ ನಾಯಕರುಗಳಾದ ಎಎಪಿ ಅಧ್ಯಕ್ಷ ಗೋಪಾಲ್ ಇಟಾಲಿಯಾ, ಅಲ್ಪೇಶ್ ಕಥಿರಿಯಾ, ರಾಮ್ ಧಾಡುಕ್ ಹಾಗೂ ಧಾರ್ಮಿಕ್ ಮಾಳವಿಯಾ ಅವರನ್ನು ಚುನಾವಣಾ ಅಖಾಡಕ್ಕೆ ಇಳಿಸಿದೆ.

ಬಿಜೆಪಿಯ ಹಾಲಿ ಶಾಸಕ ಮತ್ತು ನಗರಾಭಿವೃದ್ಧಿ ರಾಜ್ಯ ಸಚಿವ ವಿನು ಮೊರಾಡಿಯಾ ವಿರುದ್ಧ ಎಎಪಿಯ ಗೋಪಾಲ್ ಇಟಾಲಿಯಾ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಪಕ್ಷವು ಪಾಟಿದಾರ್ ಸಮುದಾಯದ ನಾಯಕರ ವಿರುದ್ಧ ಅದೇ ಸಮುದಾಯವರನ್ನೇ ಕಣಕ್ಕಿಳಿಸಿದೆ.

ಈ ಸುದ್ದಿ ಓದಿದ್ದೀರಾ?: ಗುಜರಾತ್ ಚುನಾವಣೆ | ಸ್ವತಂತ್ರ ಅಭ್ಯರ್ಥಿಯಿಂದ ಆಯೋಗಕ್ಕೆ ಠೇವಣಿ; ಹತ್ತು ಸಾವಿರವೂ ಒಂದು ರೂ. ನಾಣ್ಯಗಳೇ

ಪಾಟಿದಾರ್‌ vs ಪಾಟಿದಾರ್‌

ಗುಜರಾತಿನ 18 ವಿಧಾನಸಭಾ ಕ್ಷೇತ್ರಗಳಲ್ಲಿ ಪಾಟಿದಾರರ ವಿರುದ್ಧ ಪಾಟಿದಾರರೇ ಸ್ಪರ್ಧಿಸಿದ್ದಾರೆ.  ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ತಮ್ಮ ಸ್ಥಾನಗಳನ್ನು ಹಿಂದಿನಂತೆ ಕಾಯ್ದುಕೊಳ್ಳಲು ಬಲಿಷ್ಠ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ.

ರಾಜ್ಯದಲ್ಲಿ ಪ್ರಭಾವಿ ಸಮುದಾಯವಾಗಿರುವ ಪಾಟಿದಾರ್ ಸಮುದಾಯದ 18 ಅಭ್ಯರ್ಥಿಗಳು ಈ ಬಾರಿ ತಾವೇ ಪರಸ್ಪರ ಎದುರಾಳಿಗಳಾಗಿದ್ದಾರೆ. ಈ ಸಲ ಚುನಾವಣಾ ಲೆಕ್ಕಚಾರವೂ ಬಹಳ ಮಹತ್ವದ್ದಾಗಿದೆ.

ಈ ಬಾರಿ ಸಮುದಾಯದ ಒಲವು ಯಾರಿಗೆ?

2017ರ ವಿಧಾನಸಭಾ ಚುನಾವಣೆಯಲ್ಲಿ ಸದ್ದು ಮಾಡಿದ್ದ ಹಾರ್ದಿಕ್ ಪಟೇಲ್‌ ಪ್ರಸ್ತುತ ಬಿಜೆಪಿ ಪಾಳೆಯದಲ್ಲಿದ್ದಾರೆ. ಅಂತೆಯೇ ಕಾಂಗ್ರೆಸ್ ಮತ್ತು ಎಎಪಿ ಸಹ ಸಮುದಾಯದ ಹೋರಾಟಗಾರರನ್ನೇ ಕಣಕ್ಕಿಳಿಸಿದೆ. ಆದ್ದರಿಂದ ಈ ಬಾರಿ ಸಮುದಾಯ ಯಾವ ಪಕ್ಷದ ಕೈ ಹಿಡಿಯಲಿದೆ ಎಂಬುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಗಾಗಿ 2015ರಲ್ಲಿ ಆಗಿನ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ಸಂಚಾಲಕ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ತೀವ್ರ ಆಂದೋಲನ ಪರಿಣಾಮ ಬಿಜೆಪಿಗೆ ದೊಡ್ಡ ಹಿನ್ನೆಡೆಯಾಗಿದೆ. 2017ರ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಸ್ಥಾನಗಳಿಕೆಯನ್ನು ಸಾಕಷ್ಟು ಸುಧಾರಿಸಿಕೊಂಡಿತ್ತು.

ಆದರೆ, ಈ ಬಾರಿ ನಿರ್ಣಾಯಕ ಪಾತ್ರ ವಹಿಸುವವರು ಯಾರು ಎನ್ನುವುದು ರಾಜಕೀಯ ಕುತೂಹಲ ಕೆರಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180