
- ರಾಜ್ಕೋಟ್ ಜಿಲ್ಲೆಯ ಜಮ್ಕಂದೋರ್ನಾ ಪಟ್ಟಣದಲ್ಲಿ ಪ್ರಧಾನಿ ಮೋದಿ ಪ್ರಚಾರ ಮೆರವಣಿಗೆ
- ಹಳ್ಳಿಗಳ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮೌನವಾಗಿ ಕೆಲಸ ಮಾಡುತ್ತಿದೆ ಎಂದ ಮೋದಿ
ಭಾರತವನ್ನು ಲೂಟಿ ಮಾಡಿದವರು ತಾವು ವಶಪಡಿಸಿಕೊಂಡದ್ದನ್ನು ಹಿಂದಿರುಗಿಸಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ರಾಜ್ಕೋಟ್ ಜಿಲ್ಲೆಯ ಜಮ್ಕಂದೋರ್ನಾ ಪಟ್ಟಣದಲ್ಲಿ ಮಂಗಳವಾರ (ಅ. 11) ಹೇಳಿದ್ದಾರೆ.
ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ಸರ್ಕಾರವು ಭ್ರಷ್ಟರ ವಿರುದ್ಧ ಕ್ರಮ ಕೈಗೊಂಡರೆ, ಅವರು ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಭ್ರಷ್ಟರು ಲೂಟಿ ಮಾಡಿದ್ದನ್ನು ಈ ದೇಶಕ್ಕೆ ಹಿಂತಿರುಗಿಸಬೇಕು” ಎಂದು ಹೇಳಿದರು.
“ಸರ್ಕಾರ ಭ್ರಷ್ಟರ ವಿರುದ್ಧ ಕ್ರಮ ಕೈಗೊಂಡರೆ ಸರ್ಕಾರದ ವಿರುದ್ಧ ಒಂದು ಗುಂಪು ಆರೋಪಿಸುತ್ತದೆ. ಜನರನ್ನು ಲೂಟಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಲ್ಲವೇ? ನನಗೆ ನಿಮ್ಮ ಆಶೀರ್ವಾದವಿದೆ. ಆದ್ದರಿಂದ ಟೀಕೆಗಳ ನಡುವೆಯೂ ಕೆಲಸ ಮಾಡುತ್ತಿದ್ದೇನೆ” ಎಂದು ಹೇಳಿದರು.
ಕಾಂಗ್ರೆಸ್ ನಿಂದಿಸುವುದನ್ನು ನಿಲ್ಲಿಸಿದೆ. ಅದು ಗ್ರಾಮೀಣ ಮತಗಳನ್ನು ಸೆಳೆಯಲು ಮೌನವಾಗಿ ಕೆಲಸ ಮಾಡುತ್ತಿದೆ ಎಂಬ ಅರಿವನ್ನು ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಹೊಂದಿರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ದ್ರಾವಿಡ ಜಟಾಪಟಿ | ಆರ್ಎಸ್ಎಸ್ ಕಾರ್ಯಕರ್ತರಂತೆ ಹೇಳಿಕೆ ನೀಡುತ್ತಿರುವ ರಾಜ್ಯಪಾಲರು; ಡಿಎಂಕೆ ತಿರುಗೇಟು
“ಗುಜರಾತ್ನಲ್ಲಿ ಕಾಂಗ್ರೆಸ್ ನಿಷ್ಕ್ರಿಯವಾಗಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಅದು ಮೌನವಾಗಿ ಹಳ್ಳಿಗಳಲ್ಲಿ ಗುಂಪು ಸಭೆಗಳನ್ನು ಆಯೋಜಿಸುತ್ತಿದೆ. ಅವರು ಮೆರವಣಿಗೆಗಳು, ಸಭೆಗಳು ಅಥವಾ ಪತ್ರಿಕಾಗೋಷ್ಠಿಗಳನ್ನು ಮಾಡದಿದ್ದರೂ ನಾವು ಎಚ್ಚರದಿಂದಿರಬೇಕು. ದೆಹಲಿಯಿಂದ ಗುಜರಾತ್ ವಿರುದ್ಧ ಪಿತೂರಿ ನಡೆಸುತ್ತಿರುವವರು ಇದನ್ನು ನಿಯಂತ್ರಿಸುತ್ತಿದ್ದಾರೆ ಎಂದು ನನಗೆ ತಿಳಿದಿದೆ” ಎಂದು ಮೋದಿ ದೂರಿದರು.
“ಕಳೆದ 20 ವರ್ಷಗಳಲ್ಲಿ ಗುಜರಾತ್ ವಿರುದ್ಧ ಇದ್ದವರು ರಾಜ್ಯದ ಘನತೆ ಕುಂದಿಸುವ ಯಾವ ಅವಕಾಶವನ್ನೂ ಬಿಡಲಿಲ್ಲ. ಅವರು ನನ್ನನ್ನು ಅನೇಕ ಪದಗಳಲ್ಲಿ ನಿಂದಿಸಿದ್ದಾರೆ” ಎಂದು ಪ್ರತಿಪಕ್ಷಗಳನ್ನು ಟೀಕಿಸಿದರು.